Advertisement

ಕೋನಹಿಪ್ಪರಗಾ ಗ್ರಾಮವಾಸ್ತವ್ಯ-ಹೈನುಗಾರಿಕೆ ಅಭಿವೃದ್ಧಿಗೆ ಬದ್ಧ: ಶಾಸಕ ಡಾ|ಅಜಯಸಿಂಗ್‌

05:45 PM Apr 02, 2021 | Team Udayavani |

ಕಲಬುರಗಿ: ನೀರಾವರಿಯಲ್ಲಿ ದಾಪುಗಾಲು ಹಾಕುತ್ತಿರುವ ಜೇವರ್ಗಿ ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹೈನುಗಾರಿಕೆ ಹೆಚ್ಚಿಸಲು ಬದ್ಧತೆ ಹೊಂದಲಾಗಿದೆ ಎಂದು ಶಾಸಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್‌ ತಿಳಿಸಿದರು.

Advertisement

ಜೇವರ್ಗಿ ತಾಲೂಕಿನ ಕೋನಹಿಪ್ಪರಗಾದಲ್ಲಿನ ತಮ್ಮ ಮೂರನೇ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಹೆಣ್ಣುಮಕ್ಕಳ ಸಮೂಹದೊಂದಿಗೆ ಸಂವಾದ ನಡೆಸಿದ ಅವರು, ಪಶುಭಾಗ್ಯ ಯೋಜನೆ ಅಡಿ ಹಾಗೂ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ವತಿಯಿಂದ ಆರ್ಥಿಕ ಸಹಾಯ ಕಲ್ಪಿಸಿ ಹೈನುಗಾರಿಕೆಗೆ ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.

ಕೃಷಿಯಲ್ಲಿ ಅನೇಕ ಬಾರಿ ಬೆಲೆ ಇಲ್ಲದೇ, ಬೆಳೆ ಬಾರದೆ ಹಾನಿ ಸಂಭವಿಸುತ್ತದೆ, ಆದರೆ ಹೈನುಗಾರಿಕೆ ಉಪ ಕಸುಬಾಗಿದ್ದು ಹಸು, ಎಮ್ಮೆ ಜೊತೆಗಿದ್ದಲ್ಲಿ ಹಾನಿಯ ಬಿಸಿ ಸ್ವಲ್ಪ ಮಟ್ಟಿಗೆ ಶಮನ ಮಾಡಬಹುದು ಎಂದು ಹೆಣ್ಣುಮಕ್ಕಳಿಗೆ  ಹೈನುಗಾರಿಕೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಭೀಮಾನದಿ ದಡದ ಗ್ರಾಮಗಳಲ್ಲಿ
ಹೈನುಗಾರಿಕೆಗೆ ಒತ್ತು ನೀಡಬೇಕು. ಜೇವರ್ಗಿ ಪಾಕೃತಿಕವಾಗಿ ಸಮೃದ್ಧಿಯ ತಾಲೂಕು ಆಗಿದೆ. ಜೇವರ್ಗಿ ತಾಲೂಕು, ಯಡ್ರಾಮಿ ತಾಲೂಕುಗಳಲ್ಲಿ ನೀರಾವರಿ ಸೌಲಭ್ಯವಿದೆ.

ಇದರಿಂದ ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ ಎಂದರು. ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಜತೆ ಅತಿಥಿಯಾಗಿದ್ದ ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಈರಣ್ಣ ಝಳಕಿ, ಹೆಣ್ಣುಮಕ್ಕಳು ಹೈನುಗಾರಿಕೆಗೆ ಬಂದಲ್ಲಿ ಒಕ್ಕೂಟದಲ್ಲಿ ಅನೇಕ ಯೋಜನೆಗಳಿದ್ದು ಅವುಗಳಿಂದ ನೆರವು ನೀಡಬಹುದಾಗಿದೆ. ಮೊದಲು ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಿ ಹೈನುಗಾರಿಕೆಯಲ್ಲಿ ಎಲ್ಲರೂ ತೊಡಗಿಸಿಕೊಂಡಲ್ಲಿ ಅದೇ ಆದಾಯದ ಮೂಲವಾಗುತ್ತದೆ ಎಂದರು. ಆಳಂದದಲ್ಲಿ 110 ಸಂಘ ಗಳಿವೆ. ಜೇವರ್ಗಿಯಲ್ಲಿ ಕೇವಲ 10 ಸಂಘಗಳಿದ್ದವು. ಅವೂ ಈಗ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಬರುವ ದಿನಗಳಲ್ಲಿ ಹಾಲು ಒಕ್ಕೂಟ ಹೊಸ ಸಂಘ ಸ್ಥಾಪನೆಗೆ ಮುಂದಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.

ರೈತರಾದ ಆನಂದ, ಚಂದಪ್ಪ ಪೂಜಾರಿ, ಶರಣಬಸಪ್ಪ ಪೂಜಾರಿ, ಬಾಬೂರಾವ್ ಪೂಜಾರಿ, ಅಪ್ಪಾಸಾಹೇಬ್‌ ಪೂಜಾರಿ ಮತ್ತವರ ಕುಟುಂಬದವರು, ಕೋನ ಹಿಪ್ಪರಗಾ ಊರಿನ ಮಹಿಳೆಯರು ಹಾಜರಿದ್ದು ಹೈನುಗಾರಿಕೆ ಮಾಹಿತಿ ಪಡೆದರು. ಮಂದರವಾಡ, ಕೋಬಾಳ, ಹಂದನೂರ್‌, ಬಣಮಿ, ರಾಸಣಗಿ, ಕೂಡಿ ಎಲ್ಲೆಡೆ ಸುತ್ತಾಡಿದ ಶಾಸಕರು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಊರುಗಳಲ್ಲಿನ ಜನರು ಸಿಸಿ ರಸ್ತೆ, ಚರಂಡಿ, ನೀರಿನ ಸಮಸ್ಯೆ ಕುರಿತು ಶಾಸಕರೆದುರು ಗಮನಕ್ಕೆ ತಂದರು.

Advertisement

ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
ಕೋನಹಿಪ್ಪರಗಾ ದ್ಯಾಮವ್ವಾಮಾಯಿ ಮಂದಿರದಲ್ಲಿ ವಾಸ್ತವ್ಯದ ದಿನ ಬುಧವಾರ ರಾತ್ರಿ ನಡೆದ ಸಂವಾದದಲ್ಲಿ ಊರವರು ಸ್ಮಶಾನ ಭೂಮಿ, ಮಹಿಳೆಯರ ಶೌಚಾಲಯ, ಭೀಮಾ ನದಿಗೆ ಹೋಗಲು ರಸ್ತೆ, ಮಕ್ಕಳಿಗೆ ಶಾಲೆಗೆ ಹೋಗಲು ಬಸ್ಸಿಲ್ಲವೆಂದು ಹೇಳಿದರು. ತಕ್ಷಣವೇ  ಸ್ಪಂದಿಸಿದ ಡಾ| ಅಜಯಸಿಂಗ್‌ ಜಾಗ ಇದ್ದರೆ ಸ್ಮಶಾನ ಭೂಮಿಗೆ ವ್ಯವಸ್ಥೆ ಮಾಡೋದಾಗಿ ಹೇಳಿದರು. ಸ್ಥಳದಲ್ಲೇ ಶೌಚಾಲಯಕ್ಕೂ ಜಾಗ ಕೊಟ್ಟರೆ ತಮ್ಮ ಬಜೆಟ್‌ನಲ್ಲಿ 42 ಶೌಚಾಲಯ ನಿರ್ಮಿಸುವುದಾಗಿ ಪ್ರಕಟಿಸಿದರು.

ಹಾಲು ಕರೆದು ಕುಡಿದ ಶಾಸಕರು
ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿ ಜನರು, ರೈತರೊಂದಿಗೆ ಬೆರೆತು ಅಲ್ಲಿನ ಅವರ ಕಷ್ಟ- ನಷ್ಟ ಆಲಿಸುತ್ತಿರುವ ಜೇವರ್ಗಿ ಶಾಸಕ ಡಾ| ಅಜಯ ಸಿಂಗ್‌ ಕೋನಹಿಪ್ಪರಗಾದಲ್ಲಿನ ತಮ್ಮ ಮೂರನೇ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಬೆಳಗಿನ ಜಾವ ಕರು ಬಿಟ್ಟುಕೊಂಡು ತಾವೇ ಹಾಲು ಕರೆದರಲ್ಲದೇ ಎತ್ತಿನ ಬಂಡಿ ಓಡಿಸಿದರು. ಬೆಳಗ್ಗೆ ಎದ್ದವರೇ ರೈತರೊಂದಿಗೆ ಬೆರೆತು ಅವರ ಮನೆಯಲ್ಲಿನ ಹಸುವಿಗೆ ಪೂಜಿಸಿದರು. ನಂತರ ಅದೇ ಹಸುವಿಗೆ ಕರು ಬಿಟ್ಟುಕೊಂಡು ಚರಿಗೆ ಹಿಡಿದು ಹಾಲು ಕರೆದರು. ತಾವು ಕರೆದ ಹಾಲನ್ನು ತಾವೇ ಕುಡಿಯುವ ಮೂಲಕ ಹಸುವಿನ ನೊರೆ ಹಾಲನ್ನು ಸವಿದರು. ನಂತರ ಹೂವಿನ ಹಾರ ಹಾಕಿ, ಕುಂಕುಮ- ಅರಿಷಿಣದಿಂದ ಹಸುವನ್ನು ಅಲಂಕರಿಸಿ ಕಾಯಿ- ಕರ್ಪೂರ ಅರ್ಪಿಸಿ ಪೂಜಿಸಿ ಗೋಮಾತೆಯನ್ನು ನಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next