Advertisement

ರಾಜಕಾಲುವೆ ಮೇಲೆ ವಾಣಿಜ್ಯ ಮಳಿಗೆ-ಆರೋಪ

07:22 PM Oct 31, 2020 | Suhan S |

ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿ ಹಾದು ಹೋಗಿರುವ ರಾಜಾಕಾಲುವೆ ಮೇಲೆಯೇ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಳ್ಳುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

Advertisement

ಆಟೋ ಕಾಂಪ್ಲೆಕ್ಸ್‌ನಲ್ಲಿ ರಾಜಾ ಕಾಲುವೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಬೋರ್ಡ್‌ಗೆ (ಕೆಐಎಡಿಬಿ)ವಹಿಸಲಾಗಿತ್ತು. ಈಗಾಗಲೇ ಈ ಪ್ರದೇಶದಲ್ಲಿ ರಾಜಾ ಕಾಲುವೆಯನ್ನು ನಿರ್ಮಿಸಲಾಗಿದೆ. ಆದರೆ ಪಾಲಿಕೆಗೆ ಇದುವರೆಗೂ ಹಸ್ತಾಂತರಗೊಂಡಿಲ್ಲ. ಈ ಕಾರ್ಯ ಮುಗಿಯುವವರೆಗೂ ಇದರ ನಿರ್ವಹಣೆ ಕೆಐಎಡಿಬಿ ಮೇಲಿದೆ. ಆದರೆ ಇಲ್ಲಿನ ಅಧಿಕಾರಿಗಳು ರಾಜಾ ಕಾಲುವೆ ಮೇಲೆಯೇ ಕೆಲವರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡು ವ್ಯಾಪಾರ- ವಹಿವಾಟು ನಡೆಸುತ್ತಿದ್ದರೂ ಸಹ ಇದರ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಕಂಡರೂ ಕೂಡಾ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ಇಲ್ಲಿನ ಸ್ಥಳೀಯರಿಂದ ಕೇಳಿ ಬರುತ್ತಿದೆ.

ರಾಜಾ ಕಾಲುವೆಯ ಉಳಿದ ಭಾಗದಲ್ಲೂ ಸಹ ವಾಣಿಜ್ಯ ಕಾರ್ಯಕ್ಕಾಗಿ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಸ್ಲ್ಯಾಬ್‌ ನಿರ್ಮಿ ಸಲಾಗುತ್ತಿದೆ. ಅಲ್ಲದೆ, ಜಲ್ಲಿ ಹಾಗೂ ಕಬ್ಬಿಣದ ರಾಡ್‌ಗಳನ್ನು ಶೇಖರಿಸಿಡಲಾಗಿದೆ. ಇವುಗಳನ್ನು ತೆರವುಗೊ ಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ರಾಜಾಕಾಲುವೆ ಮೇಲೆ ವ್ಯಾಪಾರ- ವಹಿವಾಟಿಗೆ ಅವಕಾಶ ಮಾಡಿಕೊಡಬಾರದು ಎಂಬ ಮನವಿಯನ್ನು ಹಲವು ಬಾರಿ ಮಾಡಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮಳಿಗೆಗಳ ನಿರ್ಮಾಣ ಕಾರ್ಯ ಮುಂದುವರಿದೇ ಇದೆ. ಕೂಡಲೇ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರಾಜಾ ಕಾಲುವೆ ಮೇಲಿನ ಮಳಿಗೆಗಳನ್ನು ತೆರವುಗೊಳಿಸಬೇಕು ಮತ್ತು ನಿರ್ಮಾಣ ಹಂತದ ಕಾರ್ಯವನ್ನು ಸ್ಥಗಿತಗೊಳಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬರುತ್ತಿದೆ.

ಈಗಾಗಲೇ ರಾಜಾಕಾಲುವೆ ಮೇಲೆ ವಾಣಿಜ್ಯ ಉದ್ದೇಶಕ್ಕೆ ಮಳಿಗೆಗಳನ್ನು ಹಾಕಲಾಗಿದ್ದು, ಇವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಕೆಐಎಡಿಬಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಾಕಾಲುವೆ ಮೇಲೆ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು. –ರಾಹುಲ್‌ ಬಿದರೆ, ಪಾಲಿಕೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next