Advertisement
ವಿಧಾನಸೌಧ ಸಮ್ಮೇಳ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಬ್ಯಾಂಕರುಗಳ 139 ಸಭೆಯಲ್ಲಿ, ಕನ್ನಡ ಭಾಷೆಯನ್ನು ಬ್ಯಾಂಕಿನ ಚಟುವಟಿಕೆಗಳಲ್ಲಿ ಉತ್ತೇಜಿಸಲು ಎಲ್ಲಾ ಬ್ಯಾಂಕುಗಳು ಕನ್ನಡ ಕೋಶಗಳನ್ನು ತೆರೆದು ಕನ್ನಡೇತರ ನೌಕರರಿಗೆ ಕನ್ನಡ ಭಾಷೆಯನ್ನು ಕಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಬ್ಯಾಂಕರುಗಳ ಸಮಿತಿ ಅಧ್ಯಕ್ಷ ಹಾಗೂ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಲ್ವಿನ್ ರೇಗೋ ತಿಳಿಸಿದರು.
Related Articles
Advertisement
ಕೇಂದ್ರ ಹಣಕಾಸು ಇಲಾಖೆಯ ಸೂಚನೆ ಮೇರೆಗೆ ಪ್ರತಿ ವಾಣಿಜ್ಯ ಬ್ಯಾಂಕು ಪ್ರತಿ ಹತ್ತು ಶಾಖೆಗೆ ಒಂದರಂತೆ ಆಧಾರ್ ನೋಂದಣಿ ಕೇಂದ್ರಗಳನ್ನು ತಮ್ಮ ಶಾಖೆಗಳಲ್ಲಿ ತೆರೆಯಬೇಕಾಗಿದೆ. ಹೀಗಾಗಿ ರಾಜ್ಯದಲ್ಲಿರುವ ಒಟ್ಟು 100 ಬ್ಯಾಂಕ್ ಶಾಖೆಗಳ ವತಿಯಿಂದ 10 ನೋಂದಣಿ ಕೇಂದ್ರಗಳನ್ನು ಸ್ಥಾಪಿಸುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಬ್ಯಾಂಕುಗಳಿಂದ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸುವ ಮತ್ತು ಆಧಾರ್ ದೃಢೀಕರಿಸುವ ಆಧಾರ್ ಸಂಖ್ಯೆ / ಮೊಬೈಲ… ಸಂಖ್ಯೆಗಳನ್ನು ಖಾತೆಗಳಿಗೆ ಜೋಡಿಸುವ ಮತ್ತು ರೂಪೆ ಕಾರ್ಡುಗಳ ವಿತರಣೆ ಮತ್ತವುಗಳ ಚಾಲನೆ ಮಾಡುವ ಮೂಲಕ ಎಲ್ಲ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಸೌಲಭ್ಯ ದೊರಕುವ ಬಗ್ಗೆ ಮತ್ತು ನಗದು ರಹಿತ ವ್ಯವಹಾರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಗತಿ ಪರಿಶೀಲನೆ: ಪ್ರಧಾನ ಮಂತ್ರಿ ಜನಧನ ಯೋಜನೆ ಮತ್ತು ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪೆನ್ಶನ್ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹಾಗೂ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ, ಅಪರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಬ್ಯಾಂಕರುಗಳ ಸಮಿತಿ ಸಂಯೋಜಕ ಹಾಗೂ ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಎಂ.ಮೋಹನ್‌ರೆಡ್ಡಿ, ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕ ಯೂಗೆನ್ ಕರ್ತಾಕ್, ನಬಾರ್ಡ್ ಮುಖ್ಯ ಮಹಾಪ್ರಬಂಧಕ ಎಂ.ಐ.ಗಾಣಿಗಿ ಮತ್ತಿತರರು ಉಪಸ್ಥಿತರಿದ್ದರು.