ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ 22ನೇ ಕಾಮನ್‌ವೆಲ್ತ್ ಗೇಮ್ಸ್ ಮುಗಿದಿದ್ದೂ ಆಯಿತು, ಭಾರತ ತನ್ನ ಇತಿಹಾಸದಲ್ಲೇ 3ನೇ ಶ್ರೇಷ್ಠ ಸಾಧನೆ ಮಾಡಿದ್ದೂ ಆಯಿತು. ಅದೆಲ್ಲ ಈಗ ಇತಿಹಾಸ ಮಾತ್ರ. ಅದರ ಬೆನ್ನಲ್ಲೇ ಭಾರತೀಯ ಅಥ್ಲೀಟ್‌ಗಳ ಪಡೆ 18ನೇ ಏಷ್ಯನ್ ಗೇಮ್ಸ್‌ಗೆ ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಕೂಟವಿರುವುದು ಇಂಡೋನೇಷ್ಯಾದ ಜಕಾರ್ತದಲ್ಲಿ. ಇಲ್ಲೂ ಮಿಂಚು ಹರಿಸಲು ಆಟಗಾರರು ಬೆವರು ಹರಿಸಿದ್ದಾರೆ.
ಪ್ರತಿಬಾರಿ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಒಟ್ಟೊಟ್ಟಿಗೆ ಬರುತ್ತವೆ. ಅದು ಅಥ್ಲೀಟ್‌ಗಳ ಪಾಲಿಗೆ ಸ್ವಲ್ಪ ಸವಾಲಿನ ಕೆಲಸ.ಈಗಷ್ಟೇ ಕೂಟವೊಂದನ್ನು ಮುಗಿಸಿ ದಣಿದಿರುವ ಅವರು ಮತ್ತೂಂದು ಮಹಾಕೂಟಕ್ಕೆ, ಮಹಾ ಸವಾಲಿಗೆ ಸಿದ್ಧವಾಗಬೇಕೆಂದರೆ ಕಷ್ಟದ ಕೆಲಸವೇ. ಜೊತೆಗೆ ಎರಡೂ ಕೂಟಗಳಲ್ಲೂ ಪ್ರದರ್ಶನವನ್ನು ಇನ್ನಷ್ಟು ವೃದ್ಧಿಸಬೇಕಾದ ಅನಿವಾರ್ಯತೆ. ಒಂದು ಕೂಟಕ್ಕಿಂತ ಇನ್ನೊಂದು ಕೂಟದಲ್ಲಿ ಅದ್ಭುತ ಫಲಿತಾಂಶ ಪಡೆಯಬೇಕಾದ ಒತ್ತಡ.
ಭಾರತೀಯ ಅಥ್ಲೀಟ್‌ಗಳು ಯಾವಾಗಲೂ ಕಾಮನ್‌ವೆಲ್ತ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಕಾಮನ್‌ವೆಲ್ತ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಬಿಟ್ಟರೆ ಹೇಳಿಕೊಳ್ಳುವಂತಹ ಎದುರಾಳಿಗಳು ಇಲ್ಲದಿರುವುದೇ ಇದಕ್ಕೆ ಕಾರಣ. ಆದರೆ ಏಷ್ಯನ್ ಗೇಮ್ಸ್ ಸ್ವಲ್ಪ ಕಷ್ಟದ ಕೂಟ. ಇಲ್ಲಿ ಚೀನಾ, ಹಾಂಕಾಂಗ್, ಇರಾನ್, ಜಪಾನ್, ಕಜಕಸ್ತಾನ, ಉಜ್ಬೆಕಿಸ್ತಾನಗಳು ಸ್ಪರ್ಧಿಸುತ್ತವೆ. ಇವೆಲ್ಲ ಅಥ್ಲೆಟಿಕ್ಸ್‌ನಲ್ಲಿ ವಿಶ್ವಮಟ್ಟದ ಕೂಟಗಳಲ್ಲೂ ಮಿಂಚಬಲ್ಲ ರಾಷ್ಟ್ರಗಳು. ಇವರನ್ನೆಲ್ಲ ಎದುರಿಸಿ ಗೆಲ್ಲಬೇಕಾದರೆ ಭಾರತ ಅದ್ಭುತ ತಯಾರಿ ಮಾಡಿಕೊಳ್ಳಲೇಬೇಕು.
ಚೀನಾ ಈ ಕೂಟಕ್ಕೆ ಎ ದರ್ಜೆಯ ತಂಡ ಕಳುಹಿಸುವುದಿಲ್ಲ. ಅದು ಉದಯೋನ್ಮುಖ ತಾರೆಯರನ್ನು, ತಾನು ಪರೀಕ್ಷೆಗೊಳಪಡಿಸಲು ಬಯಸಿದವರನ್ನು ಕಣಕ್ಕಿಳಿಸುತ್ತದೆ. ಒಲಿಂಪಿಕ್ಸ್‌ನಲ್ಲಿ ವಿಶ್ವದಲ್ಲೇ 2ನೇ ಸರ್ವಶ್ರೇಷ್ಠ ಪ್ರದರ್ಶನ ನೀಡುವ ಈ ದೇಶಕ್ಕೆ ಏಷ್ಯನ್ ಗೇಮ್ಸ್ ಒಂದು ಔಪಚಾರಿಕ ಕೂಟವಷ್ಟೇ. ಆದರೆ ಭಾರತವೂ ಸೇರಿದಂತೆ ಉಳಿದ ರಾಷ್ಟ್ರಗಳಿಗೆ ಇದು ಒಲಿಂಪಿಕ್ಸ್‌ಗೆ ತಾವು ಹೇಗೆ ಸಿದ್ಧವಾಗಿದ್ದೇವೆ? ಎಂಬುದನ್ನು ಪರೀಕ್ಷಿಸಿಕೊಳ್ಳಲು ಒಂದು ಸದವಕಾಶ. ಏಷ್ಯನ್ ಗೇಮ್ಸ್‌ಗೆ ಹೋಲಿಸಿದರೆ ಕಾಮನ್‌ವೆಲ್ತ್‌ನಲ್ಲಿ ಚೀನಾದಂತಹ ರಾಷ್ಟ್ರದ ಸವಾಲೇ ಇಲ್ಲ. ಆದ್ದರಿಂದ ಕಾಮನ್‌ವೆಲ್ತ್‌ನಲ್ಲಿ ಗೆಲ್ಲುವ ಚಿನ್ನಕ್ಕೆ ಏಷ್ಯನ್ ಗೇಮ್ಸ್ ಚಿನ್ನದ ಮಹತ್ವವೂ ಇಲ್ಲ!
ಚೀನಾ, ಜಪಾನ್ ಅಸಾಮಾನ್ಯ
ಇದುವರೆಗೆ ನಡೆದಿರುವ 17 ಕೂಟಗಳಿಂದ ಸೇರಿ ಚೀನಾ 2895 (1342 ಚಿನ್ನ, 900 ಬೆಳ್ಳಿ, 653 ಕಂಚು), ಜಪಾನ್ 2850 (957 ಚಿನ್ನ, 980 ಬೆಳ್ಳಿ, 913 ಕಂಚು) ಗೆದ್ದು ಅಸಾಮಾನ್ಯ ಸಾಧನೆ ಮಾಡಿವೆ. ಈ ಲೆಕ್ಕಾಚಾರದಲ್ಲಿ ಭಾರತಕ್ಕೆ 6ನೇ ಸ್ಥಾನ. ಅದು 616 (139 ಚಿನ್ನ, 178 ಬೆಳ್ಳಿ, 299 ಕಂಚು) ಪದಕ ಗೆದ್ದಿದೆ. ಏಷ್ಯನ್ ಗೇಮ್ಸ್‌ನಲ್ಲಿ ಈ 6ನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೇರಿದರೆ ಒಲಿಂಪಿಕ್ಸ್‌ನಲ್ಲಿ ಕನಿಷ್ಠ 20ನೇ ಸ್ಥಾನಕ್ಕಾದರೂ ಬರಲು ಸಾಧ್ಯವಿದೆ. ಅದಕ್ಕಾಗಿ ಈ ಕೂಟ ಭಾರತಕ್ಕೆ ಬಹಳ ಮಹತ್ವದ್ದು