Advertisement

ಸರಕಾರಿ ಆಸ್ಪತ್ರೆಗಳ ಸುಸ್ಥಿತಿಗೆ ಬದ್ಧ: ಮಾನಕರ

02:35 PM May 17, 2019 | Suhan S |

ಬಾಗಲಕೋಟೆ: ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಸರಕಾರಿ ಆಸ್ಪತ್ರೆಗಳಿಗೆ ಕೊರತೆ ನೀಗಿಸಿ ಸುಸ್ಥಿತಿಗೆ ತರಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

Advertisement

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ ಆರೋಗ್ಯ ಇಲಾಖೆಯ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ಆಸ್ಪತ್ರೆಗಳು ಬರುವ ರೋಗಿಗಳಲ್ಲಿ ಅರ್ಧ ರೋಗ ವಾಸಿಯಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಆಸ್ಪತ್ರೆಗೆ ಬೇಕಾಗುವ ಚಿಕ್ಕ ಯಂತ್ರಗಳಿಂದ ಡಯಾಲಿಸಿಸ್‌ ಹಾಗೂ ಎಮ್‌ಆರ್‌ಐ ಸೇವೆ ಒದಗಿಸುವಲ್ಲಿ ಜಿಲ್ಲಾಡಳಿತ ತಯಾರಿದ್ದು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಚ್ಚಾಶಕ್ತಿ ಹೊಂದಬೇಕು ಎಂದರು.

ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಸೌಲಭ್ಯಗಳು ದೊರೆತರೆ ರೋಗಿಗಳು ಅನ್ಯ ಆಸ್ಪತ್ರೆಗಳ ಮೊರೆಹೋಗುವುದಿಲ್ಲ. ಆಸ್ಪತ್ರೆ ಆಕರ್ಷಣೆಗಾಗಿ ಆವರಣ ಸ್ವಚ್ಚತೆ ಶಿಸ್ತ್ತುಬದ್ದವಾದ ವಾರ್ಡ್‌ಗಳು ಉತ್ತಮ ಹಾಸಿಗೆ ಹೊಂದಿರಬೇಕು. ಚಿಕ್ಕ ಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಆಕರ್ಷಕವಾಗುವಂತಹ ಮತ್ತು ಗರ್ಭಿಣಿಯರಿಗೆ ಪೂರಕವಾದಂತ, ಅಂಗವಿಕಲರಿಗೆ, ಅಶಕ್ತರಿಗೆ ಬಾಗಿಲಲ್ಲಿಯೇ ವೀಲ್ಚೇರ್‌ ವ್ಯವಸ್ಥೆ ಮಾಡುವುದರ ಜೊತೆಗೆ ರೋಗಿಯು ಔಷಧ ಹಾಗೂ ಮಾತ್ರೆಗಳಿಗಾಗಿ ಬೇರೆ ಕಡೆ ಹೋಗದಂತಾಗಬಾರದು ಎಂದರು.

ಆಸ್ಪತ್ರೆಯಲ್ಲಿ ತೀರಿಹೋದ ಔಷಧಿಗಳ ಪಟ್ಟಿಯನ್ನು ಕೂಡಲೇ ತಯಾರಿಸಿ ರೋಗಿಗಳಿಗೆ ದೊರಕುವಂತಾಗಬೇಕು. ಇದಕ್ಕಾಗಿ ವೈದ್ಯಾಧಿಕಾರಿಗಳು 5000 ರೂ.ಗಳ ವರೆಗೆ ಖರ್ಚು ಮಾಡುವ ಅಧಿಕಾರ ಹೊಂದಿರುತ್ತಾರೆ. ಅಂತಹ ಪ್ರಸಂಗ ಬಂದಲ್ಲಿ ವೈದ್ಯರು ರೋಗಿಗಳಿಗೆ ಔಷಧಿ ತರಿಸಿಕೊಟ್ಟು ಅದನ್ನು ರೋಗಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

Advertisement

ಸುವ್ಯಸ್ಥಿತವಾದ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ದೊರೆತಾಗ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಕೀಳರಿಮೆ ಬಿಡಬೇಕು ಎಂದರು. ರೋಗಿಗಳ ಸಂಖ್ಯೆ ಹೆಚ್ಚಾದಂತೆಲ್ಲ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಒಂದು ವೇಳೆ ರೋಗಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರ ಕೊರತೆ ಕಂಡಲ್ಲಿ ಸ್ಥಳಿಯ ಖಾಸಗಿ ಆಸ್ಪತ್ರೆ ವೈದ್ಯರು ಕರೆದು ಚಿಕಿತ್ಸೆ ಕೊಡಿಸಬೇಕು. ಇದಕ್ಕಾಗಿ ಆ ವೈದ್ಯರಿಗೂ ಕೂಡ ಸಂಭಾವನೆ ನೀಡಲಾಗುವುದು. ಈ ಮೊದಲಿನ ಆಸ್ಪತ್ರೆಗಳು ಚಿಕ್ಕದಾಗಿದ್ದಲ್ಲಿ ಇನ್ನು ಹೆಚ್ಚಿನ ಕೊಠಡಿಗಳ ಹಾಗೂ ಯಂತ್ರೋಪಕರಣಗಳ ಕೊರತೆ ಇದ್ದಲ್ಲಿ ಜಿಲ್ಲಾ ಪಂಚಾಯತ ಗಣನೆ ತೆಗೆದುಕೊಂಡು ಪೂರೈಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಉತ್ತಮ ವಾತಾವರಣ ಒದಗಿಸಿಕೊಟ್ಟ ಹುನಗುಂದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕುಸುಮಾ ಮಾಗಿ ಕಾರ್ಯ ಶ್ಲಾಘಿಸಿದರು. ಬಾದಾಮಿ ಸರಕಾರಿ ಆಸ್ಪತ್ರೆಯ ಡಾ| ರೇವಣಸಿದ್ದಪ್ಪ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್‌.ದೇಸಾಯಿ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಗರ್ಭಿಣಿಯರಿಗೆ ಹಾಗೂ ಚಿಕ್ಕಮಕ್ಕಳಿಗೆ ರಕ್ತದ ಕೊರತೆ ನಿಗಿಸುವಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಪಂನಲ್ಲಿ ರಕ್ತದಾನ ಶಿಬಿರ ನಡೆಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮತಿ ನೀಡಿರು‌ವುಲ್ಲದೆ ಸ್ವತ ಅವರು ಹಾಗೂ ಅವರ ಪತಿಯವರು ರಕ್ತದಾನ ಮಾಡಿ ಮಾದರಿ ಆಗಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ಕುಟುಂಬ ಕಲ್ಯಾಣಾಧಿಕಾರಿ ಡಿ.ಬಿ. ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ಅಧಿಕಾರಿ ಜಯಶ್ರೀ ಯಮ್ಮಿ, ಡಾ| ವಿಜಯ ಕಂಠಿ ಉಪಸ್ಥಿತರಿದ್ದರು. ಈ ಮುನ್ನ ರಾಷ್ಟ್ರೀಯ ಡೆಂಗಿ ದಿನಾಚರಣೆ ನಿಮಿತ್ತ ಜಿಲ್ಲಾ ಆಸ್ಪತ್ರೆಯಿಂದ ವಿದ್ಯಾಗಿರಿ ಸರ್ಕಲ್ವರೆಗೆ ಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ಜಿಪಂ ಸಿಇಒ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next