ಹಾವೇರಿ: ನನಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ಲಿಂಗಾಯತರನ್ನು ಕಡೆಗಣಿಸಿದೆ ಎಂದು ಸಚಿವಾಕಾಂಕ್ಷಿ, ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, “ಲಿಂಗಾಯತರು ಹೆಚ್ಚು ಬಿಜೆಪಿ ಬೆಂಬಲಿಸುತ್ತಾರೆ
ಎನ್ನಲಾಗುತ್ತದೆ. ಪಕ್ಷ ಈ ರೀತಿ ಲಿಂಗಾಯತರಿಗೆ ಸ್ಥಾನ ವಂಚಿಸಿದರೆ ಲಿಂಗಾಯತರು ಹೇಗೆ ಕಾಂಗ್ರೆಸ್‌ನ್ನು ಬೆಂಬಲಿಸುತ್ತಾರೆ? ಲಿಂಗಾಯತರ ವಿಶ್ವಾಸಗಳಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ.
ಉತ್ತರ ಕರ್ನಾಟಕ ಹಾಗೂ ಲಿಂಗಾಯತರನ್ನು ಪಕ್ಷ ಕಡೆಗಣಿಸಿದೆ. ನನಗೆ ಸಚಿವನಾಗುವ ಎಲ್ಲ ಅರ್ಹತೆಗಳೂ ಇವೆ. ವಿರೋಧ ಪಕ್ಷದವರು ನನ್ನನ್ನು ಸೆಳೆಯಲು ಮುಂದಾದರು. ಆಗಲೂ ನಾನು ಪಕ್ಷದ ನಿಷ್ಠೆ ಮೆರೆದಿದ್ದೇನೆ. ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಆಯ್ಕೆಯಾದ ಕಾಂಗ್ರೆಸ್ ಶಾಸಕ ನಾನೊಬ್ಬನೆ. ಹೀಗಾಗಿ ನನಗೇ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ,ಯಾವ ಕಾರಣಕ್ಕೆ ಸಚಿವ ಸ್ಥಾನ ಕೈತಪ್ಪಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ನನ್ನ ಕ್ಷೇತ್ರದ ಮತದಾರರು ಮುಂದೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬಬದ್ಧನಾಗಿರುತ್ತೇನೆ’ ಎಂದರು.