ಕಲಬುರಗಿ: ಸರ್ಕಾರಿ ನೌಕರರ ಹಿತ ರಕ್ಷಣೆಗೆ ಸದಾ ಬದ್ಧತೆ ಹೊಂದಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಣಮಂತ (ರಾಜು) ಲೇಂಗಟಿ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರರ ಪಾತ್ರ ಅನನ್ಯ. ಕಾರ್ಯಭಾರದ ಒತ್ತಡದ ನಡವೆಯೂ ಅನೇಕ ಇಲಾಖೆಗಳಲ್ಲಿ ನಮ್ಮ ನೌಕರರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೇತನ ತಾರತಮ್ಯ, ವ್ಯತ್ಯಾಸ, ತುಟ್ಟಿಭತ್ಯೆ ಸೇರಿದಂತೆ ನೌಕರರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಕರ್ಯಗಳನ್ನು ರಾಜ್ಯಾಧ್ಯಕ್ಷರ ಜೊತೆ ಗೂಡಿ ಒದಗಿಸಿಕೊಡಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.
ನ್ಯಾಯವಾದಿ ಸುನೀಲಕುಮಾರ ವಂಟಿ ಮಾತನಾಡಿ, ಲೇಂಗಟಿ ಅವರು ಕೇವಲ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಕುಂದು ಕೊರತೆಗಳ ಜತೆಗೆ ನಮ್ಮ ಭಾಗದ ಅನೇಕ ಮಠ-ಮಂದಿರಗಳ ಮೂಲಕ ಜರುಗುವ ಸಮಾಜಮುಖೀ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುತ್ತಾರೆ ಎಂದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್ .ಬಿ.ಪಾಟೀಲ, ಮುಖಂಡರಾದ ಬಸಯ್ಯ ಸ್ವಾಮಿ ಹೊದಲೂರ, ಎಂ.ಬಿ. ನಿಂಗಪ್ಪ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ್, ದೇವೇಂದ್ರಪ್ಪ ಗಣಮುಖೀ, ಸಿದ್ದಲಿಂಗಪ್ಪ ಎನ್.ಬಾಗಲಕೋಟ್, ಸಿದ್ದಯ್ಯ ಮಠಪತಿ, ಹಣಮಂತ ಮರಡಿ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.