ಬಳ್ಳಾರಿ: ಜಿಲ್ಲೆಯ ಸಂಡೂರು ಹಾಗೂ ಬಳ್ಳಾರಿ ತಾಲೂಕುಗಳ ವಿವಿಧ ಗ್ರಾಪಂಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಡೂರು ತಾಲೂಕಿನ ತಾಳೂರು ಗ್ರಾಪಂಯಲ್ಲಿ ರೂರ್ಬನ್ ಯೋಜನೆಯ ಶಾಲಾ ಆಟದ ಮೈದಾನ, ಅಂಗನವಾಡಿ ಕೇಂದ್ರ, ಗ್ರಾಪಂ ಕಾಂಪೌಂಡ್, ಗ್ರಾಪಂ ಸೋಲಾರ್ ಪ್ಯಾನಲ್ ಸಿಸ್ಟಂ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ತೋಟಗಾರಿಕೆ ಬೆಳೆಗಳಾದ ಸೀಬೆ, ದಾಳಿಂಬೆ, ಗುಲಾಬಿ ತೋಟ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.
ನಂತರ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಪಂಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾದ ಅಮೃತ ಸರೋವರದ ಕೆರೆ ಕಾಮಗಾರಿ ಪರಿಶೀಲಿಸಿದರು. ನಂತರ ಮೇಟಿಗಳು ಮತ್ತು ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಚರ್ಚಿಸಿದರು.
ಜಿಪಂ ಸಿಇಒ ಜಿ. ಲಿಂಗಮೂರ್ತಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ನಂತರ ತೋರಣಗಲ್ಲು ಗ್ರಾಪಂಯ ತೋರಣಗಲ್ಲು ಗ್ರಾಮದಲ್ಲಿ ರೂರ್ಬನ್ ಯೋಜನೆಯಡಿ ಗ್ರಾಮೀಣ ಮಟ್ಟದಲ್ಲಿ ವಿನೂತನವಾಗಿ ಕೈಗೊಂಡಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಬಳ್ಳಾರಿ ಜಿಪಂ ಸಭಾಂಗಣದಲ್ಲಿ ಆಯುಕ್ತೆ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನರೇಗಾ ಹಾಗೂ ರೂರ್ಬನ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಆಯುಕ್ತರಿಂದ ಮಹಿಳಾ ಮೇಟಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ಇದೇ ವೇಳೆ ಜಲಸಂಜೀವಿನಿ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಉನ್ನತ ಅಧಿಕಾರಿಗಳು, ಮುಖ್ಯ ಕಾರ್ಯ ನಿರ್ವಾಹಕ ಅಧಿ ಕಾರಿಗಳು, ಉಪ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆಗಳ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳು, ನರೇಗಾ ಯೋಜನೆ ಸಿಬ್ಬಂದಿ ಇದ್ದರು.