ಬೆಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ- ಸಿಬ್ಬಂದಿ ಮುಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೊಂಡು ಇನ್ನಷ್ಟು ಆತ್ಮಸ್ಥೈರ್ಯದಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಲಹೆ ನೀಡಿದರು.
ಗುರುವಾರ ಸಾಮಾಜಿಕ ಜಾಲತಾಣ ಯುಟ್ಯೂಬ್ ಮೂಲಕ ನಗರದ 28 ಸಾವಿರ ಅಧಿಕಾರಿ-ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ಪೊಲೀಸ್ ಅಧಿಕಾರಿ-ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರ ಆತಂಕ ಅರ್ಥವಾಗುತ್ತದೆ. ಆದರೂ ಧೃತಿಗೆಡದೆ ಪ್ರತಿಯೊಬ್ಬರು ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಸರ್ಕಾರದ ಸೂಚನೆಯಂತೆ ಕರ್ತವ್ಯ ನಿರ್ವಹಿಸಬೇಕಿದೆ. ಕೊರೊನಾಗೆ ಹೆದರಬಾರದು.
ಸೋಂಕಿತರ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ ವಹಿಸಿದ್ದೇನೆ. ದಿನಕ್ಕೆ ಮೂರು ಬಾರಿ ಅವರ ಆರೋಗ್ಯದ ಬಗ್ಗೆ ವೈದ್ಯರು, ಡಿಸಿಪಿಗಳ ಜತೆ ಚರ್ಚಿಸುತ್ತಿದ್ದೇನೆ. ಅವರ ಕುಟುಂಬ ಸದಸ್ಯರ ಬಗ್ಗೆಯೂ ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಆಯಾ ಡಿಸಿಪಿಗಳು ಮಾಡುತ್ತಿದ್ದಾರೆ ಎಂದರು. ಕ್ವಾರಂಟೈನ್ ಮಾಡುವಾಗಲು ಉತ್ತಮ ಸ್ಥಳ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಎಲ್ಲಾ ಹಂತದ ಸಿಬ್ಬಂದಿಯ ಆರೋಗ್ಯ ತಪಾಸಣೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಸಿಬ್ಬಂದಿ ಕೊರೊನಾ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಏನೇ ಫಲಿತಾಂಶ ಬಂದರೂ ಚಿಕಿತ್ಸೆ ಪಡೆದುಕೊಳ್ಳಬೇಕು. ಎಂತಹ ಸ್ಥಿತಿ ಬಂದರೂ ಮನೋಬಲ ಕಳೆದುಕೊಳ್ಳದೆ ಎದುರಿಸಲು ಸಿದ್ದರಾಗಬೇಕಿದೆ. ಸರ್ಕಾರ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಅದನ್ನು ಉಳಿಸಿಕೊಳ್ಳುವ ಹೊಣೆ ಎಲ್ಲರ ಮೇಲಿದೆ ಎಂದು ಧೈರ್ಯ ತುಂಬಿದರು.
ಎಲ್ಲರಿಗೂ ಧನ್ಯವಾದಗಳು: ಲಾಕ್‌ಡೌನ್ ಸಂದರ್ಭದಲ್ಲಿ ಕಾನ್‌ಸ್ಟೆಬಲ್‌ನಿಂದ ಹೆಚ್ಚುವರಿ ಪೊಲೀಸ್ ಆಯುಕ್ತ ರವರೆಗೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಕೆಲಸದೊತ್ತಡ ಹೆಚ್ಚಾಗಿದೆ. ಈ ಮಧ್ಯೆ ಇಬ್ಬರು ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ ಎಂಬುದು ಬೇಸರದ ಸಂಗತಿ. ಆದರೂ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಕಂಟೈನ್ಮೆಂಟ್, ಸೀಲ್‌ಡೌನ್ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೀರಾ.
ಪ್ರತಿ ಠಾಣೆಯಲ್ಲಿ ಎಲ್ಲ ಪೊಲೀಸರು ಮುಂಜಾ ಗ್ರತಾ ಕ್ರಮಗಳನ್ನು ಪಾಲಿಸಿ, ಎಚ್ಚರಿಕೆಯಿಂದ ಕೆಲಸ ಮಾಡ ಬೇಕು. ಎಸ್‌ಡಿಆರ್‌ಎಫ್ ಅಡಿಯಲ್ಲಿ ಡಿಜಿಪಿ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಸೂಚಿಸಿದ್ದಾರೆ ಎಂದು ಹೇಳಿದರು. ಇದರೊಂದಿಗೆ ಕೆಲವೊಂದು ಪೊಲೀಸರು ತಮ್ಮ ಸ್ವಂತ ಖರ್ಚಿನಿಂದ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದು ನಿಜವಾಗಲೂ ಹೆಮ್ಮೆಯ ವಿಚಾರ ಎಂದು ಧನ್ಯವಾದ ತಿಳಿಸಿದರು.