Advertisement

ವದಂತಿ ಹಬ್ಬಿಸುವವರ ವಿರುದ್ಧ ಕ್ರಮಕ್ಕೆ ಸಮಿತಿ

12:01 AM Oct 13, 2020 | mahesh |

ಬೆಂಗಳೂರು: ಕೋವಿಡ್ ಸಂಬಂಧ ಪರೀಕ್ಷೆ, ಚಿಕಿತ್ಸೆಗಳ ಬಗ್ಗೆ ವದಂತಿ, ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮಕ್ಕಾಗಿ ಗೃಹ ಇಲಾಖೆಯ ಸಹಯೋಗದಲ್ಲಿ ಸಮಿತಿ ರಚನೆ ಮಾಡಲಾಗುವುದು. ಕೋವಿಡ್ ನಿಯಂತ್ರಣದಲ್ಲಿ ಜನತೆ ನಿರ್ಲಕ್ಷ್ಯ, ಅತಿಯಾದ ಧೈರ್ಯ, ಆತ್ಮವಿಶ್ವಾಸ ತೋರದೆ ಮುನ್ನೆಚ್ಚರಿಕೆ ವಹಿಸಬೇಕು.

Advertisement

-ಇವು ಆರೋಗ್ಯ ಖಾತೆ ಜವಾಬ್ದಾರಿ ವಹಿಸಿ ಕೊಂಡಿರುವ ಸಚಿವ ಡಾ| ಕೆ. ಸುಧಾಕರ್‌ ಅವರ ಸ್ಪಷ್ಟ ನುಡಿಗಳು. ಆರೋಗ್ಯ ಖಾತೆಯ ಹೊಸ ಹೊಣೆ ಹೊತ್ತ ಬೆನ್ನಲ್ಲೇ ಅವರು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ನಿಮ್ಮ ಸದ್ಯದ ಆದ್ಯತೆಗಳೇನು?
ಕೊರೊನಾ ನಿಯಂತ್ರಣ, ಸಾವಿನ ಪ್ರಮಾಣ ತಗ್ಗಿಸುವುದು ಮೊದಲ ಆದ್ಯತೆ. ಆಕ್ಸಿಜನ್‌ ಸಹಿತ ಹಾಸಿಗೆ ಸೌಲಭ್ಯ, ಸಕಾಲಿಕ ಚಿಕಿತ್ಸೆ ಎರಡನೇ ಆದ್ಯತೆ. ಬೇಗ ಸೋಂಕು ಪತ್ತೆ, ಸೂಕ್ತ ಚಿಕಿತ್ಸಾ ವ್ಯವಸ್ಥೆ, ವೈದ್ಯರ ಕೊರತೆ ನೀಗಿಸಲು ಒತ್ತು ನೀಡಲಾಗುವುದು.

ಸೋಂಕುಪೀಡಿತರ ಡೆತ್‌ ಆಡಿಟ್‌ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಕ್ರಮ ವಹಿಸುವಿರಾ?
ಈಗ ಡೆತ್‌ ಆಡಿಟ್‌ ಸಾಕಷ್ಟು ಆಗುತ್ತಿದೆ. ನಾನು ಪದೇ ಪದೆ ಈ ವಿಚಾರ ಪ್ರಸ್ತಾವಿಸುವಂತೆ ನಿರಂತರವಾಗಿ ಪರಿಶೀಲನೆಯನ್ನೂ ನಡೆಸುತ್ತಿದ್ದೇನೆ. ಹೀಗಾಗಿ ಸದ್ಯ ಡೆತ್‌ ಆಡಿಟ್‌ ಪ್ರಮಾಣ ಶೇ.80ರಷ್ಟಿದೆ. ವಾರದೊಳಗೆ ಉಳಿದ ಶೇ.20ರಷ್ಟು ಡೆತ್‌ ಆಡಿಟ್‌ ಆಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸಿ ಸೋಂಕಿನ ವಿರುದ್ಧ ಹೋರಾಡುವಂತೆ ಹೇಗೆ ಸಜ್ಜುಗೊಳಿಸುವಿರಿ?
ಜನರಿಗೆ ಸದ್ಯ ಸೋಂಕಿನ ಬಗ್ಗೆ ಹೆದರಿಕೆ ಇಲ್ಲದೆ ನಿರ್ಲಕ್ಷ್ಯ ಹೆಚ್ಚಾಗಿರುವಂತಿದೆ. ಅತಿಯಾದ ಆತ್ಮವಿಶ್ವಾಸ ಮೂಡಿದಂತಿದ್ದು, “ಯಾರಿಗೋ ಸೋಂಕು ಬಂದರೆ ನಮಗೆ ಹೇಗೆ ಬರುತ್ತದೆ’ ಎಂಬ ಮನೋಭಾವದಿಂದ ಪರಿಣಾಮ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗ ಸರಿಯಾಗಿ ಅರಿವು ಮೂಡಿಸಲಾಗುವುದು.

Advertisement

ರಾಜ್ಯದ ಜನತೆಗೆ ನಿಮ್ಮ ಭರವಸೆ ಮತ್ತು ಜನರಿಂದ ನೀವು ಬಯಸುವುದೇನು?
ರಾಜ್ಯದ ಆರೂವರೆ ಕೋಟಿ ಜನರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಆಸೆ. ವಿಶೇಷವಾಗಿ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಸಿಗಬೇಕು. ಇದಕ್ಕಾಗಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗುವುದು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದು ಒಂದು ವಿಧಾನವಾದರೆ, ರೋಗವೇ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಹಾಗಾಗಿ ರೋಗ ಕಾಡದಂತೆ ತಡೆಯಲು ಜನ ಕೆಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಜನ ಸೇರುವುದು ಹೆಚ್ಚಾದರೆ ಸೋಂಕು ಹೆಚ್ಚಾಗುತ್ತದೆ. ಹಬ್ಬ, ಆಚರಣೆ ಏನೇ ಇದ್ದರೂ ಸದ್ಯದ ಸಂದರ್ಭದಲ್ಲಿ ಅದನ್ನು ಕೈಬಿಡುವುದು ಅನಿವಾರ್ಯ. ಜೀವವಿದ್ದರೆ ಹಬ್ಬ. ಹಬ್ಬ- ಹರಿದಿನಗಳ ಆಚರಣೆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ, ಮಾರ್ಗ ಸೂಚಿಗಳ ಪಾಲನೆಗೆ ಏನೆಲ್ಲ ಬಿಗಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
-ಡಾ| ಕೆ. ಸುಧಾಕರ್‌, ಸಚಿವರು

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next