Advertisement

ಮಾನವ ಹಕ್ಕು ರಕ್ಷಣೆಗೆ ಆಯೋಗ ರಚನೆ

11:50 AM Dec 18, 2018 | |

ಕಲಬುರಗಿ: ಮಾನವ ಹಕ್ಕುಗಳ ಸಂರಕ್ಷಣೆಗಾಗಿಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಮಾನವ ಹಕ್ಕುಗಳು
ಉಲ್ಲಂಘನೆಯಾದಲ್ಲಿ ಆಯೋಗದ ಮೊರೆ ಹೋಗಿ ನ್ಯಾಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಕಾನೂನು ಮತ್ತು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌. ಆರ್‌. ಮಾಣಿಕ್ಯ ಹೇಳಿದರು.

Advertisement

ನಗರದ ಎನ್‌.ವಿ. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಎನ್‌.ವಿ. ಪದವಿ ಪೂರ್ವ ಕಾಲೇಜು, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಹಾಗೂ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯ ಜೀವನಕ್ಕೆ ಬೇಕಾಗುವ ಜನನ-ಮರಣ ನೋಂದಣಿ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಬಾಲ ನ್ಯಾಯಿಕ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳು, ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ಬಗ್ಗೆ ವಿವರಿಸಿದ ಅವರು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಅತ್ಯಂತ ವಿನಯದಿಂದ
ವಿದ್ಯಾರ್ಜನೆ ಮಾಡಿ ಉತ್ತಮ ಸಂಸ್ಕಾರ ಮತ್ತು ನಡುವಳಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮಾತನಾಡಿ, ಮಾನವ ಹಕ್ಕುಗಳು ಉಲ್ಲಂಘನೆಯಾದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ನೇರವಾಗಿ ಆನ್‌ಲೈನ್‌
ಮೂಲಕ ದೂರು ಸಲ್ಲಿಸುವುದು ಹಾಗೂ ಸಕಾರಣವಿಲ್ಲದೆ ಪೊಲೀಸರು ನಾಗರಿಕರ ಮೇಲೆ ದೌರ್ಜನ್ಯ ನಡೆಸಿದ್ದಲ್ಲಿ ಅಂತಹ ಪೊಲೀಸ್‌ ಸಿಬ್ಬಂದಿ ವಿರುದ್ಧ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಎನ್‌.ವಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಜನಾ ಯಜುರವೇದಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಎನ್‌.ವಿ. ಪಾಲಿಟೆಕ್ನಿಕ್‌ನ ಭರತೇಶ ಬೆಳಗುಂದಿ ಸ್ವಾಗತಿಸಿದರು. ಎನ್‌ಎಸ್‌ಎಸ್‌ ಅಧಿಕಾರಿ ಎನ್‌. ಆರ್‌. ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next