Advertisement

ಶಿಕ್ಷಣ ವ್ಯಾಪಾರೀಕರಣ: ನ್ಯಾ.ಕೋರಡ್ಡಿ

09:30 PM Sep 18, 2019 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ವಾಣೀಜ್ಯಕರಣಗೊಳ್ಳುತ್ತಿರುವ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಣ್ಮರೆಯಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ವಾಪಸಂದ್ರದ ಶ್ರೀ ಜಚನಿ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ 2019-20ನೇ ಸಾಲಿನ ಸಾಂಸ್ಕೃತಿ, ಕ್ರೀಡಾ ಹಾಗೂ ಕಾನೂನು ಸೇವಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಪಾರೀಕರಣ: ಶಿಕ್ಷಣ ಎಂದರೆ ಬರೀ ಕಟ್ಟಡಗಳು ಅಲ್ಲ. ಆದರೆ ಶಿಕ್ಷಣ ವ್ಯಾಪಾರೀಕರಣದ ಪರಿಣಾಮ ಇಂದು ನಾಯಿಕೊಡೆಗಳಂತೆ ಕಟ್ಟಡಗಳು ತಲೆ ಎತ್ತುತ್ತಿವೆ. ಗುಣಮಟ್ಟದ ಶಿಕ್ಷಣಕ್ಕೆ ಯಾರು ಒತ್ತು ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿ ಜೀವನ ಒಮ್ಮೆ ಮಾತ್ರ ಬರುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಇವತ್ತಿನ ಸಂದರ್ಭದಲ್ಲಿ ನೋಡಿದರೆ ನಮ್ಮ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ತಾವು ತಮ್ಮ ಸ್ಥಾನಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಆ ರೀತಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಸಹ ಗುರು ಭಕ್ತಿಯಿಂದ ನಡೆದುಕೊಳ್ಳುತ್ತಿಲ್ಲ ಎಂದರು.

ಶಿಸ್ತು ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿಕೊಳ್ಳದೇ ಕಠಿಣ ಪರಿಶ್ರಮ ಪಟ್ಟು ಓದಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದರು. ಸರ್‌ ಎಂ.ವಿಶೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಇದು. ಅವರ ಶಿಸ್ತು, ಸಂಯಮ, ಸಮವಸ್ತ್ರ ಇಡೀ ಜಗತ್ತಿನ ಗಮನ ಸೆಳೆದಿತ್ತು. ಆದರೆ ನಾವು ಚಿಕ್ಕಬಳ್ಳಾಪುರದವರೆಂದು ಅಥವಾ ವಿಶ್ವೇಶ್ವರಯ್ಯನ ವರ ಹುಟ್ಟೂರಿನವರು ಎಂದು ಹೇಳಿಕೊಂಡರೆ ಪ್ರಯೋಜನವಿಲ್ಲ. ಅವರಂತೆ ಶಿಸ್ತು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ನ್ಯಾಯಾಧೀಶರು ಸಲಹೆ ನೀಡಿದರು.

ಕಾನೂನು ಅಭ್ಯಾಸ ಎಲ್ಲರಿಗೂ ಮುಖ್ಯ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಪುಸ್ತಕಗಳು ಸಿಗುತ್ತಿವೆ. ಅವುಗಳನ್ನು ಓದಬೇಕು. ಕಾಟಾಚಾರಕ್ಕೆ ಯಾರು ವಕೀಲರು ಆಗಬಾರದು. ವಕೀಲರ ಮೇಲೆ ನಂಬಿಕೆ. ವಿಶ್ವಾಸ ಬರುವಂತೆ ವಕೀಲರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಸಿ.ಎಚ್‌.ಸುರೇಶ್‌ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಹಿರಿಯ ವಕೀಲರಾದ ಜಯರಾಂರೆಡ್ಡಿ, ಜನಕಲಾರಂಗದ ನಿದೇಶಕ ಎ.ವಿ.ವೆಂಕಟರಾಮ್‌, ಕಾಲೇಜಿನ ಮಾಜಿ ಪ್ರಾಂಶುಪಾಲ ವೆಂಕಟರಮಣ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾನೂನು ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯವಾದದ್ದು. ಕಾನೂನು ಪ್ರಜ್ಞೆ ಇದ್ದಾಗ ಮಾತ್ರ ಮನುಷ್ಯ ಉತ್ತಮ ಜೀವನ ನಡೆಸಬಹುದು. ಆದರೆ ಕಾನೂನು ಅಭ್ಯಾಸ ಕಠಿಣವಾಗಿರುವುದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಂಡರೆ ಇಡೀ ಬದುಕು ಅಂಧಕಾರದಲ್ಲಿ ಮುಳಗುತ್ತದೆ.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next