ಸಾಗರ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಿಂದ ತತ್ತರಿಸಿರುವ ತಾಲೂಕಿನ ಗ್ರಾಮಾಂತರ ಪ್ರದೇಶದ ರೈತರು ಸಾಕಿರುವ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಳ್ಳುತ್ತಿದ್ದು ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪಶುಸಂಗೋಪನಾ ಇಲಾಖೆ ನೀಡಬೇಕಾದ ಪ್ರತಿಬಂಧಕ ಲಸಿಕೆ ವಿತರಣೆ ಆಗಿಲ್ಲ. ಈಗಿನ ಮಾಹಿತಿಗಳ ಪ್ರಕಾರ, ಲಸಿಕೆ ವಿತರಣೆಗೆ ಇನ್ನೂ ವಿಳಂಬ ಆಗುವ ಸಾಧ್ಯತೆ ಕೂಡ ಇದೆ.
ಗೊರಸು ಕಾಲುಗಳಿರುವ ದನಗಳು, ಕುರಿ, ಆಡು ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಮಿಕ ರೋಗದಿಂದಾಗಿ ಸಾಕಾಣಿಕೆ ಸಮಸ್ಯೆಯಾಗುತ್ತದೆ. ರೋಗಪೀಡಿತ ಹಸುಗಳ ಹಾಲು ಇಳುವರಿ ಗಣನೀಯವಾಗಿ ಕಡಿಮೆ ಆಗುತ್ತಿದೆ. ಹಾಲಿನ ದರವನ್ನು ಕೂಡ ಶಿಮುಲ್ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ರೈತನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಬಾಧಿಸಿದ್ದ ರೋಗ ಈಗ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕಾಗಿ ಆಗಸ್ಟ್ ತಿಂಗಳಿನಲ್ಲಿಯೇ ಲಸಿಕೆ ನೀಡಬೇಕಾಗಿತ್ತು. ಆದರೆ ತಾಲೂಕಿಗೆ ಲಸಿಕೆ ಇನ್ನೂ ಪೂರೈಕೆಯಾಗದ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆಗೆ 2 ತಿಂಗಳು ವಿಳಂಬವಾಗಿದೆ. ಕೊಟ್ಟಿಗೆಯಲ್ಲಿನ ಒಂದೆರಡು ದನಗಳಿಗೆ ರೋಗ ಕಾಣಿಸಿಕೊಂಡಿರುವ ಕಡೆಗಳಲ್ಲಿ ಪಶುಪಾಲಕರು ಆತಂಕದಲ್ಲಿದ್ದಾರೆ.
ಜಿಗಳೇಮನೆ, ಹುತ್ತಾದಿಂಬ, ಮಳ್ಳ, ಲ್ಯಾವಿಗೆರೆ, ಮೈಲಾರಕೊಪ್ಪ, ಕೆಳಗಿನಮನೆ, ಬಾಳಗೋಡು, ತಾವರೆಹಳ್ಳಿ ವ್ಯಾಪ್ತಿಯಲ್ಲಿ ರೋಗ ಸಮಸ್ಯೆ ವ್ಯಾಪಕವಾಗಿದೆ. ವಿಚಿತ್ರವೆಂದರೆ, ಈ ನಡುವೆ ಬರುತ್ತಿರುವ ಅಕಾಲಿಕ ಮಳೆ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಶೀಘ್ರವಾಗಿ ಲಸಿಕೆ ವಿತರಣೆಗೆ ಇಲಾಖೆ, ಸರಕಾರ ಗಮನಹರಿಸಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಸಾಗರದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎನ್.ಎಚ್.ಶ್ರೀಪಾದರಾವ್, ರೋಗ ಈಗ ಹತೋಟಿಯಲ್ಲಿದೆ. 10 ದಿನಗಳಲ್ಲಿ ಲಸಿಕೆ ಸರಬರಾಜು ಆಗಲಿದ್ದು, ತಕ್ಷಣ ಲಸಿಕೆ ಹಾಕಲಾಗುವುದು. ಕಳೆದ ಸಾಲಿನಲ್ಲಿ ತಾಲೂಕಿನಾದ್ಯಂತ ಇಲಾಖೆ ವ್ಯಾಪ್ತಿ 1,05,000 ಲಸಿಕೆ ಹಾಕಲಾಗಿದೆ. ಆರಂಭಿಕ ಹಂತದಲ್ಲಿ ಗಡಿ ಜಿಲ್ಲೆಗಳಿಗೆ ವಿತರಿಸಲಾಗುತ್ತಿರುವುದು ಮತ್ತು ನಿಖರವಾದ ಗುಣಮಟ್ಟ ಪರಿಶೀಲನೆ ಕ್ರಮಗಳಿಂದಾಗಿ ಲಸಿಕೆ ಪೂರೈಕೆ ವಿಳಂಬವಾಗಿದೆ. ಕಳೆದ ಸಾಲಿನಲ್ಲಿ ಗುಣಮಟ್ಟದಲ್ಲಿನ ದೋಷದಿಂದಾಗಿ ಈ ಬಾರಿ ರೋಗ ಕಾಣಿಸಿಕೊಳ್ಳುತ್ತಿದೆ. ಹಂತ ಹಂತವಾಗಿ ಪ್ರದೇಶವಾರು ವಿತರಣೆ ವ್ಯವಸ್ಥೆ ಇದೆ. ಇಲಾಖೆಗೆ ಲಸಿಕೆ ದೊರಕಿದ ತಕ್ಷಣ, ವಿತರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.