Advertisement

ಬಾಕ್ಸಿಂಗ್‌: ಮನೋಜ್‌, ಸತೀಶ್‌ ಸೆಮಿಗೆ

07:00 AM Apr 11, 2018 | Team Udayavani |

ಗೋಲ್ಡ್‌ಕೋಸ್ಟ್‌: ವೇಟ್‌ಲಿಫ್ಟಿಂಗ್‌ ಬಳಿಕ ಬಾಕ್ಸಿಂಗ್‌ನಲ್ಲೂ ಭಾರತೀಯರು ಬಹಳಷ್ಟು ಪದಕ ಗೆಲ್ಲುವ ಸಾಧ್ಯತೆಯಿದೆ. ಗೇಮ್ಸ್‌ನ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಐದು ಮಂದಿ ಬಾಕ್ಸರ್‌ಗಳು ಈಗಾಗಲೇ ಸೆಮಿಫೈನಲ್‌ ತಲುಪುವ ಮೂಲಕ ಪದಕ ಖಚಿತಗೊಳಿಸಿದ್ದಾರೆ. 

Advertisement

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಹೋರಾಟಗಳಲ್ಲಿ ಹಿರಿಯ ಬಾಕ್ಸರ್‌ ಮನೋಜ್‌ ಕುಮಾರ್‌ ಸಹಿತ ಐದು ಮಂದಿ ಭಾರೀ ಗೆಲುವಿನೊಂದಿಗೆ ಸೆಮಿಫೈನಲ್‌ ತಲುಪಿದ್ದಾರೆ. ಈ ಮೊದಲು ಮೇರಿಕಾಮ್‌ ತನ್ನ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪದಕ ಗೆಲ್ಲುವುದನ್ನು ಖಚಿತಗೊಳಿಸಿದ್ದರು.

ಮನೋಜ್‌ ಸಹಿತ ಚೊಚ್ಚಲ ಗೇಮ್ಸ್‌ ನಲ್ಲಿ ಪಾಲ್ಗೊಳ್ಳುತ್ತಿರುವ ಅಮಿತ್‌ ಪಂಘಾಲ್‌, ಮೊಹಮ್ಮದ್‌ ಹಸ್ಸಮುದ್ದೀನ್‌, ನಮನ್‌ ತನ್ವಾರ್‌ ಮತ್ತು ಸತೀಶ್‌ ಕುಮಾರ್‌ ಸೆಮಿಫೈನಲ್‌ ತಲುಪಿದ್ದಾರೆ. ಈ ಬಾಕ್ಸರ್‌ಗಳು ಕಳೆದ ಬಾರಿ ಭಾರತಕ್ಕೆ ಮೂರು ಬೆಳ್ಳಿ ಮತ್ತು ಒಂದು ಕಂಚು ದೊರಕಿಸಿಕೊಟ್ಟಿದ್ದರು. ಈ ಬಾರಿ ಚಿನ್ನಕ್ಕೆ ಗುದ್ದುಕೊಡುವ ಸಾಧ್ಯತೆಯಿದೆ.

49 ಕೆ.ಜಿ. ವಿಭಾಗದಲ್ಲಿ ಅಮಿತ್‌ ಸ್ಕಾಟ್ಲೆಂಡಿನ ಅಖೀಲ್‌ ಅಹ್ಮದ್‌ ಅವರನ್ನು 4-1 ಅಂಕಗಳಿಂದ ಉರುಳಿಸಿದರು. 19ರ ಹರೆಯದ ನಮನ್‌ ತನ್ವಾರ್‌ 91 ಕೆ.ಜಿ. ವಿಭಾಗದಲ್ಲಿ ಸಮೋವಾದ ಫ್ರ್ಯಾಂಕ್‌ ಮಸೋಯಿ ಅವರನ್ನು 5-0 ಅಂಕಗಳಿಂದ ಸುಲಭವಾಗಿ ಮಣಿಸಿ ಪದಕ ಸುತ್ತಿಗೆ ತೇರ್ಗಡೆಯಾದರು. 

ಅಹ್ಮದ್‌ ಅವರು ಇಷ್ಟೊಂದು ಬಲಿಷ್ಠ ರಾಗಿ ಇದ್ದಾರೆಂದು ತಿಳಿದಿರಲಿಲ್ಲ. ನನ್ನ ವೇಗದ ಹೊಡೆತಗಳಿಂದ ಅವರಿಗೆ ಆಶ್ಚರ್ಯ ವಾಗಿರಬಹುದು. ಆದರೆ ನನ್ನ ಪ್ರತಿದಾಳಿ ಪರಿಣಾಮಕಾರಿಯಾಗಿರಲಿಲ್ಲ ಎಂದು ಅಮಿತ್‌ ಹೇಳಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ ಮೂರನೇ ಪದಕ ಕ್ಕಾಗಿ 22ರ ಹರೆಯದ ಅಮಿತ್‌ ಪ್ರಯತ್ನಿಸಲಿದ್ದಾರೆ. ಗೇಮ್ಸ್‌ಗೆ ಆಗಮಿಸುವ ಮೊದಲು ಅವರು ಇಂಡಿಯಾ ಓಪನ್‌ ಮತ್ತು ಬಲ್ಗೇರಿಯದಲ್ಲಿ ನಡೆದ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

Advertisement

ಯೂತ್‌ ವಿಶ್ವ ಚಾಂಪಿಯನ್‌ಶಿಪ್‌ನ ಕಂಚು ವಿಜೇತ ನಮನ್‌ ಬಾಕ್ಸಿಂಗ್‌ ತಂಡಕ್ಕೆ ಸ್ಥಾನ ಪಡೆಯಲು ನಡೆದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಏಶ್ಯನ್‌ ಬೆಳ್ಳಿ ವಿಜೇತ ಸುಮಿತ್‌ ಸಂಗ್ವಾನ್‌ ಅವರನ್ನು ಸೋಲಿಸಿದ್ದರು. ಇಲ್ಲಿ ನನ್ನ ಎದುರಾಳಿ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಹಾಗಾಗಿ ಅವರ ಮೊದಲ ಸುತ್ತಿನ ಹೋರಾಟವನ್ನು ಗಮನಿಸಿ ಅದರಂತೆ ನನ್ನ ಆಟದ ಯೋಜನೆ ರೂಪಿಸಿಕೊಂಡೆ ಎಂದು ನಮನ್‌ ಹೇಳಿದ್ದಾರೆ. ನನ್ನ ಹೋರಾಟದ ಶೈಲಿಗೆ ಅಖೀಲ್‌ ಕುಮಾರ್‌ ಮೆಚ್ಚುಗೆ ಸೂಚಿಸಿದ್ದಾರೆ. ಅಖೀಲ್‌ ಮೆಲ್ಬರ್ನ್ನಲ್ಲಿ 2006ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ದೇಹತೂಕ ಕಡಿಮೆ ಮಾಡಲು ಬಾಕ್ಸಿಂಗ್‌ ರಿಂಗ್‌ಗೆ ಪ್ರವೇಶಿಸಿರುವ ದಿಲ್ಲಿಯ ನಮನ್‌ ಎ. 13ರಂದು ನಡೆಯುವ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯದ ಜಾಸನ್‌ ವಾಟೇಲೆ ಅವರನ್ನು ಎದುರಿಸಲಿದ್ದಾರೆ.

ಮನೋಜ್‌ಗೆ ಸುಲಭ ಗೆಲುವು
ಸಂಜೆ ನಡೆದ ಕಾದಾಟದಲ್ಲಿ ಮನೋಜ್‌ ಮತ್ತು ಹಸ್ಸಮುದ್ದೀನ್‌ ಅನುಕ್ರಮವಾಗಿ ಜಾಂಬಿಯಾದ ಎವೆರಿಸ್ಟೊ ಮುಲೆಂಗ ಮತ್ತು ಆಸ್ಟ್ರೇಲಿಯದ ಟೆರ್ರಿ ನಿಕೋಲಾಸ್‌ ಅವರನ್ನು ಸೋಲಿಸಿ ಸೆಮಿಫೈನಲ್‌ ತಲುಪಿ ದರು. ಹಸ್ಸಮುದ್ದೀನ್‌ 5-0 ಅಂತರದಿಂದ ಸುಲಭವಾಗಿ ಕೆಡಹಿದರೆ ಮನೋಜ್‌ ಅಂತಿಮ ಸುತ್ತಿನವರೆಗೆ ಹೋರಾಡಿ ಗೆದ್ದರು.

ನನಗೆ ಗೆಲ್ಲುವ ಭರವಸೆಯಿತ್ತು. ಕಳೆದ ಕಾಮನ್‌ವೆಲ್ತ್‌ ಗೇಮ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ನಾನು ಸೋತಿದ್ದೆ. ಇದೀಗ ಅದನ್ನು ದಾಟಿದ್ದೇನೆ. ಇನ್ನು ಚಿನ್ನ ಸಹಿತ ಹಲವು ಗುರಿಗಳಿವೆ. ಮುಂದಿನ ಗುರಿ 2020ರ ಒಲಿಂಪಿಕ್ಸ್‌ ಎಂದು ಮನೋಜ್‌ ತಿಳಿಸಿದರು. ಮನೋಜ್‌ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡಿನ ಪ್ಯಾಟ್‌ ಮೆಕ್‌ಕಾರ್ಮಾಕ್‌ ಅವರನ್ನು ಎದುರಿಸಲಿದ್ದಾರೆ. 

ಏಶ್ಯನ್‌ ಗೇಮ್ಸ್‌ನ ಕಂಚು ವಿಜೇತ ಸತೀಶ್‌ ಕುಮಾರ್‌ ಟ್ರಿನಿಡಾಡ್‌ನ‌ ನಿಗೆಲ್‌ ಪಾಲ್‌ ಅವರನ್ನು ಸೋಲಿಸಿ ಸೆಮಿಫೈನಲ್‌ ತಲುಪಿದ್ದಾರೆ. ಈ ಮೂಲಕ ಪುರುಷರಲ್ಲಿ ಭಾರತದ ಐದನೇ ಪದಕ ಖಚಿತಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next