Advertisement

ಮಳೆ ಪರಿಹಾರ ಅವ್ಯವಹಾರ ತನಿಖೆಗೆ ಆಯುಕ್ತರ ಆದೇಶ

11:35 AM Nov 29, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಅನಾಹುತಕ್ಕೆ ಒಳಗಾದ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ವಿಶೇಷ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶಿಸಿದ್ದಾರೆ.

Advertisement

ನಗರದಲ್ಲಿ ಎರಡು ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಹಲವಾರು ಭಾಗಗಳಲ್ಲಿನ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು, ಮನೆಗಳಿಗೆ ನೀರು ನುಗ್ಗಿ ತೊಂದರೆಗೊಳಗಾದ ಕುಟುಂಬಗಳನ್ನು ಗುರುತಿಸಿ ಪರಿಹಾರ ನೀಡುವಂತೆ ಸೂಚಿಸಿದ್ದರು. 

ಬಿಬಿಎಂಪಿಯು ಸುಮಾರು 2-3 ಸಾವಿರ ಮನೆಗಳಿಗೆ ನೀರು ನುಗ್ಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಹಾರ ವಿತರಣೆ ವೇಳೆ ಒಂದೇ ವಾರ್ಡ್‌ನಲ್ಲಿ 1,271 ಕುಟುಂಬಗಳಿಗೆ ಪ್ರವಾಹ ಸಂತ್ರಸ್ತರೆಂದು ಪರಿಹಾರ ನೀಡಲಾಗಿದೆ. ಇದರಲ್ಲಿ ಮೊದಲ ಮಹಡಿಯಲ್ಲಿ ವಾಸಿಸುವ ಕುಟುಂಬಗಳಿಗೂ ಪರಿಹಾರ ನೀಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತನಿಖೆ ನಡೆಸುವಂತೆ ಆಯುಕ್ತರು ಆದೇಶಿಸಿದ್ದಾರೆ. 

ಜೆಪಿ ಪಾರ್ಕ್‌ ವಾರ್ಡ್‌ನಲ್ಲಿ ಸ್ಥಳೀಯ ಪಾಲಿಕೆ ಸದಸ್ಯರು 21 ಮನೆಗಳಿಗೆ ನೀರು ನುಗ್ಗಿದ್ದು ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬರೋಬ್ಬರಿ 1,271 ಮಂದಿಗೆ ತಲಾ 5,200 ರೂ.ಗಳಂತೆ 66.11 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. 

ಇದಲ್ಲದೆ ಯಶವಂತಪುರ ವಾರ್ಡ್‌ನಲ್ಲಿ 882 ಕುಟುಂಬಗಳಿಗೆ 53.35 ಲಕ್ಷ ರೂ., ಎಚ್‌ಎಂಟಿ ವಾರ್ಡ್‌ನಲ್ಲಿ 165 ಕುಟುಂಬಗಳಿಗೆ 8.58 ಲಕ್ಷ ರೂ., ಲಕ್ಷ್ಮೀದೇವಿನಗರ ವಾರ್ಡ್‌ನಲ್ಲಿ 720 ಕುಟುಂಬಗಳಿಗೆ 37.44 ಲಕ್ಷ ರೂ., ಲಗ್ಗೆರೆ ವಾರ್ಡ್‌ನಲ್ಲಿ 743 ಕುಟುಂಬಗಳಿಗೆ 39.43 ಲಕ್ಷ ರೂ., ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿ 434 ಸಂತ್ರಸ್ತ ಕುಟುಂಬಗಳಿಗೆ 25.50 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 

Advertisement

ಅದೇ ರೀತಿ ಜ್ಞಾನಭಾರತಿ ವಾರ್ಡ್‌ನಲ್ಲಿ 129 ಮಂದಿಗೆ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಧರಿಸಿದ್ದು, 84 ಮಂದಿಗೆ 4.36 ಲಕ್ಷ ರೂ. ಮೊತ್ತದ ಪಾವತಿ ಬಾಕಿಯಿದೆ ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರು ಹೇಳಿದ್ದಾರೆ. ಆ ಮೂಲಕ ರಾಜರಾಜೇಶ್ವರಿನಗರ ಕ್ಷೇತ್ರ ಒಂದರಲ್ಲೇ 2.30 ಕೋಟಿಯಷ್ಟು ಹಣವನ್ನು ಮಳೆ ಪರಿಹಾರವಾಗಿ ನೀಡಲಾಗಿದ್ದು, ಮಹಾಲಕ್ಷ್ಮೀ ಬಡಾವಣೆಯಲ್ಲಿಯೂ ಇದೇ ರೀತಿ ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಿದ ಕುಟುಂಬಗಳನ್ನು ಗುರುತಿಸುವ ಜವಾಬ್ದಾರಿಯನ್ನು ಕಂದಾಯ ವಿಭಾಗದ ಅಧಿಕಾರಿಗಳಿಗೆ ನೀಡಲಾಗಿತ್ತು. ಈ ವೇಳೆ ಅರ್ಹರಲ್ಲದವರನ್ನೂ ಸಂತ್ರಸ್ತರ ಪಟ್ಟಿಗೆ ಸೇರಿಸಿ ಪರಿಹಾರ ನೀಡುವ ಬಗ್ಗೆ ತಿಳಿದು ಬಂದಿದ್ದು, ತನಿಖೆ ನಡೆಸಲು ವಿಶೇಷ ಆಯುಕ್ತರಿಗೆ ಆದೇಶಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಮೃತರ ಕುಟುಂಬಕ್ಕೆ ಪರಿಹಾರ ನೀಡದ ಬಿಬಿಎಂಪಿ 
ಬೆಂಗಳೂರು: ಮರ ಉರುಳಿ ಬಿದ್ದು ಬೈಕ್‌ ಸವಾರ ಫೈರೋಜ್‌ ಪಾಷಾ ಎಂಬುವರು ಮೃತಪಟ್ಟು ಒಂದೂವರೆ ವರ್ಷ ಕಳೆದರೂ ಮೃತರ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ ಸಿಕ್ಕಿಲ್ಲ. ಕಳೆದ ವರ್ಷ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಜೋರಾಗಿ ಬೀಸಿದ ಗಾಳಿಗೆ ಮರ ಉರುಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಪೈರೋಜ್‌ ಪಾಷಾ ಎಂಬುವರು ಮೃತಪಟ್ಟಿದ್ದರು.

ಆ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪಾಲಿಕೆಯಿಂದ ಒಂದು ಲಕ್ಷ ಪರಿಹಾರ ನೀಡುವುದಾಗಿ ಬಿಬಿಎಂಪಿ ಆಯುಕ್ತರ ಘೋಷಿಸಿ ಒಂದೂವರೆ ವರ್ಷ ಕಳೆದರೂ ಈವರೆಗೆ ಮೃತರ ಕುಟುಂಬಕ್ಕೆ ಪರಿಹಾರ ದೊರೆತಿಲ್ಲ. ಪರಿಹಾರಕ್ಕಾಗಿ ಸುಮಾರು 50ಕ್ಕೂ ಹೆಚ್ಚು ಬಾರಿ ಪಾಲಿಕೆಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಿದರೂ ಪರಿಹಾರ ಸಿಗಲಿಲ್ಲ ಎಂದು ಫೈರೋಜ್‌ ಪಾಷಾ ಕುಟುಂಬ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next