ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಪ್ರತಿಯೊಬ್ಬರೂ ತಮ್ಮ ಮನೆಯಂಗಳದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದ ಬಿಬಿ ರಸ್ತೆಯಲ್ಲಿ ನಗರಸಭೆಯಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಕೇವಲ ಘೋಷಣೆಯಿಂದ ಸಾಧ್ಯವಿಲ್ಲ, ಸಮಾಜದಲ್ಲಿರುವ ಪ್ರತಿಯೊಬ್ಬರೂ ಪರಿಸರದ ಮಹತ್ವವನ್ನು ಅರಿತು ಸಸಿಗಳನ್ನು ನೆಟ್ಟು, ಅದನ್ನು ಪೋಷಣೆ ಮಾಡುವ ಕೆಲಸವನ್ನು ಮಾಡಬೇಕು. ಆ ಮೂಲಕ ಪರಿಸರ ಸಂರಕ್ಷಣೆ ಮಾಡಲು ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು.
2023ಕ್ಕೆ ವೈದ್ಯಕೀಯ ಕಾಲೇಜು ಉದ್ಘಾಟನೆ: ರಾಜಧಾನಿ ಬೆಂಗಳೂರಿಗೆ ಸಮೀಪ ಇರುವ ಚಿಕ್ಕಬಳ್ಳಾಪುರ ನಗರವನ್ನು ರಾಜ್ಯದಲ್ಲಿಯೇ ಮಾದರಿ ಮಾಡಲು ಸಂಕಲ್ಪ ಮಾಡಿದ್ದೇನೆ, ಈಗಾಗಲೇ ರೈತರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದೆ. ಮುಂದಿನ ವರ್ಷದಲ್ಲಿ ಅದನ್ನು ಲೋಕಾರ್ಪಣೆ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ನಗರವನ್ನು ಸ್ವಚ್ಛ, ಸುಂದರವಾಗಿಡಲು ವಿನೂತನ ಯೋಜನೆಗಳನ್ನು ರೂಪಿಸಲಾಗಿದೆ. ಅದನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಅರಿವು ಮೂಡಿಸಿ: ಚಿಕ್ಕಬಳ್ಳಾಪುರ ನಗರ ಮಾತ್ರವಲ್ಲದೇ, ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಬೇಕು, ಸಸಿಯನ್ನು ನೆಟ್ಟು ಪೋಷಣೆ ಮಾಡುವುದರಿಂದ ಸಮಾಜಕ್ಕೆ ಆಗುವ ಅನುಕೂಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಧಿ ಕಾರಿಗಳೊಂದಿಗೆ ಜನಪ್ರತಿನಿ ಗಳು, ಸಂಘ ಸಂಸ್ಥೆಗಳು ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ನಗರಸಭಾ ಸದಸ್ಯರಾದ ಯತೀಶ್, ಮಂಜುನಾಥಾಚಾರಿ, ಸುಬ್ರಹ್ಮಣ್ಯಾಚಾರಿ, ಮೊಹ್ಮದ್ ಜಾಫರ್, ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಆನಂದ್, ಮಂಜುನಾಥ್(ಎಂಎಲ್‌ಎ), ಪೌರಾಯುಕ್ತ ಉಮಾಶಂಕರ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.