Advertisement

ಫಿನ್‌ಟೆಕ್‌ ಹಬ್‌ ಆಗಿ ಮಂಗಳೂರು ಅಭಿವೃದ್ಧಿಗೆ ಬದ್ಧ ; ಸಚಿವ ಡಾ|ಅಶ್ವತ್ಥನಾರಾಯಣ

01:36 AM Dec 17, 2022 | Team Udayavani |

ಮಂಗಳೂರು: ಹಲವು ಬ್ಯಾಂಕ್‌ಗಳ ತವರೆನಿಸಿರುವ ಮಂಗಳೂ ರನ್ನು ಫಿನ್‌ಟೆಕ್‌ ಹಬ್‌ ಆಗಿ ರೂಪಿಸಲು ಸಾಕಷ್ಟು ಅವಕಾಶಗಳಿವೆ ಹಾಗೂ ಈ ಕುರಿತು ಕಾರ್ಯಪಡೆ ನೀಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಡಾ|ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಕೆಡಿಇಎಂ ವತಿಯಿಂದ ಹಮ್ಮಿ ಕೊಂಡಿರುವ “ಮಂಗಳೂರು ಟೆಕ್ನೋ ವಾಂಜಾ’ ಸಮಾವೇಶದಲ್ಲಿ ಶುಕ್ರವಾರ ಅವರು ಐಟಿ ಹಾಗೂ ಇತರ ಕಂಪೆನಿ ಸಿಇಒಗಳ ಜತೆ ಸಂವಾದ ನಡೆಸಿದರು.

ಫಿನ್‌ಟೆಕ್‌, ಮೆಡ್‌ಟೆಕ್‌ ಆದ್ಯತೆ
ರಾಜ್ಯದಲ್ಲಿ ಐಟಿ ಹಾಗೂ ಐಟಿ ಪೂರಕ ಸೇವೆಗಳೊಂದಿಗೆ, ಎವಿಜಿಸಿ (ಎನಿಮೇಶನ್‌, ವಿಷುವಲ್‌ಎಫೆಕ್ಟ್ Õ, ಗೇಮಿಂಗ್‌, ಕಾಮಿಕ್ಸ್‌), ಫಿನ್‌ಟೆಕ್‌ ಹಾಗೂ ಮೆಡ್‌ಟೆಕ್‌ ಕ್ಷೇತ್ರಗಳನ್ನು ನಾವು ಆದ್ಯತೆಯ ಕ್ಷೇತ್ರಗಳಾಗಿ ಪರಿಗಣಿಸಿದ್ದೇವೆ, ಭವಿಷ್ಯದಲ್ಲಿ ಅವುಗಳ ಮೂಲಕ ಸಾಕಷ್ಟು ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದು ತಿಳಿಸಿದರು.

ರಾಜ್ಯದ 2025ರ ಸ್ಟಾರ್ಟ್‌ ಅಪ್‌ ಗುರಿಯಾದ 22 ಸಾವಿರ ನವೋ ದ್ಯಮ ಸ್ಥಾಪನೆ ಸಾಧಿಸಲಾಗಿದೆ, ಇದನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗುವ ಕೆಲಸ ಮಾಡಲಾಗುವುದು. ಮಂಗಳೂರು, ಮೈಸೂರು, ಬೆಳಗಾವಿ ಕ್ಲಸ್ಟರ್‌ ಈ ಮೂರರಲ್ಲಿ ಬಿಯಾಂಡ್‌ ಬೆಂಗಳೂರು ಯೋಜನೆಯಂತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂದರು.

ಕರ್ಣಾಟಕ ಬ್ಯಾಂಕ್‌ನಿಂದ
ಫಿನ್‌ಟೆಕ್‌ ಸೆಲ್‌
ಕರ್ಣಾಟಕ ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು ಮಾತನಾಡಿ, ಸರಕಾರ ಫಿನ್‌ಟೆಕ್‌ ಪಾರ್ಕ್‌ ಸ್ಥಾಪನೆಗೆ ಆದ್ಯತೆ ನೀಡಬೇಕು, ಖಾಸಗಿ ಪಾರ್ಕ್‌ಗಳಿದ್ದರೂ ಅವುಗಳಲ್ಲಿ ಮೂಲ ಸೌಕರ್ಯ ಇರುವುದಿಲ್ಲ ಎಂದರಲ್ಲದೆ ಕರ್ಣಾಟಕ ಬ್ಯಾಂಕ್‌ನಲ್ಲಿ ಎಲ್ಲ ರೀತಿಯ ಪ್ರೋತ್ಸಾಹದೊಂದಿಗೆ ಫಿನ್‌ಟೆಕ್‌ ಸೆಲ್‌ ತೆರೆಯಲಾಗುವುದು ಎಂದು ಪ್ರಕಟಿಸಿದರು. ಸೈಬರ್‌ ಉತ್ಕೃಷ್ಟತಾ ಕೇಂದ್ರಕ್ಕೆ ಬ್ಯಾಂಕ್‌ ಮೂಲಕ ಪ್ರೋತ್ಸಾಹ ನೀಡುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ ಎಂದರು.

Advertisement

99 ಗೇಮ್ಸ್‌ನ ಸಿಇಒ ರೋಹಿತ್‌ ಭಟ್‌ ಮಾತನಾಡಿ, ಮಂಗಳೂರು ಕ್ಲಸ್ಟರ್‌ ಸದ್ಯ 1 ದೊಡ್ಡ ಕಂಪೆನಿ, 120 ಐಟಿ ಸಣ್ಣ ಸಂಸ್ಥೆ ಹಾಗೂ 200 ಸ್ಟಾರ್ಟ್‌ಅಪ್‌ ಹೊಂದಿದ್ದು 2030ರ ವೇಳೆಗೆ 15 ದೊಡ್ಡ ಕಂಪೆನಿ, 125 ಕಂಪೆನಿ ಉಪಕೇಂದ್ರ, 3000 ಸ್ಟಾರ್ಟ್‌ಅಪ್‌ ಹಾಗೂ 1 ಲಕ್ಷ ಉದ್ಯೋಗದ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ರೇಝರ್‌ ಪೇ ಕಂಪೆನಿಯ ಸಿಎಫ್‌ಒ ಅರ್ಪಿತ್‌ ಅವರು ಫಿನ್‌ಟೆಕ್‌ ಕಾರ್ಯಪಡೆಯ ವರದಿಯನ್ನು ಮಂಡಿಸಿ, ಇದಕ್ಕೆ ಪೂರಕವಾಗಿ ಸರಕಾರವು ಕರ್ನಾಟಕ ಫಿನ್‌ಟೆಕ್‌ ನೀತಿ, ಫಿನ್‌ಟೆಕ್‌ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಬೇಕು, ಫಿನ್‌ಟೆಕ್‌ ಕುರಿತು ತರಬೇತಿ ಹಾಗೂ ಪ್ರೋತ್ಸಾಹದತ್ತ ಗಮನ ಕೊಡಬೇಕಿದೆ ಎಂದರು.

ಶಾಸಕ ವೇದವ್ಯಾಸ್‌ ಕಾಮತ್‌, ಡಾ| ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ.ವಿ. ರಮಣ ರೆಡ್ಡಿ, ರೂಪಾ ಮೌದ್ಗಿಲ್‌, ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಅಧ್ಯಕ್ಷ ಮೋಹನದಾಸ್‌ ಪೈ, ಉದ್ಯಮಿಗಳಾದ ಲಿಂಗರಾಜು ಸಾವ್‌ಕಾರ್‌, ಪ್ರವೀಣ್‌ ಕಲಾºವಿ, ಆಶಿತ್‌ ಹೆಗ್ಡೆ, ಗೌರವ್‌ ಹೆಗ್ಡೆ, ದೀಕ್ಷಿತ್‌ ರೈ, ಶಶಿರ್‌ ಶೆಟ್ಟಿ, ಬ್ರಿಟಿಷ್‌ ಹೈಕಮಿಷನರ್‌ ಕೆ.ಟಿ. ರಾಜನ್‌, ಎಸ್‌ಬಿಐನ ಸಿಜಿಎಂ ನಂದಕಿಶೋರ್‌, ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಗಣೇಶ್‌ ಕಾಮತ್‌, ಎಸ್‌ಟಿಪಿಐ ನಿರ್ದೇಶಕ ರವೀಂದ್ರ ಆರೂರ್‌, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮತ್ತಿತರರಿದ್ದರು. ಕೆಡಿಇಎಂ ಸಿಇಒ ಸಂಜೀವ್‌ ಗುಪ್ತ ನಿರೂಪಿಸಿದರು.

ಉದ್ಯಮಿಗಳ ಪ್ರಮುಖ ಬೇಡಿಕೆಗಳು
ಬೆಂಗಳೂರು – ಮಂಗಳೂರು ಸಂಪರ್ಕ ಸಮಯ 5 ಗಂಟೆಗೆ ಇಳಿಸಬೇಕು, ಶಿರಾಡಿ ಘಾಟ್‌ ಸುರಂಗ ಯೋಜನೆ ರದ್ದುಪಡಿಸುವುದು ಸರಿಯಲ್ಲ, ಅದಕ್ಕೆ ಪರ್ಯಾಯವನ್ನಾದರೂ ಯೋಜಿಸಲೇಬೇಕು.

ಮಂಗಳೂರಿಗೆ ಫಿನ್‌ಟೆಕ್‌ನಲ್ಲಿ ಬೇಡಿಕೆ ಸಾಕಷ್ಟಿದೆ, ಕೊಲ್ಲಿ ರಾಷ್ಟ್ರಗಳಿಂದ ಇಲ್ಲಿಗೆ ಹೆಚ್ಚು ಸಂಬಂಧ ಇರುವುದರಿಂದ ಬಂಡವಾಳ ಆಕರ್ಷಿಸಲು ಆ ದೇಶಗಳಲ್ಲಿ ರೋಡ್‌ ಶೋ ನಡೆಸಬೇಕು.

ಕೋವಿಡ್‌ ಬಳಿಕ ಮಂಗಳೂರಿನಲ್ಲಿ ಐಟಿ ಮೂಲಸೌಕರ್ಯಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಕಿಯೋನಿಕ್ಸ್‌ನವರ 3 ಎಕ್ರೆ ಜಾಗವನ್ನು ಕೆಡಿಇಎಂ ಲೀಸ್‌ಗೆ ಪಡೆದು ತ್ವರಿತವಾಗಿ 2 ಲಕ್ಷ ಚದರಡಿಯ ಜಾಗ ನಿರ್ಮಿಸಿ, ಐಟಿ ಕಂಪೆನಿಗಳಿಗೆ ಒದಗಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next