Advertisement
ಸರ್ಕಾರದ ಅನುದಾನದಿಂದ ನಿರ್ಮಿಸಿರುವ ಸಮುದಾಯ ಭವನಗಳನ್ನು ಯಾವುದೋ ಜನಾಂಗ, ಸಮುದಾಯ, ಸಂಘಸಂಸ್ಥೆಗಳಿಗೆ ವಹಿಸುತ್ತಿರುವುದರಿಂದ ಅವರು ಸಮುದಾಯ ಭವನಗಳನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರಗಳಂತಹ ಸೇವಾ ಕಾರ್ಯಗಳಿಗೆ ಲಭ್ಯವಾಗದ ಸಮುದಾಯ ಭವನಗಳನ್ನು ಮನಸೋಇಚ್ಛೆ ಬಾಡಿಗೆ ಪಡೆದು ಮದುವೆ, ಬೀಗರೂಟಗಳಿಗೆ ನೀಡಲಾಗುತ್ತಿದೆ. ಕೆಲ ಸಮುದಾಯ ಭವನಗಳು ಗುಂಪುಗಾರಿಕೆಯಿಂದ ನಿರ್ವಹಣೆ ಕಾಣದೆ ಪಾಳು ಬೀಳುತ್ತಿವೆ ಎಂದು ಸದಸ್ಯರು ಪಕ್ಷಬೇಧ ಮರೆತು ಗಮನಸೆಳೆದರು.
Related Articles
Advertisement
ಪಕ್ಕಾ ಮನೆ ಯೋಜನೆ: ಕಂದಾಯ ಬಡಾವಣೆಯಲ್ಲಿನ ಮನೆಗಳಿಂದ ಪಾಲಿಕೆ ತೆರಿಗೆ ವಸೂಲು ಮಾಡುವುದರಿಂದ ನಗರ ಪಾಲಿಕೆ ವ್ಯಾಪ್ತಿಯ ಕಂದಾಯ ಬಡಾವಣೆಗಳಿಗೆ ನಾಗರಿಕ ಸೌಲಭ್ಯ ಕಲ್ಪಿಸಿಕೊಡುವುದರಲ್ಲಿ ತಪ್ಪಿಲ್ಲ ಎಂದು ಹಲವು ಸದಸ್ಯರು ಅಭಿಪ್ರಾಯಪಟ್ಟರು. ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಜಗದೀಶ್, ತೆರಿಗೆ ಸಂಗ್ರಹಿಸಿದ ಮೇಲೆ ಸೌಲಭ್ಯ ಕಲ್ಪಿಸುವುದು ನಗರ ಪಾಲಿಕೆಯ ಕರ್ತವ್ಯ. ಆದರೆ, ಬಡಾವಣೆ ಮತ್ತೂಂದು ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ನಮ್ಮ ಹಂತದಲ್ಲಿ ತೀರ್ಮಾನಿಸಲು ಆಗುವುದಿಲ್ಲ ಎಂದರು.
ಮಾಹಿತಿ ನೀಡಿ: ನಗರ ಪಾಲಿಕೆಯ ಪರವಾಗಿ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ಎಂ.ಪಿ. ಉಮಾದೇವಿ ಮತ್ತು ಎಚ್.ಸಿ. ಶಿವರಾಮು ಅವರ ಪೈಕಿ ಶಿವರಾಮು ಅವರನ್ನು ಕೈಬಿಟ್ಟು, ಮೋಹನ್ ಭಟ್ ಅವರನ್ನು ನೇಮಕ ಮಾಡಿಕೊಳ್ಳಲು ಸದಸ್ಯರ ಅಭಿಪ್ರಾಯದಂತೆ ಮೇಯರ್ ಆದೇಶ ನೀಡಿದರು. ಜೊತೆಗೆ ವಕೀಲರಿಗೆ ಪೂರಕವಾಗಿ ಪಾಲಿಕೆ ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ದಾಖಲೆ ಒದಗಿಸಬೇಕು. ಒಂದು ವೇಳೆ ಪ್ರಕರಣದಲ್ಲಿ ಸೋಲುಂಟಾದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಾಗ್ವಾದ: ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿದ್ದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡ ಮರು ನಿರ್ಮಾಣ ವಿಷಯವನ್ನು ಕೌನ್ಸಿಲ್ ಸಭೆಗೆ ಏಕೆ ತಂದಿಲ್ಲ ಎಂದು ಸದಸ್ಯ ನಾಗರಾಜು ಪ್ರಶ್ನಿಸಿದರು. ಈ ವಿಚಾರ ನಾಗರಾಜು ಮತ್ತು ಅಯೂಬ್ ಖಾನ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸಭೆಯಲ್ಲಿ ಉಪ ಮೇಯರ್ ಶಫಿ ಅಹಮ್ಮದ್ ಹಾಜರಿದ್ದರು.
ಪಾರ್ಕ್, ವೃತ್ತಕ್ಕೆ ಯಾರ್ಯಾರದೋ ಹೆಸರಿಡಬೇಡಿ: ಮೈಸೂರಿಗೆ ಸಂಬಂಧ ಪಡದವರು, ನಗರಕ್ಕೆ ಅವರ ಕೊಡುಗೆ ಏನೂ ಇಲ್ಲದಿದ್ದರು ನಿಧನರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ನಗರದ ಉದ್ಯಾನ, ರಸ್ತೆ, ವೃತ್ತಗಳಿಗೆ ಅವರ ಹೆಸರಿಡುವುದು ಬೇಡ ಎಂದು ಬಿಜೆಪಿ ಸದಸ್ಯೆ ಸುನಂದಾ ಫಾಲನೇತ್ರ ಆಗ್ರಹಿಸಿದರು. ಲಲಿತ ಮಹಲ್ ವೃತ್ತಕ್ಕೆ ಮಾಜಿ ಎಂಎಲ್‌ಸಿ, ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ದಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರ ಹೆಸರಿಡುವಂತೆ ಪ್ರಸ್ತಾವನೆ ಬಂದಿದೆ.
ಅವರು ಇದ್ದಿದ್ದು ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಏಕೆ ಅವರ ಹೆಸರಿಡಬೇಕು. ಮೈಸೂರಿನವರ ಹೆಸರನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಮಕರಣ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಕುವೆಂಪುನಗರದ ಗಗನಚುಂಬಿ ರಸ್ತೆಯ ಡಿವೈಡರ್ ಮಾದರಿಯ ಉದ್ಯಾನಕ್ಕೆ ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಹೆಸರಿಟ್ಟು, ಅವರಿಗೆ ಅಗೌರವ ಸೂಚಿಸುವುದು ಬೇಡ. ಬೇರೊಂದು ವೃತ್ತಕ್ಕೋ, ಉದ್ಯಾನಕ್ಕೋ ನಾಮಕರಣ ಮಾಡೋಣ ಎಂದರು.