ಬೆಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಜನ ಸೇರುವ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಒಂದು ವೇಳೆ ಆದೇಶ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಡಾ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಮಾಸಿಕ ಜನ ಸಂಪರ್ಕ ದಿವಸ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಸುರಕ್ಷಾ ಕಾಯ್ದೆ ಪ್ರಕಾರ 100ಕ್ಕೂ ಹೆಚ್ಚು ಸಾರ್ವಜನಿಕರು ಬರುವ ಅಂಗಡಿಗಳು, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯ ವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬ ನಿಯಮವಿದೆ. ಹೀಗಾಗಿ ಮಾಲಿಕ ರಾದವರು ಸಾರ್ವಜನಿಕರು ಹಾಗೂ ತಮ್ಮ ಉದ್ಯೋಗಿಗಳ ಸುರಕ್ಷತೆಯ ಮತ್ತು ರಕ್ಷಣೆಯ ಕ್ರಮ ಕೈಗೊಳ್ಳಲೇಬೇಕು. ಸಿಸಿ ಕ್ಯಾಮೆರಾ ಅಳವಡಿಸುವ ವೇಳೆ ಸ್ಥಳೀಯ ಪೊಲೀಸರ ಮಾರ್ಗದರ್ಶನ ಅಗತ್ಯ ಎಂದು ವಿವರಿಸಿದರು.
10 ಸಾವಿರ ರೂ.ವರೆಗೆ ದಂಡ: ಠಾಣಾಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಅಂಗಡಿ ಮಾಲಿಕರಿಗೆ ಸಲಹೆ ಸೂಚನೆ ನೀಡುತ್ತಾರೆ. ಇನ್ಸ್‌ಪೆಕ್ಟರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಭೇಟಿ ಕೊಟ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ ಇನ್ಸ್ ಪೆಕ್ಟರ್‌ಗಳು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸದಿದ್ದರೆ ಎಸಿಪಿ ದರ್ಜೆಯ ಅಧಿಕಾರಿಗಳು ದಂಡವನ್ನು ವಿಧಿಸಬಹುದು. ಈಗಾಗಲೇ ನಗರದ ಕೆಲವು ಕಡೆ 5 ರಿಂದ 10 ಸಾವಿರ ರೂ. ವರೆಗೆ ದಂಡವನ್ನು ವಿಧಿಸಿದ್ದೇವೆ ಎಂದು ಹೇಳಿದರು.
ಅಡ್ಡಾದಿಡ್ಡಿ ವಾಹನ ನಿಲುಗಡೆ: ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಹೋಟೆಲ್, ರೆಸ್ಟೋರೆಂಟ್‌ಗಳ ಬಗ್ಗೆ ದೂರು ನೀಡಿದರು. ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲು ಸ್ಥಳೀಯ ಪೋಲೀಸರಿಗೆ ಆಯುಕ್ತರು ಆದೇಶಿಸಿದರು. ಧೂಮಪಾನ ಮಾಡುತ್ತಾರೆ: ಇನ್ನು ಬೇಕರಿಗಳ ಬಗ್ಗೆ ಬಹಳಷ್ಟು ದೂರುಗಳು ಕೇಳಿ ಬಂದಿದ್ದು, ಬೇಕರಿ ಬಳಿ ಧೂಮಪಾನ ಮಾಡುವುದು, ಹುಡುಗರು ಅಲ್ಲಿ ತಮ್ಮ ಅಡ್ಡ ಮಾಡಿಕೊಂಡು ಹೆಣ್ಣುಮಕ್ಕಳಿಗೆ ಚುಡಾಯಿಸುವ ಚಾಳಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿದ್ದು, ಬೇಕರಿಗಳ ಬಳಿ ಧೂಮಪಾನ ನಿಷೇಧಿಸಲಾಗಿದೆ. ಎಲ್ಲಾ ಬೇಕರಿಗಳ ಬಳಿ ಧೂಮಪಾನ ನಿಷೇಧ ಬೊರ್ಡ್ ಅಳವಡಿಸುವಂತೆ ಬೇಕರಿ ಮಾಲೀಕರಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಸಿಸಿ ಕ್ಯಾಮೆರಾ, ಒಬ್ಬ ಪೊಲೀಸ್‌ಗೆ ಸಮ: ಸಿಸಿ ಕ್ಯಾಮೆರಾಗಳು ಅಳವಡಿಸುವಾಗ ಕೇವಲ ಅಂಗಡಿ ಒಳಾಂಗಣ ಮಾತ್ರವಲ್ಲ, ರಸ್ತೆ, ಸುತ್ತ-ಮುತ್ತಲಿನ ಪ್ರದೇಶಗಳು ಕಾಣಿಸುವಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಉತ್ತಮ ಗುಣಮಟ್ಟದ ಮತ್ತು ಸಂಗ್ರಹಣೆ ಹೊಂದಿರುವ ಕ್ಯಾಮೆರಾಗಳನ್ನು ಹಾಕಿಕೊಳ್ಳಬೇಕು. ಕ್ಯಾಮೆರಾ ಯಾವ ಕಡೆ ಇರಬೇಕು? ನಿರ್ವಹಣೆ ಮಾಡುವುದರ ಬಗ್ಗೆ ಪೊಲೀಸರು ಸಲಹೆ ನೀಡುತ್ತಾರೆ. ಒಂದು ಸಿಸಿ ಕ್ಯಾಮೆರಾ, ಒಬ್ಬ ಪೊಲೀಸ್ ಸಿಬ್ಬಂದಿಗೆ ಸಮ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.