Advertisement

ಕರಾವಳಿಯಲ್ಲೊಂದು ಸಾಮರಸ್ಯ; ‘ಹೃದಯ’ಗೆದ್ದ ‘ಹಿದಾಯ’..!

03:40 AM Jul 13, 2017 | Team Udayavani |

ಮಹಾನಗರ: ಕರಾವಳಿಯಲ್ಲಿ ಕೋಮು ಸಂಬಂಧಿತ ವಿವಾದಗಳು ಕೆಲವೆಡೆ ಏಳುತ್ತಿದ್ದರೆ, ಸಾಮಾಜಿಕ ಸಂಘಟನೆಯೊಂದು ಕೋಮು ಸಾಮರಸ್ಯದ ಅನುಷ್ಠಾನದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದೆ. ಹಿದಾಯ ಫೌಂಡೇಶನ್‌ನ ತಂಡ ತನ್ನ ಸಾಮಾಜಿಕ ಜವಾಬ್ದಾರಿಯ ಕೆಲಸಗಳಿಂದ ಗುರುತಿಸಿಕೊಂಡಿದೆ.

Advertisement

ಘಟನೆ 1
ಮಂಗಳೂರು ಸರಿಪಳ್ಳ ರಸ್ತೆಯ ಅಳಪೆ ನಿವಾಸಿ 55ರ ವಯಸ್ಸಿನ ಮಹಿಳೆಯೊಬ್ಬರು ಅನಾರೋಗ್ಯ ಪೀಡಿತರು. ಗಂಡ ಹಾಗೂ ಇದ್ದ ಒಬ್ಬ ಮಗನೂ ಇಹಲೋಕಕ್ಕೆ ತ್ಯಜಿಸಿದ್ದಾರೆ. ಇರುವ ಜೋಪಡಿಯಲ್ಲಿ ಶೌಚಾಲಯವೂ ಇಲ್ಲ. ವಿದ್ಯುತ್‌ ಇಲ್ಲ. ಆ ಮನೆಗೆ ಭೇಟಿ ನೀಡಿದ ತಂಡ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ.

ಘಟನೆ 2
ವಾಮಂಜೂರು ದಿವ್ಯಜ್ಯೋತಿ ಶಾಲೆ ಹಿಂಬದಿ ವಾಸವಾಗಿರುವ‌ 44ರ ಹರೆಯದ ಅವಿವಾಹಿತರೊಬ್ಬರು 7 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರನ್ನು ಕುಟುಂಬದ ಓರ್ವ ಸದಸ್ಯ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿದ ತಂಡದ ಸದಸ್ಯರು ನಿರಂತರ ಔಷಧದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ಘಟನೆ 3
ಇರುವೈಲ್‌ನ ಕೆತ್ತಿಕಲ್‌ನ ಮಹಿಳೆಯೊಬ್ಬರು ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಮೂವರಿಗೆ ಅನಾರೋಗ್ಯ. ಭಾವೀ ಬದುಕಿನ ಬಗ್ಗೆ ಭರವಸೆಯೇ ಇಲ್ಲವಾಗಿದೆ. ಇವರಿಗೆ ತಂಡವು ಒಂದು ವರ್ಷದ ಮಟ್ಟಿಗೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತೀರ್ಮಾನಿಸಿದೆ.

ಘಟನೆ 4
ಮೂಡುಶೆಡ್ಡೆ ಶಿವನಗರದ ಮಹಿಳೆಯೊಬ್ಬರು ತನ್ನ ಗಂಡನ ಜತೆ ವಾಸಿಸುತ್ತಿದ್ದಾರೆ. ಅವರಿಗೆ ಮಕ್ಕಳಿಲ್ಲ. ಸಣ್ಣ ಜೋಪಡಿಯಲ್ಲಿ ವಿದ್ಯುತ್‌ ಕೂಡ ಇಲ್ಲ. ಇಲ್ಲಿಗೆ ಭೇಟಿ ನೀಡಿದ ತಂಡ, ವಿದ್ಯುತ್‌ ಸೌಲಭ್ಯ ಕಲ್ಪಿಸಲು ನಿರ್ಣಯಿಸಿದೆ. 

Advertisement

ಘಟನೆ 5
ವಾಮಂಜೂರು ಆದರ್ಶ ನಗರದ ವಿಧವೆಯೊಬ್ಬರಿಗೆ ಇರುವ 40ರ ವಯಸ್ಸಿನ ಮಗನಿಗೆ ಅನಾರೋಗ್ಯ. ಹೀಗಾಗಿ ಜೋಪಡಿಯಲ್ಲಿರುವ ಆ ಕುಟುಂಬಕ್ಕೆ ಪ್ರತಿ ತಿಂಗಳು ಆಹಾರ ಸಾಮಗ್ರಿ ಒದಗಿಸಲು ತಂಡ ತೀರ್ಮಾನಿಸಿದೆ.

ಹೀಗೇ ಮೂರು ಹಿಂದೂ, ಎರಡು ಕ್ರೈಸ್ತ ಕುಟುಂಬವನ್ನು ಒಂದೇ ದಿನ ಸಂದರ್ಶಿಸಿ ಅವರ ಸಮಸ್ಯೆಗೆ ಮುಸ್ಲಿಂ ತಂಡ ‘ಹಿದಾಯ ಫೌಂಡೇಶನ್‌’ ಸ್ಪಂದಿಸಿದೆ. ತಂಡದಲ್ಲಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಹಾಜಿ ಗೋಳ್ತಮಜಲು, ಆಸಿಫ್‌ ಡೀಲ್ಸ್‌ ಜುಬೈಲ್‌, ಬಶೀರ್‌ ಟಿ.ಕೆ. ಫರಂಗಿಪೇಟೆ, ಅಬ್ದುಲ್‌ ರಝಾಕ್‌ ಅನಂತಾಡಿ ಜತೆಗಿದ್ದರು.ಹಿದಾಯ ಫೌಂಡೇಶನ್‌ಗೆ ಮಾಹಿತಿ ನೀಡಿ ತಂಡದೊಂದಿಗೆ ವಾಮಂಜೂರು ಧರ್ಮಜ್ಯೋತಿ ಸೋಶಿಯಲ್‌ ಆರ್ಗನೈಸೇಶನ್‌ನ ಲಿಲ್ಲಿ ಮೇರಿ ಜತೆಯಾದರು.

ಸೇವೆಯೇ ನಮ್ಮ ಗುರಿ
‘ಆರೇಳು ವರ್ಷಗಳಿಂದ ಕರಾವಳಿಯ ಬಡ/ಅಶಕ್ತ ಕುಟುಂಬಗಳಿಗೆ ಜಾತಿ ಮತ ನೋಡದೇ ಸಹಕರಿಸುತ್ತಿರುವ ಹಿದಾಯ ಫೌಂಡೇಶನ್‌ ತಂಡವು ಕಾವಳಕಟ್ಟೆ ಎಂಬಲ್ಲಿ ಹಿದಾಯ ಕಾಲನಿಯನ್ನು ಹೊಂದಿದೆ. ಐದು ಎಕ್ರೆಯ ವಿಶಾಲ ಕಾಲನಿಯಲ್ಲಿ 60 ವಿಧವಾ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದೆ. ಅವರಿಗೆ ಸ್ವಾವಲಂಬಿ ಜೀವನದ ಪಾಠ ಕಲಿಸಿದೆ. ವಿಶೇಷ ಚೇತನ ಮಕ್ಕಳ ಶಾಲೆಯನ್ನೂ ತೆರೆದಿದೆ. ಕಷ್ಟದಲ್ಲಿರುವ ಸಹಸ್ರಾರು ಅನಾರೋಗ್ಯ ಪೀಡಿತರತ್ತ ಕರುಣೆ ತೋರಿದೆ. ಮುಸ್ಲಿಂ ಹಾಗೂ ಸಹೋದರ ಧರ್ಮದ ಸುಮಾರು 285 ಬಡ ಕುಟುಂಬಗಳಿಗೆ ಪ್ರತಿ ತಿಂಗಳು ನಿರಂತರ ರೇಶನ್‌ ಸಾಮಗ್ರಿ ಒದಗಿಸುತ್ತಿದೆ. ವಿದೇಶದಲ್ಲಿರುವ ಕರಾವಳಿಯ ಅನಿವಾಸಿ ಮುಸ್ಲಿಂ ಭಾರತೀಯರ ಸಹಕಾರ, ಊರಲ್ಲಿರುವ ಸಾಮಾಜಿಕ ಪ್ರಜ್ಞೆಯ ಬಂಧುಗಳು ಸೇರಿಕೊಂಡು ಈ ಫೌಂಡೇಶನ್‌ ಮೂಲಕ ಹೃದಯ ಗೆಲ್ಲುವ ಕೆಲಸವನ್ನು ಮಾಡಲಾಗುತ್ತಿದೆ’ ಎನ್ನುತ್ತಾರೆ ಹಿದಾಯ ಫೌಂಡೇಶನ್‌ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಹಾಜಿ ಗೋಳ್ತಮಜಲು.

Advertisement

Udayavani is now on Telegram. Click here to join our channel and stay updated with the latest news.

Next