ಗೋಲ್ಡ್‌ಕೋಸ್ಟ್: ಪ್ರತಿಷ್ಠಿತ ಕ್ರೀಡಾ ಕೂಟಗಳ ವೇಳೆ ಕ್ರೀಡಾಭಿಮಾನಿಗಳಿಗೆ ರಸದೌತಣ ಸಹಜ. ಅವುಗೆಳೆಡೆಯಲ್ಲಿ ಕೆಲವು ಕೂತೂಹಲಕಾರಿ ಸಂಗತಿಗಳು ಇಣುಕುವುದೂ ಇದೆ. ಪ್ರತಿಯೊಂದು ಪ್ರತಿಷ್ಠಿತ ಕ್ರೀಡಾಕೂಟದ ಸಂದರ್ಭವೂ ಎಲ್ಲರ ಕುತೂಹಲ ಕೆರಳಿಸುವ ಇನ್ನೊಂದು ಸಂಗತಿಯೆಂದರೆ ಅಲ್ಲಿ ವಿತರಿಸಲಾಗುವ ಕಾಂಡೋಮ್‌ಗಳ ಸಂಖ್ಯೆ. ಈ ಕಾಮನ್ವೆಲ್ತ್‌ನಲ್ಲೂ ಕಾಂಡೋಮ್ ಕಾರುಬಾರು ಜೋರಾಗಿಯೇ ಇದೆ.
ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವವರಿಗೆ ಒಟ್ಟು 2,25,000 ಕಾಂಡೋಮ್‌ಗಳು ವಿತರಣೆಗೆ ತಯಾರಾಗಿವೆ!
ಗೇಮ್ಸ್‌ನಲ್ಲಿ ಬಾಗಿಯಾಗುವ ಆ್ಯತ್ಲೀಟ್‌ಗಳು, ಅಧಿಕಾರಿಗಳಿಗೆ 2,22,000 ಕಾಂಡೋಮ್ಸ್, 17,000 ಟಾಯ್ಲೆಟ್ ಪೇಪರ್‌ಗಳು, ಉಚಿತ ಐಸ್‌ಕ್ರೀಮ್‌ಗಳನ್ನು ವಿತರಿಸಲು ಆಯೋಜಕರು ತಯಾರಿ ನಡೆಸುತ್ತಿದ್ದಾರೆ.
ಸುಮಾರು 6,600 ಆ್ಯತ್ಲೀಟ್‌ಗಳು, ಅಧಿಕಾರಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು ಅವರಿಗೆಲ್ಲರಿಗೂ ಆರಾಮದಾಯಕ ಮತ್ತು ಅಷ್ಟೇ ಸುರಕ್ಷಾ ಸೌಲಭ್ಯ ಒದಗಿಸಲು ಉದ್ದೇಶಿಸಿರುವ ಆಯೋಜಕರು ಅತಿಥಿಗಳ ಲೈಂಗಿಕ ಆರೋಗ್ಯವನ್ನು ಕಾಪಾಡುವ ನೆಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಕಾಂಡೋಮ್‌ಗಳನ್ನು ವಿತರಿಸಲು ಯೋಚಿಸಿದ್ದಾರೆ.ದಿನವೊಂದಕ್ಕೆ ಉಚಿತ ಮೂರು ಕಾಂಡೋಮ್‌ಗಳಂತೆ 11 ದಿನಗಳ ವರೆಗೆ ಪ್ರತಿಯೊಬ್ಬ ಆ್ಯತ್ಲೀಟ್/ಅಧಿಕಾರಿ ಸುಮಾರು 34 ಕಾಂಡೋಮ್‌ಗಳನ್ನು ಪಡೆಯಲಿದ್ದಾರೆ.
ಒಲಿಂಪಿಕ್ಸ್ ಹೊರತುಪಡಿಸಿ ಹಿಂದಿನ ಕ್ರೀಡಾ ಕೂಟಗಳಿಗೆ ಹೋಲಿಸಿದರೆ ಅತ್ಯಧಿಕ ಉಚಿತ ಕಾಂಡೋಮ್‌ಗಳನ್ನು ವಿತರಿಸಿದ ಕೀರ್ತಿ ಗೋಲ್ಡ್ ಕೋಸ್ಟ್‌ಗೆ ಸಲ್ಲುತ್ತದೆ.ಇತ್ತೀಚೆಗೆ ದಕ್ಷಿಣ ಕೊರಿಯಾದ ಪಿಯಾಂಗ್‌ಚಾಂಗ್ ವಿಂಟರ್ ಒಲಿಂಪಿಕ್ಸ್ ಸಂದರ್ಭದಲ್ಲಿ 1,11,000 ಕಾಂಡೋಮ್ಸ್, ರಿಯೋ ಒಲಿಂಪಿಕ್ಸ್ ವೇಳೆ 4,50,000 ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು. ಲೈಂಗಿಕ ರೋಗಗಳು, ಝಿಕಾದಂತಹ ಅಪಾಯಕಾರಿ ರೋಗಗಳು ಹರಡುವುದನ್ನು ತಪ್ಪಿಸಲು ಇತ್ತೀಚೆಗೆ ಕ್ರೀಡಾಕೂಟಗಳಲ್ಲಿ ಹೆಚ್ಚು ಹೆಚ್ಚು ಕಾಂಡೋಮ್‌ಗಳನ್ನು ವಿತರಿಸಲಾಗುತ್ತಿದೆ.
ಗೋಲ್ಡ್‌ಕೋಸ್ಟ್ ಗ್ರಾಮದಲ್ಲಿ ಸ್ಪರ್ಧಿಗಳು ರಿಯಾಲಿಟಿ ಕಂಪ್ಯೂಟರ್ ಗೇಮ್ಸ್, ಸ್ವಿಮ್, ಮ್ಯಾನ್ ಮೇಡ್ ವಾಟರ್‌ಫಾಲ್ಸ್, ಪಿಯಾನೋ, ಸಾಕಷ್ಟು ಐಸ್‌ಕ್ರೀಮ್‌ಗಳನ್ನು ಮನಸಾರೆ ಸವಿಯಬಹುದು. ಸುಮಾರು 300 ಜನ ಬಾಣಸಿಗರು 24 ಗಂಟೆಯೂ ಸೇವೆಯಲ್ಲಿ ಲಭ್ಯರಿದ್ದು, ವೆಜ್-ನಾನ್‌ವೆಜ್ ರುಚಿ ಸವಿಯಬಹುದಾಗಿದೆ.