ರಾಮನಗರ: ಭಾರತದಲ್ಲಿ ದಾಖಲೆಯಾಗದ ಸಾವಿರಾರು ಜಾನಪದ ಕಲೆಗಳು ಇನ್ನೂ ಇವೆ. ಕೆಲವು ಕಲೆಗಳು ಕಲಾಸಕ್ತರಿಂದ ಪೋಷಿಸಲ್ಪಟ್ಟು ಮೂಲ ರೂಪವನ್ನು ಹಾಗೆ ಉಳಿಸಿಕೊಂಡಿವೆ. ಯಾವ ಕಾಲಘಟ್ಟದಲ್ಲೂ ಜಾನಪದ ಕಲೆಗಳು ನಾಶವಾಗಿಲ್ಲ. ಆದರೆ, ಅವುಗಳ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಸಲಹೆ ನೀಡಿದರು.
ಜಾನಪದ ಕಲಾವಿದರಿಗೆ ಮನ್ನಣೆ ಇಲ್ಲ: ದೇಶದಲ್ಲಿ ಶಿಷ್ಟ ಕಲಾವಿದರಿಗೆ ಸಿಗುವ ಗೌರವ ಹಾಗೂ ಮನ್ನಣೆಗಳು ಜಾನಪದ ಕಲಾವಿದರಿಗೆ ದೊರಕುತ್ತಿಲ್ಲ. ಆದರೂ ಕಲೆಯನ್ನು ಜೀವನವನ್ನಾಗಿ ಮುಂದುವರಿಸುತ್ತಿರುವ ಕಲಾವಿದರಿಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಬತ್ತಿಹೋಗಿಲ್ಲ. ಜಾನಪದ ಕಲೆಗಳ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು ಎಂದು ಹೇಳಿದರು.
ಜಾನಪದ ಕಲೆಗಳ ಉಳಿವು ಎಲ್ಲರ ಹೊಣೆ: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂ.ಪ.ನಾಗರಾಜಯ್ಯ ಮಾತನಾಡಿ, ಜಾನಪದ ಕಲೆಗೆ 5ನೇ ಶತಮಾನದ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಸಾಹಿತ್ಯದಲ್ಲಿಯೂ ಮನ್ನಣೆ ನೀಡಲಾಗಿತ್ತು. ತಮ್ಮ ಅಭಿಪ್ರಾಯಕ್ಕೆ ಇತಿಹಾಸದ ಆಧಾರಗಳಿವೆ. ಅದರ ಅಧ್ಯಯನದಿಂದ ವ್ಯಕ್ತವಾಗುತ್ತವೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ಕಲೆಯ ಉಳಿವಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ಜಾನಪದ ಕಲೆಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಜಾನಪದ ಕಲೆಯಲ್ಲಿ ಆಸಕ್ತಿ ಇರಲಿ: ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಯುವ ಸಮುದಾಯ ದೇಶಿ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಕಲಿಯಬೇಕು. ರಾಜ್ಯ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ. ಅಧಿಕಾರಿಗಳು ಕಲಾವಿದರು ಮಾಶಾಸನಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರ ವಿಲೇವಾರಿ ಮಾಡಿ ಅರ್ಹರೆಲ್ಲರಿಗೂ ಮಶಾಸನ ಸಿಗುವಂತೆ ವ್ಯವಸ್ಥೆ ಮಾಡಬೇಕಾಗಿದೆ. ಕಲಾವಿದರ ರಕ್ಷಣೆಗೆ ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಸಹ ಶ್ರಮಿಸಬೇಕು ಎಂದರು.
Advertisement
ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಅಖೀಲ ಭಾರತ ಜನಪದ ಮತ್ತು ಬುಡಕಟ್ಟು ಕಲಾ ಪರಿಷತ್, ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಸಹಯೋಗದೊಂದಿಗೆ ನಡೆದ ವಿಶ್ವ ಜಾನಪದ ದಿನಾಚರಣೆ – 2019 ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ವಿಶ್ವದ ಎಲ್ಲಾ ಕಲೆಗಳ ಮೂಲ ಜಾನಪದ. ಜಾನಪದ ಮಾನವನ ಶ್ರಮ ಸಂಸ್ಕೃತಿಯಿಂದ ಹುಟ್ಟಿಕೊಂಡಿದೆ. ಶ್ರಮದ ದಣಿವು ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ ಹಾಗೂ ವಾದ್ಯ ಸಂಗೀತ ಕಲೆಗಳು ಇಂದು ಜಾನಪದ ಕಲಾ ಪ್ರಕಾರಗಳಾಗಿ ಮುಂದುವರಿದಿವೆ ಎಂದರು.
Related Articles
Advertisement
ಹಿರಿಯ ಕಲಾವಿದರಿಗೆ ಗೌರವ: ಕಲಬುರ್ಗಿಯ ಗೀಗಿಮೇಳ ಕಲಾವಿದೆ ಶಕುಂತಲಾ ನಾಯಕ್, ಚಿತ್ರದುರ್ಗದ ಗೊರವ ಕಲಾವಿದ ಮೈಲಾರಪ್ಪ, ಕೋಲಾರದ ಫಂಡರಿ ಭಜನೆ ಕಲಾವಿದ ತೋಪಲ್ಲಿ ಬಸವರಾಜು, ಚನ್ನಪಟ್ಟಣ ಗೊರವ ಕಲಾವಿದ ಪೂಜಾರಿ ಮಲ್ಲಯ್ಯ, ಮಂಡ್ಯದ ನೀಲಗಾರ ಕಲಾವಿದ ಪುರಿಗಾಲಿ ಮಹದೇವಸ್ವಾಮಿ ಅವರನ್ನು ಗೌರವಿಸಲಾಯಿತು. ಜಾನಪದ ಲೋಕದಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತಿಯಾದ ಬೈರನಹಳ್ಳಿ ಶಿವರಾಂ ಹಾಗೂ ಪುಟ್ಟಸ್ವಾಮಿ ಅವರನ್ನು ಗಣ್ಯರು ಗೌರವಿಸಿದರು. ಬೆಂಗಳೂರು ವಿವಿ ಕನ್ನಡ ಅಧ್ಯನ ಕೇಂದ್ರದ ನಿರ್ದೇಶಕ ಡಾ.ಬಿ.ಗಂಗಾಧರ್, ಸಹ ಪ್ರಾಧ್ಯಾಪಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಕರ್ನಾಟಕ ಜಾನಪದ ಪರಿಷತ್ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಹಿರಿಯ ತೊಗಲುಗೊಂಬೆ ಕಲಾವಿದೆ ಗೌರಮ್ಮ, ಜಾನಪದ ಲೋಕ ಆಡಳಿತಾಧಿಕಾರಿ ಡಾ.ಕುರುವ ಬಸವರಾಜು, ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲಸಿದ್ದರಾಜು, ಎಐಎಫ್ಟಿಎ ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಸನ ರಘು ಉಪಸ್ಥಿತರಿದ್ದರು.
ಪೂರ್ವ ಭಾರತದ ಕಲೆ ಅನಾವರಣ:
ಜಾನಪದ ಲೋಕದಲ್ಲಿ ಗುರುವಾರ ವಿಶ್ವ ಜಾನಪದ ದಿನಾಚರಣೆ – 2019ರ ಅಂಗವಾಗಿ ಪೂರ್ವ ಭಾರತದ ಅರುಣಾಚಲ ಪ್ರದೇಶ, ಮೇಘಾಲಯ, ಅಸ್ಸಾಂ, ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳ ಜಾನಪದ ಕಲಾ ತಂಡಗಳು ನೀಡಿದ ಜಾನಪದ ನೃತ್ಯಗಳ ಅದ್ಬುತ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು. ಅರುಣಾಚಲ ಪ್ರದೇಶದ ಕಲಾವಿದರು ಬ್ರೊ-ಜಾಯಿ, ಮೇಘಾಲಯದ ಕಲಾವಿದರು ಶಾದ್, ಸ್ನಗೈ, ಅಸ್ಸಾಂನ ಕಲಾವಿದರು ಧಮಾಯಿ, ಕಿಕನ್, ಮಣಿಪುರದ ಕಲಾವಿದರು ಲೈಹಾರೊಬ, ಟಾಂಗ್ಟ್, ತ್ರಿಪುರದ ಕಲಾವಿದರು ಹೊಜಾಗಿರಿ, ನಾಗಾಲ್ಯಾಂಡ್‌ನ ಕಲಾವಿದರ ಯುದ್ಧ ವೀರಕುಣಿತ, ಮಿಜೊರಾಂ ಕಲಾವಿದರ ಸರ್ಲಾಮ್ಕೈ ಪ್ರದರ್ಶನ ಪ್ರೇಕ್ಷಕರ ಮನ ಸೂರೆಗೊಂಡಿತು. ಪ್ರದರ್ಶನ ನೀಡಿದ ಕಲಾವಿದರು ತಮ್ಮ ಸಂಸ್ಕೃತಿ, ಪರಂಪರೆಯ ಬಣ್ಣ ಬಣ್ಣದ ಧಿರಿಸುಗಳು, ಧಿರಿಸಿನ ಅಂದ ಇಮ್ಮಡಿಗೊಳಿಸುವ ಅಲಂಕಾರಿಕ ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಧರಿಸಿ ನೀಡಿದ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ ಆದರು. ಪೂರ್ವ ಭಾರತದ ಕಲಾವಿದರೊಟ್ಟಿಗೆ ಆಂಧ್ರ ಪ್ರದೇಶದ ಹುಲಿ ಕುಣಿತ ಹಾಗೂ ರಾಜಸ್ಥಾನದ ಜಾನಪದ ತಂಡಗಳು ತಮ್ಮ ಕಲೆ ಪ್ರದರ್ಶನ ನೀಡಿದವು. ಕರ್ನಾಟಕದ ಕಲಾ ತಂಡಗಳು ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ನಗಾರಿ ವಾದ್ಯ ಹಾಗೂ ಪಟ ಕುಣಿತ ಪ್ರದರ್ಶನ ನೀಡಿ ನಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಪ್ರದರ್ಶನ ನೀಡಿದರು. ದಕ್ಷಿಣ ಭಾರತದ ಕಲಾವಿದರು ಪೂರ್ವ ಭಾರತದ ಕಲಾ ಪ್ರದರ್ಶನವನ್ನು, ಪೂರ್ವ ಭಾರತದ ಕಲಾವಿದರಿಗೆ ದಕ್ಷಿಣ ರಾಜ್ಯಗಳ ಕಲೆಗಳನ್ನು ತದೇಕಚಿತ್ತದಿಂತ ನೋಡತ್ತಿದ್ದದ್ದು ಸಾಮಾನ್ಯವಾಗಿತ್ತು.
ಹೃದಯ ತುಂಬಿ ಬಂದ ಕ್ಷಣ:
ಪೂರ್ವ ಭಾರತ ರಾಜ್ಯಗಳ ಕಲಾ ತಂಡಗಳು, ರಾಜಾಸ್ಥಾನ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ಸುಮಾರು 15 ಕಲಾ ತಂಡಗಳ ನೂರಕ್ಕೂ ಹೆಚ್ಚು ಕಲಾವಿದರು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು, ಗಣ್ಯರೊಟ್ಟಿಗೆ ಕ್ಯಾಮರಾಗಳಿಗೆ ಫೋಸು ಕೊಟ್ಟರು. ತದ ನಂತರ ಭಾರತ ಮಾತಾ ಕಿ ಜೈ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿ ತಾವೆಲ್ಲ ಭಾರತೀಯರು ಎಂಬ ಭಾವನೆ ವ್ಯಕ್ತಪಡಿಸಿದರು. ಈ ಕ್ಷಣವನ್ನು ಕಂಡ ಅನೇಕ ಪ್ರೇಕ್ಷಕರ ಹೃದಯ ತುಂಬಿ ಬಂತು. ಅಪ್ಪಟ ಭಾರತೀಯ ಕಲಾ ಪ್ರಪಂಚ ಜಾನಪದ ಲೋಕದಲ್ಲಿ ಅನಾವರಣಗೊಂಡಿದೆ ಎಂದು ಪ್ರೇಕ್ಷಕರು ಮೆಚ್ಚುಗೆಯ ನುಡಿಗಳನ್ನಾಡಿದರು.