ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿನ ಅಕ್ರಮ ಕಸಾಯಿಖಾನೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ವರದಿ ನೀಡಲು ಇಬ್ಬರು ಕೋರ್ಟ್ ಕಮಿಷನರ್‌ಗಳು, ಸರ್ಕಾರಿ ವಕೀಲರು ಹಾಗೇ ಸ್ವಯಂಸೇವಾ ಸಂಘಟನೆಯ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ಹೈಕೋರ್ಟ್ ಮಂಗಳವಾರ ನೇಮಿಸಿದೆ.
ನಗರದಲ್ಲಿ ಅಕ್ರಮ ಕಸಾಯಿಖಾನೆಗಳಲ್ಲಿ ಗೋವು ಸೇರಿದಂತೆ ಮತ್ತಿತರ ಪ್ರಾಣಿಗಳ ವಧೆ ಮಾಡುತ್ತಿರುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಗೋಗ್ಯಾನ್ ಫೌಂಡೇಶನ್ ಸ್ವಯಂಸೇವಾ ಸಂಸ್ಥೆಯ ಸದಸ್ಯರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಗೋಗ್ಯಾನ್ ಫೌಂಡೇಶನ್ ಹಾಗೂ ಸರ್ಕಾರಿ ಪರ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ನಗರದಲ್ಲಿ 5ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅರ್ಜಿದಾರರು ಸೂಚಿಸುವ ಸ್ಥಳಗಳಿಗೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸಿ ಎಂದು ಕೋರ್ಟ್‌ಕಮಿಷನರ್‌ಗಳಾಗಿ ವಕೀಲರಾದ ಎಚ್.ವಿ ಹರೀಶ್,ಡಿಪಿ ಪ್ರಸನ್ನ,
ಸರ್ಕಾರಿ ವಕೀಲ ಎಸ್.ರಾಚಯ್ಯ ಹಾಗೂ ಗೋಗ್ಯಾನ್ ಫೌಂಡೇಶನ್‌ನ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ನೇಮಕಗೊಳಿಸಿತು. ಜೊತೆಗೆ ಈ ತಂಡ ಪೊಲೀಸ್ ಭದ್ರತೆಯೊಂದಿಗೆ ತೆರಳಿ ಅಲ್ಲಿನ ವಾಸ್ತವತೆ ಬಗ್ಗೆ ಅಕ್ಟೋಬರ್ 21ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಬೇಕು ಎಂದು ನಿರ್ದೇಶಿಸಿ ಅ.23ಕ್ಕೆ ವಿಚಾರಣೆ ಮುಂದೂಡಿತು.
ಇದೇ ಅರ್ಜಿಗೆ ಸಂಬಂಧಪಟ್ಟಂತೆ ಈ ಹಿಂದೆಯೂ ನ್ಯಾಯಪೀಠ ಕೋರ್ಟ್‌ಕಮಿಷನರ್‌ಗಳನ್ನೊಳಗೊಂಡ ತಂಡ ರಚಿಸಿ ವರದಿ ನೀಡುವಂತೆ ಕೋರಿತ್ತು. ಆದರೆ, ಅರ್ಜಿದಾರ ಗೋ ಫೌಂಡೇಶನ್ ಘಟನಾ ಸ್ಥಳ ಪರಿಶೀಲನೆಗೆ ತೆರಳಿದಾಗ ಅಕ್ರಮ ಕಸಾಯಿಖಾನೆಗಳನ್ನು ತೋರಿಸಿದರೂ ಪೊಲೀಸರು ಕ್ರಮಗೈಕೊಂಡಿಲ್ಲ ಎಂದು ಆಕ್ಷೇಪಿಸಿದ್ದರು.
ಅರ್ಜಿದಾರರ ವಾದವೇನು?: ಶಿವಾಜಿನಗರ, ಭಾರತಿ ನಗರ, ಕೆ.ಜಿ ಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಅಕ್ರಮ ಕಸಾಯಿಖಾನೆಗಳಿದ್ದು, ಗೋವು, ಒಂಟೆ, ಕುರಿ ಸೇರಿದಂತೆ ಇನ್ನಿತರೆ ಪ್ರಾಣಿಗಳನ್ನು ಅಮಾನುಷವಾಗಿ ಕೂಡಿ ಹಾಕಿ ಕೊಲ್ಲಲಾಗುತ್ತಿದೆ. ಈ ಅಕ್ರಮಕ್ಕೆ ಕಾರಣವಾಗಿರುವ ಕರ್ನಾಟಕ ಗೋಮಾಂಸ ಮಾರಟಗಾರರ ಸಂಘದ ಮೊಹಮದ್ ಎಜಾಜ್ ಖುರೇಷಿ ಸೇರಿದಂತೆ ಮತ್ತಿತರ ವಿರುದ್ಧ ದೂರು ನೀಡಿದರೂ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.