Advertisement

ಸೇವಾ ಸಂಗಮಕ್ಕೆ ವಾಣಿಜ್ಯನಗರಿ ಸಜ್ಜು

12:49 PM Nov 22, 2017 | Team Udayavani |

ಹುಬ್ಬಳ್ಳಿ: ರಾಷ್ಟ್ರಪ್ರೇಮ, ಪರಂಪರೆ-ಸಂಸ್ಕೃತಿ ಸಂರಕ್ಷಣೆಯಲ್ಲಿ ತೊಡಗಿರುವ ರಾಷ್ಟ್ರೀಯ ಸೇವಾ ಭಾರತಿ, ವಿವಿಧ ಸಾಮಾಜಿಕ ಸೇವೆಯ ಸುಮಾರು 1ಸಾವಿರಕ್ಕೂ ಅಧಿಕ ಸಂಘ-ಸಂಸ್ಥೆಗಳನ್ನು ಮಡಿಲಲ್ಲಿರಿಸಿಕೊಂಡಿದೆ. ಅದೆಷ್ಟೋ ಸಂಸ್ಥೆಗಳಿಗೆ ಮಾತೃಮಯಿಯಾಗಿದೆ. 

Advertisement

ಇಂತಹ ಸಂಘ-ಸಂಸ್ಥೆಗಳ ರಾಜ್ಯಮಟ್ಟದ ಎರಡನೇ ಸೇವಾ ಸಂಗಮಕ್ಕೆ ವೇದಿಕೆಯಾಗಲು ವಾಣಿಜ್ಯ ನಗರಿ ಸಜ್ಜುಗೊಳ್ಳುತ್ತಿದೆ. ರಾಷ್ಟ್ರೀಯ ಸೇವಾ ಭಾರತಿ ಸೇವಾ ಸಂಗಮ ಸಮಾವೇಶ ರಾಷ್ಟ್ರ ಹಾಗೂ ಆಯಾ ರಾಜ್ಯಮಟ್ಟದಲ್ಲಿ ನಡೆಯುತ್ತದೆ. ಕರ್ನಾಟಕದಲ್ಲಿ ಮೊದಲ ಸೇವಾ ಸಂಗಮ ಶಿವಮೊಗ್ಗದಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು.

ಇದೀಗ ಎರಡನೇ ಸೇವಾ ಸಂಗಮ ಡಿಸೆಂಬರ್‌ 1ರಿಂದ 3ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ರಾಷ್ಟ್ರೀಯ ಸೇವಾ ಭಾರತಿ 2003ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಸಾಮಾಜಿಕ ಸೇವೆ, ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ರಾಷ್ಟ್ರಪ್ರೇಮ ಹಾಗೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 

ಇದೇ ಚಿಂತನೆ ಹಾಗೂ ಸೇವೆಯಲ್ಲಿ ತೊಡಗಿದ ಅನೇಕ ಸಂಘ-ಸಂಸ್ಥೆಗಳಿಗೆ ಪ್ರೇರಣೆಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌  ಎಸ್‌)ಅಡಿಯಲ್ಲಿ ಬರುವ ವಿವಿಧ ಸೇವಾ ವಿಭಾಗಗಳಲ್ಲಿ ಸೇವಾ ಭಾರತಿಯೂ ಒಂದಾಗಿದೆ.

ಸೇವಾ ಭಾರತಿ ಬಾಲ ಗೋಕುಲ, ವಿದ್ಯಾವಿಕಾಸ ಕೇಂದ್ರ(ಮನೆ ಪಾಠ), ಆರೋಗ್ಯ ಸೇವೆ, ಬುದ್ಧಿಮಾಂದ್ಯ ಮಕ್ಕಳ ಶಾಲೆ, ಮಹಿಳಾ ಸ್ವಾವಲಂಬನೆ, ಸಂಚಾರಿ ಚಿಕಿತ್ಸಾಲಯ, ಬಾಲ ಸಂಸ್ಕಾರ, ಕೌಟುಂಬಿಕ ಮೌಲ್ಯ ವೃದ್ಧಿ, ಪರಂಪರೆ ಸಂರಕ್ಷಣೆ, ದೇಸಿ ಆಟ ಹೀಗೆ ವಿವಿಧ ಸೇವಾ ಕಾರ್ಯದಲ್ಲಿ ತೊಡಗಿದೆ. ದೇಶದಲ್ಲಿ ಒಟ್ಟಾರೆ 1.70ಲಕ್ಷ ಚಟುವಟಿಕೆಗಳು ನಡೆಯುತ್ತಿದ್ದು,

Advertisement

ಕರ್ನಾಟಕದಲ್ಲಿ 8,700ಕ್ಕೂ  ಅಧಿಕ ಚಟುವಟಿಕೆಗಳು ನಡೆಯುತ್ತಿವೆ. 2010ರಲ್ಲಿ ರಾಷ್ಟ್ರಮಟ್ಟದ ಮೊದಲ ಸಮಾವೇಶ ಬೆಂಗಳೂರಿನಲ್ಲಿ ನಡೆದಿತ್ತು. ನಂತರ 2015ರಲ್ಲಿ ದೆಹಲಿಯಲ್ಲಿ ಎರಡನೇ ಸಮಾವೇಶ ನಡೆದಿತ್ತು. ಅದೇ ರೀತಿ ರಾಜ್ಯಮಟ್ಟದಲ್ಲೂ ಮೂರ್‍ನಾಲ್ಕು ವರ್ಷಕ್ಕೊಮ್ಮೆ ಸೇವಾ ಸಂಗಮ ನಡೆಯುತ್ತದೆ. 

ಮಹಿಳಾ-ಯುವ ಸಮಾವೇಶ ವಿಶೇಷ: ರಾಜ್ಯಮಟ್ಟದ ಮೊದಲ ಸೇವಾ ಸಂಗಮ 2013ರಲ್ಲಿ ಶಿವಮೊಗ್ಗದಲ್ಲಿ ಎರಡು ದಿನ ನಡೆದಿತ್ತು. ಸುಮಾರು 120ಕ್ಕೂ ಅಧಿಕ ಸೇವಾ ಸಂಸ್ಥೆಗಳು ಭಾಗಿಯಾಗಿದ್ದವು. ಈಗ 2ನೇ ಸಮ್ಮೇಳನ ಡಿಸೆಂಬರ್‌1-3ರವರೆಗೆ ಎರಡನೇ ಸೇವಾ ಸಂಗಮ ನಡೆಯಲಿದೆ.

ಮೂರು ದಿನ ನಡೆಯುವ ಸಮಾವೇಶದಲ್ಲಿ ಸುಮಾರು 250ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು, 1,000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯಮಟ್ಟದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಹಾಗೂ ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ. 

ಪರಿಸರ, ಕೃಷಿ-ಗೋವು, ಸಂಸ್ಕಾರ, ಆರೋಗ್ಯ, ಸಾಮರಸ್ಯ ವಿಷಯಗಳಿಗೆ ಒತ್ತು ನೀಡಿ ಚಿಂತನ-ಮಂಥನ ನಡೆಯಲಿದೆ. ಯುವ ಸಮಾವೇಶದಲ್ಲಿ ಯುವಕರಿಗೆ ಉತ್ತಮ ಮಾರ್ಗದರ್ಶನ, ರಾಷ್ಟ್ರಪ್ರೇಮ, ಮೌಲ್ಯಯುತ ಬದುಕು ಕುರಿತಾಗಿ ಸಂವಾದ, ಮಾರ್ಗದರ್ಶನ ನೀಡಲಾಗುತ್ತದೆ. 

ಮಹಿಳಾ ಸಮಾವೇಶದಲ್ಲಿ ಸುಮಾರು 500-600 ಮಹಿಳೆಯರು ಪಾಲ್ಗೊಳ್ಳಲಿದ್ದು, ಸಂಸ್ಕಾರ, ಸ್ವಾವಲಂಬನೆ, ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಕುರಿತು ಅನುಭವ ಮಂಡನೆ, ವಿಚಾರ ವಿನಿಮಯ, ದೇಶಭಕ್ತಿ, ಹಬ್ಬಗಳ ಮಹತ್ವ ಹಾಗೂ ಅರ್ಥಪೂರ್ಣ ಆಚರಣೆ ಕುರಿತಾಗಿ ಚರ್ಚೆ, ಸಂವಾದ ನಡೆಯಲಿದೆ.

ಎರಡು ಸಮಾವೇಶದಲ್ಲೂ ಸಾಧಕ ಮಹಿಳೆಯರು ಹಾಗೂ ಯುವಕರನ್ನು ಸನ್ಮಾನಿಸಲಾಗುತ್ತದೆ. ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ವಿವಿಧ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ ಸಂಘ- ಸಂಸ್ಥೆಗಳು ತಮ್ಮ ಕಾರ್ಯ-ಸಾಧನೆ ಪರಿಚಯಿಸಲು ಇವುಗಳನ್ನು ಮೀಸಲಿಡಲಾಗಿದೆ.

ಒಟ್ಟಾರೆಯಾಗಿ ಹುಬ್ಬಳ್ಳಿಯಲ್ಲಿ ನಡೆಯುವ ಸೇವಾ ಸಂಗಮ ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಸೇವಾ ಮನೋಭಾವ, ಚಟುವಟಿಕೆಗಳ ಕಿಚ್ಚೊತ್ತಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಮಾಡಲಿದೆ ಎಂಬುದು ಹುಬ್ಬಳ್ಳಿ ಸೇವಾ ಭಾರತಿ ಅಧ್ಯಕ್ಷ ಡಾ|ರಘು ಅಕಮಂಚಿ ಅವರ ಅನಿಸಿಕೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next