Advertisement

ನೀರಾವರಿ ಸಚಿವರಿಂದ ಕಮಿಷನ್‌ ಬೇಡಿಕೆ

06:00 AM Jun 30, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿರುವುದು ಕಮಿಷನ್‌ ಸರ್ಕಾರ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಹತ್ತು ಸಾವಿರ ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಬಾಕಿ ಕೊಡಬೇಕಿದೆ. ಜಲಸಂಪನ್ಮೂಲ ಸಚಿವರಿಗೆ ಹಣ ಬಿಡುಗಡೆ ಮಾಡಿ ಎಂದರೆ ಕಮೀಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಆರೋಪ ಮಾಡಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ 27 ದಿನ ಕಳೆದರೂ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. ಹತ್ತು ಸಾವಿರ ಕೋಟಿ ರೂ.ಗುತ್ತಿಗೆದಾರರಿಗೆ ಬಾಕಿ ಕೊಡಬೇಕಿದೆ. ನೀರಾವರಿ ಸಚಿವರಿಗೆ ಹಣ ಬಿಡುಗಡೆ ಮಾಡಿ ಎಂದರೆ ಹಿಂದಿನ ಸರ್ಕಾರದಲ್ಲಿ ಕೊಟ್ಟಿರುವ ಕಮೀಷನ್‌ಗೂ ನಮಗೂ ಸಂಬಂಧವಿಲ್ಲ. ಈಗ ನಮಗೆ ಕೊಡುವುದನ್ನು ಕೊಟ್ಟು ರಿಲೀಸ್‌ ಮಾಡಿಸಿಕೊಳ್ಳಿ ಎಂದು ಹೇಳ್ತಾರೆ ಅಂತ ಗುತ್ತಿಗೆದಾರರು ನನಗೆ ತಿಳಿಸಿದರು ಎಂದು ಆರೋಪಿಸಿದರು.

ಬೀದಿಗಿಳಿಯಿರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಿ ಎಂದು ಇದೇ ವೇಳೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಸಮ್ಮಿಶ್ರ ಸರ್ಕಾರ ಬಜೆಟ್‌ ಮಂಡಿಸಲಿ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಅವರು ವಿಶ್ವಾಸದ್ರೋಹ ಮಾಡಿದ್ದಾರೆ. ಮಹಿಳೆಯರಿಗೆ,ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಮಾಸಾಶನ ಕೊಡುವುದಾಗಿ ತಿಳಿಸಿದ್ದಾರೆ. ಇವೆಲ್ಲವ ನ್ನೂ ಈಡೇರಿಸದಿದ್ದರೆ ಬೀದಿ ಬೀದಿಯಲ್ಲಿ ಇವರ ವೈಫ‌ಲ್ಯ ಹರಾಜು ಹಾಕಬೇಕಿದೆ ಎಂದು ಹೇಳಿದರು.

ಅಪ್ಪ-ಮಕ್ಕಳಿಗೆ ಅಧಿಕಾರದ ಹಪಾಹಪಿ ಇಲ್ಲದೇ ಇದ್ದಿದ್ದರೆ, ನಾವು ಸರ್ಕಾರ ರಚನೆ ಮಾಡುವುದಿಲ್ಲ. ಪ್ರಣಾಳಿಕೆಯಲ್ಲಿ ನಾವು ಘೋಷಿಸಿರುವ ಕಾರ್ಯಕ್ರಮ ಜಾರಿ ಮಾಡಿದರೆ ಮಾತ್ರ ಬೆಂಬಲ ಕೊಡ್ತೇವೆ ಎಂದು ಹೇಳಬಹುದಿತ್ತು. ಆದರೆ, ಅದು ಮಾಡದೆ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಜತೆಗೆ ಈ ಸರ್ಕಾರ ಜಾಸ್ತಿ ಬಾಳುವುದಿಲ್ಲ ಎಂದು ಭವಿಷ್ಯ ನುಡಿದರು. ವಿಧಾನಸಭೆ ಒಳಗೆ ಮತ್ತು ಹೊರಗೆ ನಮ್ಮ ಹೋರಾಟ ಮುಂದುವರಿಯಲಿದೆ. ಅಧಿವೇಶನ ಮುಗಿದ ನಂತರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ. ನಮ್ಮ ಗುರಿ ಲೋಕಸಭೆ ಚುನಾವಣೆ ಗೆಲ್ಲುವುದಾಗಿದೆ. ರಾಜ್ಯದಿಂದ 25 ಸ್ಥಾನ ಗೆಲ್ಲುವ ಟಾರ್ಗೆಟ್‌ ನಮಗೆ ನೀಡಲಾಗಿದ್ದು, ಈ ಕ್ಷಣದಿಂದಲೇ ನಾವು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಹೇಳಿದರು.

ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌, ಕೇಂದ್ರ ಸಚಿವರಾದ ಅನಂತಕುಮಾರ, ರಮೇಶ್‌ ಜಿಗಜಿಣಗಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಆರ್‌.ಅಶೋಕ್‌, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಶ್ರೀರಾಮುಲು,ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಮುಖಂಡರಾದ ಬಿ.ಎಲ್‌.ಸಂತೋಷ್‌, ರವಿಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next