Advertisement

ವಕ್ಫ್ ಆಸ್ತಿಯ ಸಂರಕ್ಷಣೆಗೆ ಬದ್ಧ : ಸಮಿತಿ ಅಧ್ಯಕ್ಷ ಯಾಕೂಬ್‌ ಭರವಸೆ

12:43 AM Nov 29, 2019 | Sriram |

ಮಡಿಕೇರಿ: ವಕ್ಫ್ ಆಸ್ತಿಯ ಸಂರಕ್ಷಣೆ ಹಾಗೂ ಮದರಸಗಳ‌ ಅಭಿವೃದ್ಧಿಗೆ ವಕ್ಫ್ ಸಲಹಾ ಸಮಿತಿ ಮುಂದಾಗಿದ್ದು, ಎಲ್ಲಾ ಮಸೀದಿಗಳು ನಿಯಮ ಪಾಲನೆಯ ಮೂಲಕ ಸಹಕರಿಸುವಂತೆ ವಕ್ಫ್ ಸಲಹಾ ಸಮಿತಿ ಮನವಿ ಮಾಡಿದೆ.

Advertisement

ಕೊಡಗು ಜಿಲ್ಲಾ ವಕ್ಫ್ ಕಛೇರಿಯಲ್ಲಿ ನಡೆದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಸಮಿತಿ ಅಧ್ಯಕ್ಷ‌ ಕೆ.ಎ.ಯಾಕೂಬ್‌ ಮಾತನಾಡಿದರು.

ಜಮಾಅತ್‌ಗಳ ಸುತ್ತ ತಡೆಗೋಡೆಗಳನ್ನು ನಿರ್ಮಿಸಿ ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಅಗತ್ಯವಿದೆ. ಸರ್ಕಾರದಿಂದ ಒಟ್ಟು 65 ಲಕ್ಷ ರೂ. ಬಿಡುಗಡೆಯಾಗಿದ್ದು, ಮದರಸಗಳಿಗೆ 30 ಲಕ್ಷ ರೂ., ಖಬರಸ್ತಾನ್‌ ಹಾಗೂ ಇತರ ಕಾರ್ಯಕ್ರಮಗಳಿಗಾಗಿ 35 ಲಕ್ಷ ರೂ. ಹಣವನ್ನು ಹಂಚಿಕೆ ಮಾಡಲಾಗಿದೆ ಎಂದರು.

ವಕ್ಫ್ ಬೋರ್ಡ್‌ನಲ್ಲಿ ಮದರಸ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮದರಸ ಶಿಕ್ಷಣವನ್ನು ಮೊಟಕುಗೊಳಿಸಿರುವ ವಿದ್ಯಾರ್ಥಿಗಳನ್ನು ಮರು ಸೇರ್ಪಡೆಗೊಳಿಸಬೇಕೆನ್ನುವುದು ವಕ್ಫ್ ಸಲಹಾ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದರು.

ಮದರಸ ಮತ್ತು ಮಸೀದಿಗಳ ಅಭಿವೃದ್ಧಿಗಾಗಿ ಹೆಚ್ಚು ಕಾಳಜಿ ವಹಿಸಲಾಗಿದೆ. ಈ ಹಿಂದಿನ ಸರ್ಕಾರ 50 ವಾಟರ್‌ ಫಿಲ್ಟರ್‌ಗಳನ್ನು ನೀಡಿದ್ದು, ಅದನ್ನು 46 ಮಸೀದಿಗಳಿಗೆ ಹಾಗೂ 4 ಚರ್ಚ್‌ಗಳಿಗೆ ನೀಡಲಾಗಿದೆ ಎಂದು ಯಾಕುಬ್‌ ತಿಳಿಸಿದರು.

Advertisement

ಕೊಡಗಿನಲ್ಲಿ ಸಂಭವಿಸಿದ ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಕ್ಫ್ ಮಂಡಳಿಗೆ ಅನುದಾನದ ಅವಶ್ಯಕತೆ ಇದ್ದು, ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ವಕ್ಫ್ ಸಮಿತಿ ಕೈಗೊಂಡ ನಿರ್ಣಯದಂತೆ ಜಿಲ್ಲೆಯಲ್ಲಿರುವ ಜಮಾಅತ್‌ಗಳ ಅಭಿವೃದ್ಧಿಗಾಗಿ ಎಲ್ಲಾ ಮಸೀದಿಗಳು ಕಡ್ಡಾಯವಾಗಿ ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಹಿಂದೆ ಮಾಡಿದ ಮನವಿಗೆ ಸ್ಪಂದಿಸಿ ಒಟ್ಟು 10 ಜಮಾಅತ್‌ಗಳು ಉತ್ಸಾಹದಿಂದ ನೋಂದಾಯಿಸಿಕೊಂಡಿದ್ದು, ಇದೇ ರೀತಿ ಎಲ್ಲಾ ಜಮಾಅತ್‌ಗಳು ಮುಂದೆ ಬಂದು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಯಾಕುಬ್‌ ಸಲಹೆ ನೀಡಿದರು.

ವಕ್ಫ್ ಸಲಹಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್‌ ರೆಹಮಾನ್‌, ಅಧಿಕಾರಿ ಸಹದುಲ್‌ ರೆಹಮಾನ್‌, ಸದಸ್ಯರಾದ ಎಂ.ಹೆಚ್‌.ತನ್ವೀರ್‌ ಅಹಮ್ಮದ್‌, ಅಬ್ದುಲ್‌ ಹಮೀದ್‌ ಮೌಲವಿ, ಸಿ.ಎ.ಯೂಸುಫ್, ಮೊಹಮ್ಮದ್‌ ಹಾಜಿ ಎಡಪಾಲ, ಅಬ್ದುಲ್‌ ಸಮ್ಮದ್‌, ಮೊಹಮ್ಮದ್‌ ಹಾಜಿ ಕುಂಜಿಲ, ಮೊಹಿದ್ದೀನ್‌ ಬೆಟ್ಟಗೇರಿ, ಅಬ್ದುಲ್‌ ಅಝೀಜ್‌ ರಿಜ್ವಾನ್‌, ಕೆ.ಎಂ.ಅಬ್ದುಲ್‌ ಶುಕೂರ್‌, ಮಹಮ್ಮದ್‌ ಶರೀಫ್, ಹಂಸ ಪಡಿಯಾನಿ, ಎಂ.ಬಿ.ಅಬ್ದುಲ್‌ ನಾಸಿರ್‌, ಲತೀಫ್ ಮನ್ನರ್‌, ಅಬ್ದುಲ್‌ ಅಜೀಜ್‌ ಹಾಗೂ ಕಚೇರಿ ಸಿಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next