Advertisement
ಇಂದಿನ ಆಧುನಿಕ ಯುಗದಲ್ಲಿ ಸಂವಹನ ಕಲೆ ಬಹಳ ಮಹತ್ವದ್ದಾಗಿದೆ. ಶಾಲಾ- ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಂವಹನ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು, ಉತ್ತಮ ನಾಯಕತ್ವ ಗುಣ ಹೊಂದಲು ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಸಂವಹನ ನಡೆಸಲು ವಿಷಯ ವಸ್ತು ತುಂಬಾ ಮುಖ್ಯವಾದದ್ದು. ಸಂವಹನ ಮತ್ತು ವಿಷಯ ವಸ್ತುಗಳ ಬಗ್ಗೆ ಜ್ಞಾನ ಇದ್ದರೆ ಒಳ್ಳೆಯದು.
Related Articles
Advertisement
ಸಂವಹನ ಕೌಶಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ- ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧನೆ ಮಾಡಬೇಕಿದೆ. ಶಾಲೆಗಳಲ್ಲಿ ಪ್ರಾಯೋಗಿಕ ಪಾಠಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಮೆದುಳಿಗೆ ಕೆಲಸ ಕೊಡುವ ಚಟುವಟಿಕೆಗಳಿಗೆ ಮಹತ್ವ ನೀಡಬೇಕು. ಯಾವುದಾದರೊಂದು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಯೋಚಿಸಿ ಪ್ರತ್ಯುತ್ತರ ನೀಡಬೇಕು. ಇದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆ ಬೆಳೆಯುವ ಜತೆಗೆ ಸಂವಹನದ ಕೌಶಲ ಕೂಡ ವೃದ್ಧಿಸುತ್ತದೆ.
ಸಂವಹನ ಕಲೆಯನ್ನು ತಮ್ಮಲ್ಲಿ ವೃದ್ಧಿಸಿಕೊಳ್ಳಲು ಆಲಿಸುವಿಕೆ ಕೂಡ ಅತೀ ಮುಖ್ಯ. ಇತರರು ಹೇಳುವ ಮಾಹಿತಿಯನ್ನು ಸಂಪೂರ್ಣವಾಗಿ ಆಲಿಸುವ ವ್ಯವಧಾನ ಇರಬೇಕು. ಬೇರೊಬ್ಬರು ನೀಡುವ ಮಾಹಿತಿ ಕೂಡ ನಮ್ಮ ಸಂವಹನ ವೃದ್ಧಿಗೆ ಕಾರಣವಾಗಬಹುದು. ಇನ್ನು, ಕೆಲವು ಬಾರಿ, ಮೈಕ್ ಸಿಕ್ಕಿದರೆ ಸಾಕು, ಮಾತನಾಡುವ ವ್ಯಕ್ತಿಗಳು ಇರುತ್ತಾರೆ. ಇದು ಉತ್ತಮ ಸಂವಹನದ ಗುಣವಲ್ಲ. ಯಾವುದೇ ವಿಚಾರದಲ್ಲಿ ಮಾತನಾಡುವ ಮೊದಲು ಅನೇಕ ಬಾರಿ ಯೋಚಿಸಬೇಕು. ನಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಾರದು. ಮಾತಿನಲ್ಲಿ ಕೀಳರಿಮೆ ಇಲ್ಲದೆ, ಬೇರೆಯವರ ಭಾವನೆಗಳಿಗೆ ಸ್ಪಂದಿಸುವ ಮನಸ್ಥಿತಿ ಇರಬೇಕು. ಅಲ್ಲದೆ, ಮಾತಿಗೂ, ದೇಹಭಾಷೆಗೂ ಹೊಂದಾಣಿಕೆ ಅತೀ ಮುಖ್ಯ. ಮಾತುಗಳೆಂದೂ ನೇರವಾಗಿರಬೇಕು. ಆವಶ್ಯಕತೆ ಇದ್ದರೆ ಮಾತ್ರ ಪುನರುಚ್ಚರಿಸುವ ಗುಣವನ್ನು ಸಂವಹನಕಾರ ಹೊಂದಿರಬೇಕು. ಒಟ್ಟಿನಲ್ಲಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಂವಹನ ಪ್ರಮುಖ ಮಾಧ್ಯಮವಾಗಿದೆ.
ಸಂವಹನ ಕಲೆ ವೃದ್ಧಿಸಲು ಆ್ಯಪ್ಇಂದಿನ ದಿನಗಳಲ್ಲಿ ತಂತ್ರಜ್ಞಾನ ವ್ಯವಸ್ಥೆ ಸಾಕಷ್ಟು ಮುಂದುವರಿದಿದ್ದು, ಸಂವಹನ ಕಲೆ
ವೃದ್ಧಿಸುವ ನಿಟ್ಟಿನಲ್ಲಿ ಆ್ಯಪ್ ಗಳು ಕೂಡ ಬಂದುಬಿಟ್ಟಿವೆ. ಅದರಲ್ಲಿಯೂ ಪ್ಲೇಸ್ಟೋರ್‌ನಲ್ಲಿ ಸೆಲ್ಫ್ ಲರ್ನಿಂಗ್ ಆ್ಯಪ್ ಗಳಿವೆ. ಸಂವಹನ ಕಲೆಗಳನ್ನು ವೃದ್ಧಿಸಲು ಕೆಲವೊಂದು ಸಂಸ್ಥೆಗಳು ವಿಶೇಷ ತರಗತಿಗಳನ್ನು ನಡೆಸುತ್ತವೆ. ಅದರಲ್ಲಿಯೂ, ಭಾಷಣ ಮಾಡುವ ಕಲೆ, ವೃತ್ತಿ ಸಂದರ್ಶನ ದಲ್ಲಿ ಯಾವ ರೀತಿ ಇರಬೇಕು? ನಮ್ಮ ದೇಹಭಾಷೆ ಸಹಿತ ಮತ್ತಿತರ ವಿಷಯಗಳನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಕೋರ್ಸ್‌ಗಳು ಈಗಾಗಲೇ ಪ್ರಾರಂಭವಾಗಿವೆ. ನವೀನ್ ಭಟ್ ಇಳಂತಿಲ