Advertisement

ಕಾಮನ್ವೆಲ್ತ್‌ ಚಿನ್ನ ವಿಜೇತೆ ಸಂಜಿತಾ ನಿಷೇಧ ತೆರವು

12:30 AM Jan 24, 2019 | |

ಹೊಸದಿಲ್ಲಿ: ತಾನು ಮಾಡದ ತಪ್ಪಿನಿಂದ ಶಿಕ್ಷೆ ಅನುಭವಿಸುತ್ತಿದ್ದ ಭಾರತದ ಖ್ಯಾತ ವೇಟ್‌ಲಿಫ್ಟರ್‌, ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ಕೆ. ಸಂಜಿತಾ ಚಾನು ಈಗ ನಿರಾಳಗೊಂಡಿದ್ದಾರೆ. 

Advertisement

ಉದ್ದೀಪನ ಸೇವನೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಿಂದ ಅವರ ಮೇಲೆ ಹೇರಿದ್ದ ಪರೀûಾರ್ಥ ನಿಷೇಧವನ್ನು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಒಕ್ಕೂಟ (ಐಡಬ್ಲ್ಯುಎಫ್) ತೆರವು ಮಾಡಿದೆ. ಆದರೆ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಮುಂದೆ ನೀಡಲಾಗುವುದು ಎಂದು ಕುಸ್ತಿ ಒಕ್ಕೂಟ ತಿಳಿಸಿದೆ.

ಮೂತ್ರ ಪರೀಕ್ಷೆಯ ಮಾದರಿಯನ್ನು ಕಳಿಸುವಾಗ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಒಕ್ಕೂಟ ಮಾಡಿದ ಎಡವಟ್ಟಿನಿಂದ ಸಂಜಿತಾ ಶಿಕ್ಷೆ ಅನುಭವಿಸುವಂತಾಗಿತ್ತು. ಸಂಜಿತಾ ಅವರಿಗೆ ಸಂಬಂಧಿಸಿದ ಮೂತ್ರ ಪರೀಕ್ಷೆ ಮಾದರಿ ಸಂಖ್ಯೆಯನ್ನು ಕುಸ್ತಿ ಒಕ್ಕೂಟ ನೀಡಿರಲಿಲ್ಲ. ಬದಲಿಗೆ ಎರಡು ಬೇರೆ ಬೇರೆ ಸಂಖ್ಯೆಯನ್ನು ತನ್ನ ವರದಿಯಲ್ಲಿ ಉಲ್ಲೇಖೀಸಿತ್ತು. ವಿಸ್ತೃತ ವಿಚಾರಣೆಯಲ್ಲಿ ಇದು ಪತ್ತೆಯಾದ ಹಿನ್ನೆಲೆಯಲ್ಲಿ ನಿರ್ದೋಷಿಯೆಂದು ತೀರ್ಮಾನವಾಗಿದೆ. ವೇಟ್‌ಲಿಫ್ಟಿಂಗ್‌ ಒಕ್ಕೂಟದ ಈ ಕ್ರಮಕ್ಕೆ ಯಾವ ಶಿಕ್ಷೆ ಇದೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕು.

ಘಟನೆಯ ಹಿನ್ನೆಲೆ
2017 ನವೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮುನ್ನ ಸಂಜಿತಾ ಅವರ ಮೂತ್ರದ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಡಿ. 20ಕ್ಕೆ ಪರೀಕ್ಷಾ ವರದಿ ಬಂತು. 2018ರ ಮೇ 15ಕ್ಕೆ ಸಂಜಿತಾ ನಿಷೇಧಿತ ಅನಾಬೊಲಿಕ್‌ ಉದ್ದೀಪನ ಸೇವಿಸಿದ್ದಾರೆಂದು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಒಕ್ಕೂಟ ತಿಳಿಸಿತು. ಜತೆಗೆ ನಿಷೇಧವನ್ನೂ ಹೇರಿತು. ಇದಕ್ಕೂ ಒಂದು ತಿಂಗಳ ಮುನ್ನ ಎಪ್ರಿಲ್‌ನಲ್ಲೇ ನಡೆದ ಕಾಮನ್ವೆ ವೆಲ್ತ್‌ ಕ್ರೀಡಾಕೂಟದಲ್ಲಿ ಸಂಜಿತಾ ಚಿನ್ನ ಗೆದ್ದರು.  ಸೆ. 11ರಂದು ಬಂದ ಬಿ ಮಾದರಿ ಪರೀಕ್ಷಾ ವರದಿಯಲ್ಲಿ ಸಂಜಿತಾ ಉದ್ದೀಪನ ಸೇವಿಸಿಲ್ಲವೆಂದು ಖಚಿತವಾಯಿತು. ಅಕ್ಟೋಬರ್‌ ತಿಂಗಳ ವೇಳೆ ನಡೆದ ವಿಚಾರಣೆ ವೇಳೆ, ವೇಟ್‌ಲಿಫ್ಟಿಂಗ್‌ ಒಕ್ಕೂಟ ಏನೋ ವ್ಯತ್ಯಾಸವಾಗಿದೆ ಎಂದು ಒಪ್ಪಿಕೊಂಡಿತು. 2019, ಜ. 22ರಂದು ಸಂಜಿತಾ ಮೇಲಿನ ಪರೀಕ್ಷಾರ್ಥ ನಿಷೇಧ ತೆರವು ಮಾಡಲಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಈ ಮಾನಹಾನಿಗೆ ಪರಿಹಾರವೇನು?
ತಪ್ಪು ಮಾಡದಿದ್ದರೂ ತಪ್ಪು ಮಾಡಿದ್ದಾರೆಂದು ವರದಿ ಬಂದ ಕಾರಣ ಸಂಜಿತಾ ಕಳೆದ 9 ತಿಂಗಳಿನಿಂದ ನಿಷೇಧದಲ್ಲಿದ್ದರು. ಅದರ ಪರಿಣಾಮ ಆಕೆ ಏಶ್ಯಡ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕೂಟವನ್ನು ಕಳೆದುಕೊಂಡಿದ್ದಾರೆ. ಇಲ್ಲಿ ಪದಕ ಗೆಲ್ಲುವ ಅಮೂಲ್ಯ ಅವಕಾಶವನ್ನು ಅವರು ಹೊಂದಿದ್ದರು. ಜತೆಗೆ ಅವರ ಗೌರವಕ್ಕೂ ಧಕ್ಕೆಯಾಗಿದೆ. ಅಷ್ಟು ಮಾತ್ರವಲ್ಲ ಈ ನಿಷೇಧಾವಧಿಯಲ್ಲಿ ಆಕೆ ತೀವ್ರ ಮಾನಸಿ ಸಂಕಟ ಅನುಭವಿಸುವಂತಾಗಿತ್ತು. ಸಹಜವಾಗಿ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಒಕ್ಕೂಟದ ಈ ಎಡವಟ್ಟಿನ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಕಾಶ ಸಂಜಿತಾಗಿದೆ. ಆದರೂ ಆಕೆಗಾಗಿರುವ ಈ ನಷ್ಟಕ್ಕೆ ಪರಿಹಾರವೇನು ಎನ್ನುವುದು ಪ್ರಶ್ನೆಯಾಗಿದೆ.

Advertisement

“ನಿಷೇಧ ತೆರವಾಗಿರುವುದರಿಂದ ನಾನು ನಿರಾಳಗೊಂಡಿದ್ದೇನೆ. ನಾನು ಯಾವತ್ತೂ ನಿಷೇಧಿತ ಉದ್ದೀಪನ ಸೇವಿಸಿಯೇ ಇಲ್ಲ. ಈಗ ಅದು ಸಾಬೀತಾಗಿದೆ. ರಾಷ್ಟ್ರೀಯ ಶಿಬಿರ ಸೇರಿಕೊಳ್ಳಲು ನನಗೆ ಕರೆ ಬಂದಿದೆ. ಕೂಡಲೇ ಭಾರತ ತಂಡವನ್ನು ಕೂಡಿಕೊಳ್ಳಲಿದ್ದೇನೆ. ಆದರೂ ಇಷ್ಟು ತಿಂಗಳು ನಾನು ಅನುಭವಿಸಿದ್ದ ನೋವು ನನಗೇ ಗೊತ್ತು. ನನಗೆ ಜೀವನವೇ ವ್ಯರ್ಥವೆನಿಸಿತ್ತು.
ಸಂಜಿತಾ ಚಾನು

Advertisement

Udayavani is now on Telegram. Click here to join our channel and stay updated with the latest news.

Next