ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿರುವ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ನಗರದಲ್ಲಿರುವ ಎಲ್ಲಾ ಖಾಸಗಿ ಭದ್ರತಾ ಏಜೆನ್ಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಆದೇಶಿಸಿದ್ದಾರೆ.
ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಎಷ್ಟು ಖಾಸಗಿ ಭದ್ರತಾ ಸಂಸ್ಥೆಗಳಿವೆ? ಅವುಗಳಿಗೆ ಪರವಾನಿಗೆ ಇದೆಯೇ? ಇಲ್ಲವೇ? ಪರವಾನಗಿ ಇರುವ ಸಂಸ್ಥೆಗಳು ನವೀಕರಣ ಮಾಡಿಕೊಂಡಿವೆಯೇ? ಇಲ್ಲವೇ? ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ಹಾಗೆಯೇ ಆ ಸಂಸ್ಥೆಗಳ ಕಾರ್ಯವೈಖರಿ, ಸಿಬ್ಬಂದಿ ಕೆಲಸ ಮಾಡುವ ಸ್ಥಳ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸಬೇಕು. ಅಷ್ಟೇ ಅಲ್ಲದೆ, ಪ್ರತಿ ಠಾಣೆಯಲ್ಲಿಯೂ ತಮ್ಮ ವ್ಯಾಪ್ತಿಯಲ್ಲಿರುವ ಭದ್ರತಾ ಸಂಸ್ಥೆಗಳ ಹೆಸರು, ಮಾಲೀಕರು, ಸಿಬ್ಬಂದಿ ವಿವರವನ್ನೊಳಗೊಂಡ ಮಾಹಿತಿಯನ್ನು ಠಾಣೆಯ ನೋಂದಣಿ ಪುಸ್ತಕ(ರಿಜಿಸ್ಟರ್)ದಲ್ಲಿ ಉಲ್ಲೇಖೀಸಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆಂದು ಮೂಲಗಳು ತಿಳಿಸಿದೆ.
ಮನೆಯ ಪ್ರತಿ ಸದಸ್ಯರ ಬಗ್ಗೆ ಮಾಹಿತಿ: ಪ್ರತಿ ಠಾಣೆಯಲ್ಲಿರುವ ಕಾನ್‌ಸ್ಟೆಬಲ್ಗಳಿಗೆ ಬೀಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆ ಕಾನ್‌ಸ್ಟೇಬಲ್ಗಳು ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳ ಸಂಖ್ಯೆ ಎಷ್ಟು? ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ? ಅವರ ವೈಯಕ್ತಿಕ ಮಾಹಿತಿ ಹಾಗೂ ಆ ಮನೆಗೆ ಬಂದು ಹೋಗುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು.
ವಿದೇಶಿಯರ ಮೇಲೆ ನಿಗಾ: ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ನಗರಕ್ಕೆ ಬರುವ ಪ್ರತಿ ವಿದೇಶಿಯರ ಬಗ್ಗೆ ಮಾಹಿತಿ ಪಡೆಯಬೇಕು. ಅವರ ಚಟುವಟಿಕೆಗಳ ಮೇಲೂ ನಿಗಾ ವಹಿಸಬೇಕು ಎಂದು ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
Advertisement
ಗುರುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಡಿಸಿಪಿ, ಇನ್‌ಸ್ಪೆಕ್ಟರ್, ಎಸಿಪಿಗಳಿಗೆ ಈ ಸೂಚನೆ ನೀಡಿದ್ದು, ತಮ್ಮ ವ್ಯಾಪ್ತಿಯಲ್ಲಿ ಭದ್ರತೆ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಮೌಖೀಕವಾಗಿ ಆದೇಶಿದ್ದಾರೆ.
Related Articles
Advertisement
ಸಿಸಿ ಕ್ಯಾಮೆರಾ ಕಡ್ಡಾಯ
ಭದ್ರತೆ ದೃಷ್ಟಿಯಿಂದ ಎಲ್ಲ ಖಾಸಗಿ ಕಂಪನಿಗಳು ತಮ್ಮ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಬಗ್ಗೆ ತಿಳಿದುಕೊಳ್ಳಬೇಕು. 500ಕ್ಕೂ ಹೆಚ್ಚು ಮಂದಿ ಸೇರುವ ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿ ಇದೆಯೇ? ಇಲ್ಲವೇ? ಎಂಬ ಬಗ್ಗೆ ತಿಳಿದುಕೊಂಡು, ಅಂತಹ ಸ್ಥಳಗಳ ಪಟ್ಟಿ ಸಿದ್ಧಪಡಿಸಬೇಕು. ಹಾಗೆಯೇ ಮಾಲ್ ಹಾಗೂ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಪ್ರಮುಖವಾಗಿ ಲೋಹಶೋಧಕ ಯಂತ್ರ ಅಳವಡಿಸಲಾಗಿದೆಯೇ? ಇಲ್ಲವೇ ಪರಿಶೀಲಿಸಬೇಕು. ಅಲ್ಲದೆ ಅನುಮಾನಾಸ್ಪದ ವ್ಯಕ್ತಿ ಬಗ್ಗೆ ನಿಗಾವಹಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಗರ ಪೊಲೀಸ್ ಆಯುಕ್ತರು ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
•ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭದ್ರತೆ ಕುರಿತ ಸಭೆ
•ನಗರದಲ್ಲಿನ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನ
•ನಗರದಲ್ಲಿನ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನ