ತೀರಾ ಅಪರೂಪವೆಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳ ಅನುಷ್ಠಾನಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿ, ಇದರ ಮೇಲುಸ್ತುವಾರಿಯನ್ನೂ ತಾವೇ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಮೇಲ್ನೋಟಕ್ಕೆ ನೋಡಿದರೆ ಇದು ಉತ್ತಮ ನಿರ್ಧಾರದಂತೆಯೇ ಕಾಣಿಸುತ್ತಿದೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಘೋಷಿಸಿದ ಮೇಲೆ ಅದೆಷ್ಟೋ ಯೋಜನೆಗಳು ಜಾರಿಯಾಗದೇ ಹಾಗೆಯೇ ಉಳಿಯುವುದುಂಟು. ಇದಕ್ಕಾಗಿಯೇ ಪ್ರತೀ ಬಜೆಟ್‌ನಲ್ಲಿಯೂ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಯಥಾಸ್ಥಿತಿ ವರದಿಯನ್ನೂ ನೀಡಲಾಗುತ್ತದೆ. ಇದನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಘೋಷಣೆಯಾದ ಯೋಜನೆಗಳ ಜಾರಿ ಕುರಿತ ಮಾಹಿತಿ ಸಿಗುತ್ತದೆ.
ಪ್ರತೀ ವರ್ಷವೂ ಬಜೆಟ್ ಮಂಡನೆಯಾದ ಮೇಲೆ, ಇದರ ಮೇಲೆ ಚರ್ಚೆ ಮತ್ತು ಬಜೆಟ್‌ನ ಅಂಗೀಕಾರಕ್ಕಾಗಿ ಅಧಿವೇಶನ ನಡೆಯುತ್ತದೆ. ಇದರಲ್ಲಿ ಪ್ರಮುಖವಾಗಿ ಚರ್ಚೆಯಾಗುವುದು ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಜಾರಿ ಕುರಿತ ವಿಚಾರಗಳೇ. ಅಲ್ಲದೆ, ವಿಪಕ್ಷಗಳಿಗೆ ಈ ಜಾರಿಯಾಗದ ಯೋಜನೆಗಳೇ ಆಹಾರವಾಗುತ್ತವೆ. ಹಳೇ ಯೋಜನೆಗಳನ್ನೇ ಜಾರಿ ಮಾಡದೇ ಮತ್ತೆ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು ಉತ್ತಮವೇ ಎಂಬ ಪ್ರಶ್ನೆಗಳೂ ವಿಪಕ್ಷಗಳ ಕಡೆಯಿಂದ ಬರುತ್ತವೆ. ಆಡಳಿತದಲ್ಲಿರುವವರಿಗೆ ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕೆಲವೊಮ್ಮೆ ಇರುಸು ಮುರುಸಿಗೂ ಕಾರಣವಾಗಬಹುದು.
ಹೀಗಾಗಿಯೇ ಈ ಬಾರಿ ಮುಖ್ಯಮಂತ್ರಿಗಳು ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು ಹೊರಟಿರುವುದು ಉತ್ತಮ ನಿರ್ಧಾರ. ಅಂದರೆ ಕಾಲಮಿತಿಯಲ್ಲಿ ಯೋಜನೆಗಳ ಜಾರಿ, ಬಜೆಟ್ ತೀವ್ರಗತಿ ಅನುಷ್ಠಾನ ಮಾಡುವಂತೆ ನೋಡಿಕೊಳ್ಳುವುದು ಈ ಸಮಿತಿಯ ಪ್ರಮುಖ ಜವಾಬ್ದಾರಿ. ಇದಕ್ಕಾಗಿ ಮುಖ್ಯ ಕಾರ್ಯ ದರ್ಶಿಗಳ ಹಣಕಾಸು ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಲಿದ್ದಾರೆ. ಹಾಗೆಯೇ ಬಜೆಟ್‌ನ ಪ್ರಮುಖ ಯೋಜನೆಗಳಿಗೆ ಕಾರ್ಯಾದೇಶ ನೀಡುವುದರಿಂದ ಹಿಡಿದು, ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆಯನ್ನೂ ಈ ಸಮಿತಿಯೇ ನೋಡಿಕೊಳ್ಳಲಿದೆ ಎಂಬುದು ವಿಶೇಷ.
ಸಾಮಾನ್ಯವಾಗಿ ಕೆಲವೊಂದು ಯೋಜನೆಗಳಿಗೆ ಎರಡು ಮೂರು ಇಲಾಖೆಗಳ ಸಹಭಾಗಿತ್ವ ಬೇಕಾಗುತ್ತದೆ. ಕೆಲವು ಬಾರಿ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಯೋಜನೆಗಳ ಜಾರಿ ವಿಳಂಬವಾಗಬಹುದು. ಈಗ ಮುಖ್ಯ ಕಾರ್ಯದರ್ಶಿಗಳೇ ಸಮಿತಿಯ ನೇತೃತ್ವವಹಿಸಿಕೊಂಡರೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ಸುಲಭವಾಗುತ್ತದೆ ಎಂಬ ಉದ್ದೇಶವೂ ಇದರ ಹಿಂದಿದೆ. ಏನೇ ಆಗಲಿ ಪ್ರತೀ ಬಾರಿಯ ಬಜೆಟ್ ಘೋಷಣೆ ಬಳಿಕ, ಇದರಲ್ಲಿನ ಎಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬ ಕುರಿತಂತೆ ಚರ್ಚೆ ನಡೆಯುತ್ತದೆ. ಅದು ಯಾವುದೇ ಪಕ್ಷದ ಸರಕಾರ ಇರಲಿ, ಘೋಷಣೆಗೂ ಜಾರಿಯ ನಡುವೆ ವ್ಯತ್ಯಾಸವಂತೂ ಇರುತ್ತದೆ. ಈ ವ್ಯತ್ಯಾಸವನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಆಗ ಅದು ಅತ್ಯುತ್ತಮ ನಿರ್ಧಾರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.