ಕಡೂರು: ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪ ನಮ್ಮ ಕುಟುಂಬದ್ದಾಗಿದೆ ಎಂದು ಲೋಕೋಪಯೋಗಿ ಮತ್ತು ನೀರಾವರಿ ಸಚಿವ ಎಚ್.ಡಿ. ರೇವಣ್ಣ ಭರವಸೆ ನೀಡಿದರು.
ಪಟ್ಟಣದ ಕೆಎಲ್‌ವಿ ವೃತ್ತದಲ್ಲಿ ಭಾನುವಾರ ಸಂಜೆ ಹಾಸನ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಮದಗ, ಅಯ್ಯನಕೆರೆಯನ್ನು ತುಂಬಿಸುವ ಹೆಬ್ಬೆ ನೀರಾವರಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರಕಾರವು ನೂರು ಕೋಟಿ ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರಕಾರ
ಸಿದ್ದವಿದೆ. ಗೊಂದಿ ಅಣೆಕಟ್ಟು ಯೋಜನೆ ಸರಕಾರದ ಮುಂದಿದೆ. ಪರಿಶೀಲನೆ ಬಳಿಕ ಅದರ ಜಾರಿಗೂ ಯತ್ನಿಸಲಾಗುವುದು ಎಂದರು.
ಅಮೃತ್‌ಮಹಲ್ ಕಾವಲು ಪ್ರದೇಶದಲ್ಲಿ ಪಶುಸಂಗೋಪನಾ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಸ್ಥಳ ನಿಗದಿಗೆ ಚುನಾವಣೆ ಬಳಿಕ ಕಾರ್ಯಪ್ರವೃತ್ತವಾಗಲಿದೆ. ಮಾಜಿ ಪ್ರಧಾನಿ ದೇವೇಗೌಡರನ್ನು ಸತತ ಗೆಲ್ಲಿಸಿ ಬೆಂಬಲಿಸಿರುವ ಈ ಕ್ಷೇತ್ರದ ಜನರ ಋಣ ನಮ್ಮ ಕುಟುಂಬದ ಮೇಲಿದೆ.
ಕ್ಷೇತ್ರದ ಅಭಿವೃದ್ಧಿಗೆ ಕಠಿಬದ್ಧವಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿದರು. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರವು ಮೈತ್ರಿ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಯ ಅನೇಕ ಕಾಂಗ್ರೆಸ್ ಮುಖಂಡರ ಮನೆಗೆ ತಾವು ತೆರಳಿದಾಗ ಅವರ
ಹೃದಯಸ್ಪರ್ಶಿ ಸ್ವಾಗತ ತಮಗೆ ನವಚೈತನ್ಯ ತಂದಿದೆ ಎಂದು ಸಮತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆದರೂ ಇಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ದೃಢತೆಯಿಂದ ಕೆಲಸ ಮಾಡಬೇಕು ಎಂದರು. ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್ ಮಾತನಾಡಿ, ಮೈತ್ರಿಕೂಟದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಮೊದಲು ತಮ್ಮ ಮನಸ್ಥಿತಿಯನ್ನು ಒಗ್ಗಟ್ಟಿನತ್ತ ತರಲಿ. ಬಿಜೆಪಿ ಮೈತ್ರಿಕೂಟದ ದೌರ್ಬಲ್ಯವನ್ನು ಲಾಭ ಮಾಡಿಕೊಂಡು ಮತ ಪಡೆಯಲು ಹೊಂಚು ಹಾಕುತ್ತಿದೆ. ಇದರಿಂದ ಅದಕ್ಕೆ ಬ್ರಹ್ಮನಿರಸನವಾಗುವುದು ಖಂಡಿತ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಹೈನುಗಾರಿಕೆಯ ಹರಿಕಾರ ಎಂದು ಕಲೆಸಿಕೊಳ್ಳುವ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರನ್ನು ಗೆಲ್ಲಿಸಲು ಸಂಘಟಿತರಾಗಿ ದುಡಿಯೋಣ ಎಂದು ಹೇಳಿದರು. ಮಾಜಿ ಶಾಸಕ ವೈ.ಎಸ್.ವಿ. ದತ್ತ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಮಾತನಾಡಿದರು.
ಜಿಪಂ ಸದಸ್ಯರಾದ ಲೋಲಾಕ್ಷಿಬಾಯಿ, ಶರತ್ ಕೃಷ್ಣಮೂರ್ತಿ, ತಾ.ಪಂ ಅಧ್ಯಕ್ಷೆ ಭಾರತಿ ಪ್ರಹ್ಲಾದ್, ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ನಗರಘಟಕ ಅಧ್ಯಕ್ಷ ಭಂಡಾರಿ
ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.