Advertisement

Karnataka: 40 ಪರ್ಸೆಂಟ್‌ ಕಮಿಷನ್‌ ಪರಾಮರ್ಶೆಗೆ ಸಮಿತಿ

08:55 PM Aug 18, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಯೋಗಿಸಿದ್ದ “40 ಪರ್ಸೆಂಟ್‌ ಕಮಿಷನ್‌’ ಅಸ್ತ್ರ ಈಗ ಮತ್ತೂಂದು ತಿರುವು ಪಡೆದುಕೊಂಡಿದ್ದು, ಇದರ ಸತ್ಯಾಸತ್ಯತೆ ಪರಾಮರ್ಶೆಗೆ ರಾಜ್ಯ ಸರಕಾರ ತನಿಖಾ ಸಮಿತಿ ರಚಿಸಿ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಸಮಿತಿಗೆ ನಿವೃತ್ತ ನ್ಯಾ| ಎಚ್‌.ಎನ್‌. ನಾಗಮೋಹನ್‌ದಾಸ್‌ ಅವರನ್ನು ಅಧ್ಯಕ್ಷರಾಗಿ ನಿಯೋಜಿಸಲಾಗಿದೆ. ಸಮಿತಿಯು ಕಾಮಗಾರಿಗಳ ಸ್ಥಳ ಮತ್ತು ದಾಖಲಾತಿಗಳ ಪರಿಶೀಲನೆ, ಟೆಂಡರ್‌ ಪ್ರಕ್ರಿಯೆ, ಪ್ಯಾಕೇಜ್‌ ಪದ್ಧತಿ, ಪುನರ್‌ ಅಂದಾಜು, ಬಾಕಿ ಮೊತ್ತ ಬಿಡುಗಡೆ ಮತ್ತಿತರ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಮುಂದಿನ 30 ದಿನಗಳಲ್ಲಿ ಸರಕಾರಕ್ಕೆ ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲಿದೆ.

ಈ ತನಿಖೆಗಾಗಿ ಸಮಿತಿಯು ಅಗತ್ಯ ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ತೆಗೆದುಕೊಳ್ಳಲು ಸರಕಾರ ಸೂಚಿಸಿದ್ದು, ವಿವಿಧ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಕಮಿಷನ್‌ ವ್ಯವಹಾರದ ಬಗ್ಗೆ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಮತ್ತು ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆ ಸಹಿತ ವರದಿ ಸಲ್ಲಿಸುವಂತೆ ಸರಕಾರ ನಿರ್ದೇಶನ ನೀಡಿದೆ.

ಯಾವ ಅಂಶಗಳ ಪರಾಮರ್ಶೆ?
ಮುಖ್ಯವಾಗಿ ತನಿಖೆ ವೇಳೆ ಯೋಜನೆ/ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು, ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆ ಬಿಲ್‌ ಪಾವತಿ ಮಾಡಲಾಗಿದೆಯೇ ಅಥವಾ ಅನುಷ್ಠಾನಗೊಂಡ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿ ಬಿಲ್‌ ಪಾವತಿಸಲಾಗಿದೆಯೇ? ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರ ತಯಾರಿಸಿರುವ ಬಗ್ಗೆ, ಅನುಷ್ಠಾನಗೊಳಿಸಲಾದ ಕಾಮಗಾರಿ/ಯೋಜನೆಗಳ ಗುಣಮಟ್ಟ, ಕಾಮಗಾರಿಗಳ ಅಂದಾಜಿನ ಪರಿಮಾಣ ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದರಲ್ಲಿ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆ ಜತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸುವಂತೆ ತನಿಖಾ ಸಮಿತಿಗೆ ಸೂಚಿಸಲಾಗಿದೆ.

ಜಾಬ್‌ಕಾರ್ಡ್‌ ತನಿಖೆಯಂತಾಗಲಿದೆ: ಎಚ್‌ಡಿಕೆ
ತನಿಖೆ ಮಾಡಿಸಿ, ವರದಿಯನ್ನು ಇಟ್ಟುಕೊಳ್ಳುತ್ತಾರಷ್ಟೇ. ಅದರ ಫ‌ಲಿತಾಂಶ ಹೇಗಿರುತ್ತದೆ ಎನ್ನುವುದು ಗೊತ್ತಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.
ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಪ್ರತಿಕ್ರಿಯೆ ನೀಡಿರುವ ಅವರು, 2016-17ರಲ್ಲಿ ಜಾಬ್‌ ಕಾರ್ಡ್‌ ಬಗ್ಗೆ ಇದೇ ನಾಗಮೋಹನ್‌ದಾಸ್‌ ಅವರಿಂದ ತನಿಖೆ ಮಾಡಿಸಿದ್ದರು. ಅದು ಎಲ್ಲಿದೆ? ಆ ವರದಿ ಏನಾಯಿತು? 40 ಪರ್ಸೆಂಟ್‌ ಕಮಿಷನ್‌ ತನಿಖೆಯೂ ಅದೇ ಹಾದಿಹಿಡಿಯಲಿದೆ ಎಂದು ಟೀಕಿಸಿದರು.
ಈ ಮೊದಲು ನ್ಯಾ| ವೀರಪ್ಪ ಅವರ ನೇತೃತ್ವದಲ್ಲಿ ತನಿಖೆ ಮಾಡಿಸುವುದಾಗಿ ಹೇಳಿದ್ದರು. ಬಹುಶಃ ಅವರು ಒಪ್ಪಿಲ್ಲ ಅಂತ ಕಾಣುತ್ತದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next