Advertisement
ಏನಿದು ಕಾಮನ್‌ವೆಲ್ತ್?
Related Articles
Advertisement
1930ರಲ್ಲಿ ಆರಂಭವಾದ ಈ ಕೂಟಕ್ಕೆ ಅತೀ ಹೆಚ್ಚು ಬಾರಿ ಆಸ್ಟ್ರೇಲಿಯವೇ ಆತಿಥ್ಯ ವಹಿಸಿಕೊಂಡಿದೆ. ಅಂದರೆ 22 ಬಾರಿ ಕಾಮನ್‌ವೆಲ್ತ್ ಗೇಮ್ಸ್ ನಡೆದಿದ್ದು ಆಸ್ಟ್ರೇಲಿಯ 5 ಬಾರಿ ಆತಿಥ್ಯ ವಹಿಸಿಕೊಂಡಿದ್ದು, 2026ನೇಯದ್ದು 6ನೇ ಬಾರಿಗೆ ಆತಿಥ್ಯ ವಹಿಸಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲ 2006ರ ಅನಂತರ ವಿಕ್ಟೋರಿಯ ರಾಜ್ಯವೇ ಮೂರನೇ ಬಾರಿಗೆ ಆತಿಥ್ಯ ವಹಿಸಿಕೊಳ್ಳಲಿತ್ತು.
2026ರ ಆತಿಥ್ಯ ಯಾರದ್ದು?
ಸದ್ಯಕ್ಕೆ ಇದು ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಇದು 2023ರ ನಡುಘಟ್ಟ. ಲೆಕ್ಕ ಹಾಕಿ ಹೇಳುವುದಾದರೆ, ಕ್ರೀಡಾಕೂಟ ಆಯೋಜನೆಗೆ ಉಳಿದಿರುವುದು ಇನ್ನು 1000 ದಿನ ಮಾತ್ರ. ಇಷ್ಟು ದಿನದೊಳಗೆ ಬೇರೊಂದು ದೇಶ ಮುಂದೆ ಬಂದು, ತಯಾರಿ ನಡೆಸುವುದು ಕಷ್ಟ ಸಾಧ್ಯವೇ ಸರಿ. ಜತೆಗೆ ಎಲ್ಲವೂ ವಿಕ್ಟೋರಿಯ ರಾಜ್ಯವೇ ಆತಿಥ್ಯ ವಹಿಸಲಿದೆ ಎಂಬ ಕಾರಣದಿಂದಾಗಿ ಬೇರಾವ ದೇಶಗಳೂ ಸಿದ್ಧತೆಯನ್ನೂ ಮಾಡಿಕೊಂಡಿರುವುದಿಲ್ಲ. ಹೀಗಾಗಿಯೇ ಈ ಬಾರಿ ಕೂಟದ ಅಗತ್ಯತೆ ಬಗ್ಗೆಯೇ ಪ್ರಶ್ನೆ ಮೂಡುವಂತಾಗಿದೆ. ಜತೆಗೆ ವಿಕ್ಟೋರಿಯ ರಾಜ್ಯದ ಈ ನಡೆಯಿಂದ ಕಾಮನ್‌ವೆಲ್ತ್ ಗೇಮ್ಸ್ ನಡೆಸುವ ಕಾಮನ್‌ವೆಲ್ತ್ ಫೆಡರೇಶನ್ ಒಂದು ರೀತಿಯಲ್ಲಿ ಅತಂತ್ರಕ್ಕೆ ಸಿಲುಕುವಂತಾಗಿದೆ.
ವಿಕ್ಟೋರಿಯಾ ಹಿಂದೆ ಸರಿಯಲು ಕಾರಣವೇನು?
ಈ ರಾಜ್ಯದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರೋಸ್ ಪ್ರಕಾರ 2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಸಂಪತ್ತಿನ ಕಾರಣದಿಂದ ಆಯೋಜನೆ ಮಾಡಲಾಗುತ್ತಿಲ್ಲ. ಅಂದರೆ ಈ ಆವೃತ್ತಿ ಆಯೋಜಿಸಲು ಬೇಕಾಗಿರುವ ವೆಚ್ಚ ಸರಿ ಸುಮಾರು 5 ಬಿಲಿಯನ್ ಅಮೆರಿಕನ್ ಡಾಲರ್(41 ಸಾವಿರ ಕೋಟಿ ರೂ.)ಗೆ ಏರಿಕೆಯಾಗಿದೆ. ಆರಂಭದಲ್ಲಿ ಕೇವಲ 14 ಸಾವಿರ ಕೋಟಿ ರೂ.ಗಳಲ್ಲಿ ಪಂದ್ಯ ಆಯೋಜನೆ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಈಗ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ನಾವು ಹಿಂದೆ ಸರಿಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಮನ್‌ವೆಲ್ತ್ ಫೆಡರೇಶನ್, ವಿಕ್ಟೋರಿಯಾದ ಗೇಮ್ಸ್ ಆಯೋಜನೆ ತಂತ್ರಗಾರಿಕೆಯ ಕಾರಣದಿಂದ ವೆಚ್ಚ ಹೆಚ್ಚಾಗಿದೆ. ಅವರು ವಿಶಿಷ್ಟ ಪ್ರಾದೇಶಿಕ ವಿತರಣ ಮಾದರಿಯನ್ನು ಅನುಸರಿಸಲು ಮುಂದಾಗಿತ್ತು. ಇದರಿಂದಾಗಿ ಬೇರೆ ಬೇರೆ ಕಡೆಗಳಲ್ಲಿ ಕ್ರೀಡಾ ಗ್ರಾಮಗಳನ್ನು, ಮೂಲಭೂತ ಸೌಕರ್ಯಗಳನ್ನು ಮತ್ತು ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಇದರಿಂದಲೇ ವೆಚ್ಚದ ಅಂದಾಜು ಹೆಚ್ಚಾಗಿದೆ ಎಂದಿದೆ.
ಆರಂಭದಿಂದಲೇ ಸಮಸ್ಯೆ
2026ರ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ವಿಚಾರದಲ್ಲಿ ಆರಂಭದಿಂದಲೂ ಸಮಸ್ಯೆ ಇದೆ. ಈ ಹಿಂದೆ ಆತಿಥ್ಯದಿಂದ ಕೌಲಾಲಂಪುರ, ಕಾರ್ಡಿಫ್, ಕಾಲ್ಗೆರಿ, ಎಡ್‌ಮೌಂಟನ್ ಮತ್ತು ಅಡಿಲೇಡ್ ಹಿಂದೆ ಸರಿದವು. ಅಲ್ಲದೆ 2022ರ ಆತಿಥ್ಯವನ್ನು ಡರ್ಬನ್ ವಹಿಸಬೇಕಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕುವಲ್ಲಿ ವಿಳಂಬವಾಗಿದ್ದರಿಂದ ಅನಿವಾರ್ಯವಾಗಿ ಬರ್ಮಿಂಗ್‌ಹ್ಯಾಮ್ ಆತಿಥ್ಯ ವಹಿಸಿಕೊಂಡಿತು. ಈ ಮೊದಲಿನ ಯೋಜನೆ ಪ್ರಕಾರ, 2026ರ ಆತಿಥ್ಯವನ್ನು ಬರ್ಮಿಂಗ್‌ಹ್ಯಾಮ್ ವಹಿಸಿಕೊಳ್ಳಬೇಕಾಗಿತ್ತು. 2022ರ ಎಪ್ರಿಲ್‌ನಲ್ಲಿ ವಿಕ್ಟೋರಿಯಾ ರಾಜ್ಯವು ಆತಿಥ್ಯ ವಹಿಸುವುದಾಗಿ ಘೋಷಣೆ ಮಾಡಿತ್ತು. ಈ ಮಧ್ಯೆ ವಿಕ್ಟೋರಿಯಾವು ಹಿಂದೆ ಸರಿದ ಕೂಡಲೇ, ಆಸ್ಟ್ರೇಲಿಯದ ಇತರೆ ರಾಜ್ಯಗಳಾದ ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ವೆಸ್ಟ್ರನ್ ಆಸ್ಟ್ರೇಲಿಯ, ಸೌತ್ ಆಸ್ಟ್ರೇಲಿಯ ಮತ್ತು ಟಸೆನಿಯ ರಾಜ್ಯಗಳು ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಮಾಡುವ ಯಾವುದೇ ಚಿಂತನೆ ನಮ್ಮಲ್ಲಿ ಇಲ್ಲ ಎಂದು ಘೋಷಣೆ ಮಾಡಿಬಿಟ್ಟಿವೆ.
ಏನಿದು ವಿಶಿಷ್ಟ ಪ್ರಾದೇಶಿಕ ವಿತರಣಾ ಮಾದರಿ
ಇದೇ ಮೊದಲ ಬಾರಿಗೆ ವಿಕ್ಟೋರಿಯ ರಾಜ್ಯವು ಬೇರೆ ರೀತಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಗೆ ಮುಂದಾಗಿತ್ತು. ಅಂದರೆ ಇದುವರೆಗೆ ಕಾಮನ್‌ವೆಲ್ತ್ ಗೇಮ್ಸ್ ಅನ್ನು ದೇಶವೊಂದರ ಒಂದೇ ನಗರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಕ್ಟೋರಿಯದ ಬೇರೆ ಬೇರೆ 5 ನಗರಗಳಲ್ಲಿ ಆಯೋಜನೆ ಮಾಡಲು ಮುಂದಾಗಿತ್ತು. ಅಂದರೆ ಗೀಲಾಂಗ್, ಬೆಂಡಿಗೋ, ಬೆಲ್ಲಾರತ್, ಗಿಪ್ಸ್‌ಲ್ಯಾಂಡ್ ಮತ್ತು ಶೆಪಾರ್ಟನ್. 20 ಗೇಮ್ಸ್ ಮತ್ತು ಒಂಬತ್ತು ಪ್ಯಾರಾ ಗೇಮ್ಸ್‌ಗಳನ್ನು ನಡೆಸಲು ಚಿಂತನೆ ನಡೆಸಿತ್ತು. .
ಸ್ಟಾರ್‌ಗಳ ಸಮಸ್ಯೆ
ಒಲಿಂಪಿಕ್ಸ್‌ನಲ್ಲಿ ಸುಮಾರು 200 ದೇಶಗಳು ಭಾಗಿಯಾಗುತ್ತವೆ. ಅಂದರೆ ಅಮೆರಿಕ, ಚೀನ, ರಷ್ಯಾ ಸಹಿತ ಪ್ರಮುಖ ದೇಶಗಳು ಇದರಲ್ಲಿ ಭಾಗಿಯಾಗಿ ಕ್ರೀಡಾಕೂಟದ ಮೆರಗನ್ನು ಹೆಚ್ಚು ಮಾಡುತ್ತವೆ. ಆದರೆ ಕಾಮನ್‌ವೆಲ್ತ್‌ನಲ್ಲಿ ಈ ಯಾವುದೇ ದೇಶಗಳು ಇಲ್ಲ. ಇರುವ ದೇಶಗಳೆಂದರೆ, ಭಾರತ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯದಂಥ ದೇಶಗಳು ಮಾತ್ರ. ಅಲ್ಲದೆ ಆ್ಯತ್ಲೆಟಿಕ್ಸ್‌ನಂಥ ಕ್ರೀಡೆಗಳ ಹೆಚ್ಚಾಗಿರುವುದರಿಂದ ಈ ದೇಶಗಳಲ್ಲಿ ದೊಡ್ಡ ಸ್ಟಾರ್‌ಗಳು ಕಡಿಮೆ.
ಏಳು ದೇಶಗಳ ಆತಿಥ್ಯ
1930ರಲ್ಲಿ ಆರಂಭವಾದ ಈ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಇದುವರೆಗೆ ಕೇವಲ ಏಳು ದೇಶಗಳು ಮಾತ್ರ ಆಯೋಜನೆ ಮಾಡಿವೆ. ಅಂದರೆ ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಜಮೈಕಾ, ಮಲೇಷ್ಯಾ ಮತ್ತು ಭಾರತ. ಜಮೈಕಾ, ಮಲೇಷ್ಯಾ ಮತ್ತು ಭಾರತ ಇದುವರೆಗೆ ಒಮ್ಮೆ ಮಾತ್ರ ಆಯೋಜನೆ ಮಾಡಿವೆ. ಆಸ್ಟ್ರೇಲಿಯ ಇದುವರೆಗೆ ಆರು ಬಾರಿ ಆತಿಥ್ಯ ವಹಿಸಿಕೊಂಡಿದೆ.
ದಿನದಿಂದ ದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿರುವುದೇಕೆ?
ಕಾಮನ್‌ವೆಲ್ತ್ ಗೇಮ್ಸ್ ದಿನದಿಂದ ದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿರುವುದಕ್ಕೆ ಬೇರೆ ಬೇರೆ ಕಾರಣಗಳುಂಟು. ಅದರಲ್ಲಿ ಪ್ರಮುಖ ಕಾರಣವೇ ಹಣಕಾಸಿನದ್ದು. ಸಾಮಾನ್ಯವಾಗಿ ಒಲಿಂಪಿಕ್ಸ್ ಆಯೋಜನೆ ವೇಳೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಆತಿಥ್ಯ ವಹಿಸುವ ದೇಶಗಳಿಗೆ ಧನ ಸಹಾಯ ಮಾಡುತ್ತದೆ. ಆದರೆ ಕಾಮನ್‌ವೆಲ್ತ್ ಫೆಡರೇಶನ್ ಯಾವುದೇ ಧನ ಸಹಾಯ ಮಾಡುವುದಿಲ್ಲ.
ಇದಕ್ಕೆ ಬದಲಾಗಿ ಆತಿಥ್ಯ ವಹಿಸುವ ದೇಶವೇ ಇಂತಿಷ್ಟು ಅಂತ ಶುಲ್ಕ ಕಟ್ಟಬೇಕು. ಅಂದರೆ ಈಗ ವಿಕ್ಟೋರಿಯಾ ರಾಜ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಸಲು 41 ಸಾವಿರ ಕೋಟಿ ರೂ. ಬೇಕು. ಇದರಲ್ಲಿ ಒಂದೇ ಒಂದು ರೂಪಾಯಿಯನ್ನು ಕಾಮನ್‌ವೆಲ್ತ್ ಫೆಡರೇಶನ್ ನೀಡುವುದಿಲ್ಲ. ಆದರೆ 2020ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ 1.7 ಬಿಲಿಯನ್ ಡಾಲರ್ ಹಣ ನೀಡಿತ್ತು. ಈ ಕ್ರೀಡಾಕೂಟಕ್ಕೆ ಒಟ್ಟಾರೆಯಾಗಿ ವೆಚ್ಚವಾದ ಹಣ 12 ಬಿಲಿಯನ್ ಡಾಲರ್. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಇಷ್ಟೇ ಹಣ ನೀಡಲಿದೆ.