ಬರ್ಮಿಂಗ್‌ಹ್ಯಾಮ್: ಪುರುಷರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಮಿತ್ ಪಂಘಲ್ ಮತ್ತು ಮೊಹಮ್ಮದ್ ಹುಸ್ಸಮುದ್ದೀನ್ ಕ್ವಾರ್ಟರ್ ಫೈನಲ್‌ಗೆ ಓಟ ಬೆಳೆಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ 51 ಕೆಜಿ ಫ್ಲೈವೇಟ್ ವಿಭಾಗದಲ್ಲಿ ವನೌಟುವಿನ ನಮ್ರಿ ಬೆರ್ರಿ ಅವರನ್ನು ಮಣಿಸಿದರು. ಮೊಹಮ್ಮದ್ ಹುಸೇನ್ 57 ಕೆಜಿ ವಿಭಾಗದಲ್ಲಿ ಬಾಂಗ್ಲಾದೇಶದ ಸಲೀಂ ಹೊಸೇನ್ ಅವರನ್ನು 5-0 ಅಂತರದಿಂದ ಪರಾಭವಗೊಳಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ಅಮಿತ್ ಪಂಘಲ್ ಪಾಲ್ಗೊಳ್ಳುತ್ತಿರುವ ಮೊದಲ ದೊಡ್ಡ ಕ್ರೀಡಾಕೂಟ ಇದಾಗಿದೆ. ಕ್ವಾರ್ಟರ್ ಫೈನಲ್ ದಾಟಿದರೆ ಅವರು 2ನೇ ಗೇಮ್ಸ್ ಪದಕ ಜಯಿಸಲಿದ್ದಾರೆ. ಕಳೆದ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಪಂಘಲ್ ಅವರದಾಗಿತ್ತು. ಸ್ಕಾಟ್ಲೆಂಡ್‌ನ 20 ವರ್ಷದ ಲೆನ್ನನ್ ಮುಲ್ಲಿಗನ್ ಇವರ ಮುಂದಿನ ಎದುರಾಳಿ.
ಹುಸ್ಸಮುದ್ದೀನ್ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು.