ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಂಗಳಮುಖಿಯರಿಗೆ ಪಾಲಿಕೆ ಮೀಸಲಿಟ್ಟಿರುವ ಅನುದಾನ ಸರ್ಮಪಕವಾಗಿ ಬಳಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಟ್ರಾನ್ಸ್‌ಜೆಂಡರ್ ಪಾಲಿಸಿ -2017ರ ಅನುಷ್ಠಾನ ಹಾಗೂ ಪಾಲಿಕೆ ಪ್ರತಿವರ್ಷ ಮಂಗಳ ಮುಖಿಯರಿಗೆ ಮೀಸಲಿಡುತ್ತಿರುವ ಅನುದಾನದ ಬಳಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಬುಧವಾರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳಮುಖಿ ಸಂಘಟನೆಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು, ಮುಂಗಳಮುಖಿಯರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರ ಅನುದಾನ ಅವರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಪಾಲಿಕೆ ವತಿಯಿಂದ ಮಂಗಳಮುಖಿಯರ ಸಮಿತಿ ರಚನೆ ಮಾಡಲಾಗುವುದು.
ಸಮಿತಿಯಲ್ಲಿ ಆಯುಕ್ತರು, ಅಧಿಕಾರಿಗಳು ಹಾಗೂ ಮಂಗಳಮುಖಿಯರ ಪರವಾಗಿ ಸೇವೆ ಸಲ್ಲಿಸುತ್ತಿರುವ ಸಂಘಸಂಸ್ಥೆಗಳ ಸದಸ್ಯರು ಇರಲಿದ್ದಾರೆ. ಈ ಸಮಿತಿಯ ಮೂಲಕ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು. ಮಂಗಳಮುಖಿಯರಿಗೆ ವಸತಿ, ಸ್ವ-ಉದ್ಯೋಗ ಹಾಗೂ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸುವಂತೆ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
ಮುಂಗಳಮುಖಿಯರಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುವ ಬಗ್ಗೆಯೂ ಚಿಂತನೆ ಇದೆ. ಅವರ ಪ್ರತಿನಿಧಿಗಳು ನೀಡಿರುವ ಸಲಹೆ ಮತ್ತು ಅವರ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ಮಂಗಳಮುಖಿಯರ ತಂಡ ಬಿಬಿಎಂಪಿ ಆಯುಕ್ತರಿಗೆ “ಹಿಯರಿಂಗ್ ದಿ ವಾಯ್ಸ’ ಪುಸ್ತಕ ನೀಡಿದರು.
ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು: ಪಾಲಿಕೆ ವ್ಯಾಪ್ತಿಯಲ್ಲಿನ ವಾಸವಿರುವ ಮಂಗಳಮುಖಿಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ ತಲಾ ಒಂದು ಕೋಟಿ ರೂ.ಅನುದಾನ ಮೀಸಲಿರಿಸುತ್ತಿದೆ.
ಆದರೆ, ಇದರಲ್ಲಿ ನಯಾ ಪೈಸೆಯೂ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವ ಬಗ್ಗೆ ಉದಯವಾಣಿ ಫೆ.21ರಂದು “ಮಂಗಳಮುಖಿಯರ ಕೈಗೆಟುಕದ 3ಕೋಟಿ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಉದಯವಾಣಿಯೊಂದಿಗೆ ಮಾತನಾಡಿದ್ದ ಆಯುಕ್ತರು ಮಂಗಳಮುಖಿ ಸಂಘಟನೆ ಸದಸ್ಯರೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.