Advertisement

ಬೆಂಗಳೂರು ಅಭಿವೃದ್ಧಿಗೆ ಸಮಿತಿ ರಚನೆ

12:06 PM Jun 02, 2018 | |

ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತಿತರ ಮಹತ್ವದ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಕುರಿತಂತೆ ಸಲಹೆಗಳನ್ನು ನೀಡುವಂತೆ ಕೋರಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ನಾರಾಯಣಮೂರ್ತಿ, ಸದ್ಯದಲ್ಲೇ ತಮ್ಮ ಸಲಹೆ ನೀಡುವುದಾಗಿ ತಿಳಿಸಿದ್ದಾರೆ.

ಜಯನಗರದಲ್ಲಿರುವ ನಾರಾಯಣಮೂರ್ತಿ ಅವರ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತಂತೆ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.

ಬೆಂಗಳೂರಿನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗುತ್ತಿದ್ದು, ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಗತಿಪರಿಶೀಲನೆ ನಡೆಸುವ ಯೋಚನೆ ಮಾಡಲಾಗಿದೆ. ಆದ್ದರಿಂದ ಈ ಕುರಿತು ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿಯವರು ನಾರಾಯಣ ಮೂರ್ತಿಯವರನ್ನು ಕೋರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಮೂರ್ತಿ, ಸಮಿತಿಯ ಭಾಗವಾಗಿರಲು ನನಗೆ ಹೆಮ್ಮೆ ಇದೆ. ಇನ್ನು ಎರಡು ತಿಂಗಳಲ್ಲಿ ತಮ್ಮ ಸಲಹೆಗಳನ್ನು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಸರ್ಕಾರೇತರ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ಮಾಡಿದರು.

Advertisement

“ನೀವು ಅಧಿಕಾರದಲ್ಲಿರುವಾಗಲೂ, ಇಲ್ಲದಿರುವಾಗಲೂ ನಿಮ್ಮ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ರಾಜ್ಯದ ಜನತೆಗೆ, ಕೃಷಿಕರಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯ. ಇಸ್ರೇಲ್ಗೆ ಭೇಟಿ ನೀಡಿ ಕೃಷಿ ಪದ್ಧತಿ ಅಧ್ಯಯನ ನಡೆಸಿ ಅದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದೀರಿ,’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next