Advertisement

ಕಲಾತ್ಮಕ ಸಿನ್ಮಾಗಳಿಗಿಂತ ಕಮರ್ಷಿಯಲ್‌ ಸಿನ್ಮಾಗಳು ನನಗಿಷ್ಟ: ಪ್ರಣೀತಾ

09:02 AM Jan 09, 2019 | |

ಸಾಮಾನ್ಯವಾಗಿ ಸ್ಟಾರ್‌ ನಟರ ಕಮರ್ಷಿಯಲ್‌ ಚಿತ್ರಗಳಲ್ಲಿ ಅಭಿನಯಿಸುವ ನಾಯಕ ನಟಿಯರಿಗೆ  ಒಂದಷ್ಟು ಹೆಸರು, ಜನಪ್ರಿಯತೆ, ಮಣೆ-ಮನ್ನಣೆ  ತಾನಾಗಿಯೇ ಒದಗಿ ಬರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಕಮರ್ಷಿಯಲ್‌ ಸಿನಿಮಾಗಳ ವ್ಯಾಪ್ತಿಯೇ ಅಂಥದ್ದು. ಹಾಗಾಗಿ ಬಹುತೇಕ ನಾಯಕ ನಟಿಯರು ಇಂಥ ಚಿತ್ರಗಳತ್ತ ಹೆಚ್ಚು ಆಕರ್ಷಿರಾಗಿರುತ್ತಾರೆ. ಇನ್ನು ಕಲಾತ್ಮಕ, ಮಹಿಳಾ ಪ್ರಧಾನ ಚಿತ್ರಗಳು ಸಿಕ್ಕರೂ, ಬಹುತೇಕ ನಾಯಕ ನಟಿಯರು ಈ ಥರದ ಚಿತ್ರಗಳಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಾರೆ.

Advertisement

ಪ್ರೇಕ್ಷಕರು, ಚಿತ್ರೋದ್ಯಮ ಎಲ್ಲಿ ತನ್ನನ್ನು ಅಂತಹ ಚಿತ್ರಗಳಲ್ಲೇ ಗುರುತಿಸುತ್ತದೆಯೇನೋ? ಭವಿಷ್ಯದಲ್ಲಿ ಕಮರ್ಷಿಯಲ್‌ ಸಿನಿಮಾಗಳಲ್ಲಿ ಸಿಗುವ ಅವಕಾಶಗಳು ಕೈತಪ್ಪಬಹುದೇನೋ.., ಎಂಬ ಭಯ ಬಹುತೇಕ ನಟಿ ಮಣಿಯರು ಇಂತಹ ಚಿತ್ರಗಳಲ್ಲಿ ಅಭಿನಯಿಸಲು ಹಿಂದೇಟು ಹಾಕಲು ಕಾರಣ ಎನ್ನುವುದು ವಾಸ್ತವ ಸತ್ಯ. ಈಗ ನಟಿ ಪ್ರಣೀತಾ ಸುಭಾಷ್‌ ಕೂಡ “ಆರ್ಟ್‌ ಸಿನಿಮಾಗಳಿಂದ ನಾನು ಬಲು ದೂರ’ ಎಂದಿದ್ದಾರೆ. 

ಈ ಬಗ್ಗೆ ಮಾತನಾಡುವ ಪ್ರಣೀತಾ, “ನಾನು ಕಲಾತ್ಮಕ ಸಿನಿಮಾಗಳ ವಿರೋಧಿ ಅಲ್ಲ. ವೈಯಕ್ತಿಕವಾಗಿ ಅಂತಹ ಸಿನಿಮಾಗಳ ಬಗ್ಗೆ ಗೌರವವಿದೆ. ಆದರೆ ನಾನೊಬ್ಬಳು ನಟಿಯಾಗಿ, ನನ್ನ ವೃತ್ತಿ ಜೀವನದ ಹಿತವನ್ನು ಗಮನದಲ್ಲಿಟ್ಟುಕೊಮಡು ಮಾತನಾಡುವುದಾದರೆ, ನನಗೆ ಆರ್ಟ್‌ ಸಿನಿಮಾಗಳಿಗಿಂತ ಕಮರ್ಷಿಯಲ್‌ ಸಿನಿಮಾಗಳೇ ಅಚ್ಚುಮೆಚ್ಚು. ಅಂಥ ಸಿನಿಮಾಗಳಿಗೆ ನನ್ನ ಮೊದಲ ಆಧ್ಯತೆ’ ಎನ್ನುತ್ತಾರೆ. 

ಇನ್ನು ಇದಕ್ಕೆ ಕಾರಣವನ್ನು ಕೊಡುವ ಪ್ರಣೀತಾ, “ಪ್ರತಿಯೊಂದು ಸಿನಿಮಾಗಳಿಗೂ ಅದಕ್ಕೆ ಅದರದ್ದೇ ಆದ ಲಿಮಿಟೇಷನ್ಸ್‌ ಇರುತ್ತವೆ. ಎಲ್ಲಾ ಸಿನಿಮಾಗಳು, ಎಲ್ಲರಲ್ಲೂ ಮುಟ್ಟಲು ಸಾಧ್ಯವಿಲ್ಲ. ಒಂದೊಂದು ಶೈಲಿಯ ಸಿನಿಮಾಗಳು, ಒಂದೊಂದು ಥರದ ಅಭಿಮಾನಿಗಳನ್ನು ಹೊಂದಿರುತ್ತವೆ. ಆದ್ರೆ ನಾನು ಗಮನಿಸಿದಂತೆ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾಗಳು ಸಾಮಾನ್ಯವಾಗಿ ಹೆಚ್ಚು ಜನರನ್ನು ತಲುಪುತ್ತವೆ.

ಕೆಲವೊಮ್ಮೆ ಹತ್ತು ಆರ್ಟ್‌ ಸಿನಿಮಾಗಳು ತಂದುಕೊಡುವ ಹೆಸರು, ಜನಪ್ರಿಯತೆ ಮತ್ತು ಅವಕಾಶವನ್ನು ಒಂದೇ ಕಮರ್ಷಿಯಲ್‌ ಸಿನಿಮಾ ತಂದುಕೊಡುತ್ತದೆ. ಇದರ ಬಗ್ಗೆ ಬೇರೆಯವರ ಅಭಿಪ್ರಾಯ ಏನೇ ಇರಬಹುದು. ಆದ್ರೆ ಇದು ನನ್ನ ವೈಯಕ್ತಿಕ ಅನುಭವದ ಮಾತು’ ಎನ್ನುತ್ತಾರೆ. ಮಹಿಳಾ ಪ್ರಧಾನ ಚಿತ್ರಗಳ ಬಗ್ಗೆ ತಮಗಿರುವ ಒಲವಿನ ಬಗ್ಗೆ ಮಾತನಾಡುವ ಪ್ರಣೀತಾ, “ಮೊದಲೆಲ್ಲ ಮಹಿಳಾ ಪ್ರಧಾನ ಸಿನಿಮಾಗಳು ಅಂದ್ರೆ ಅವುಗಳು ಆರ್ಟ್‌ ಸಿನಿಮಾಗಳದ್ದೇ ಮತ್ತೂಂದು ಸ್ವರೂಪ ಎಂಬಂತಿರುತ್ತಿದ್ದವು.

Advertisement

ಆದ್ರೆ ಇವತ್ತು ಅವುಗಳ ಫಾರ್ಮೇಟ್‌ ಬದಲಾಗಿದೆ. ಮಹಿಳಾ ಪ್ರಧಾನ ಸಿನಿಮಾಗಳನ್ನೂ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ರೂಪದಲ್ಲಿ ಹೇಳಬಹುದು ಎಂಬುದನ್ನು ಇತ್ತೀಚೆಗೆ ಹಲವು ಸಿನಿಮಾಗಳು ತೋರಿಸಿಕೊಟ್ಟಿವೆ. “ಮೇರಿಕೋಮ್‌’, “ಮಹಾನಟಿ’, “ಐರನ್‌ ಲೇಡಿ’ ಹೀಗೆ ಇಂಥ ಸಾಕಷ್ಟು ಸಿನಿಮಾಗಳ ಉದಾಹರಣೆ ಸಿಗುತ್ತವೆ. ಮಹಿಳಾ ಪ್ರಧಾನ ಸಿನಿಮಾವಾದ್ರೂ, ಅದನ್ನು ಈ  ಥರ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಆಗಿ ಮಾಡೋದಾದ್ರೆ ಅಂಥ ಸಿನಿಮಾಗಳಲ್ಲಿ ಖಂಡಿತಾ ಅಭಿನಯಿಸುತ್ತೇನೆ.

ನಾವು ಇಷ್ಟಪಟ್ಟು, ಕಷ್ಟಪಟ್ಟು ಮಾಡುವ ಸಿನಿಮಾ ಹೆಚ್ಚು ಜನರಿಗೆ ತಲುಪಬೇಕು ನಮ್ಮ ಪರಿಶ್ರಮಕ್ಕೆ ಬೆಲೆ ಸಿಗಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾದಿಂದ ನಮ್ಮನ್ನು ಇನ್ನೂ ಹೆಚ್ಚು ಗುರುತಿಸುವಂತಾಗಬೇಕು’ ಎನ್ನುತ್ತಾರೆ. ಚಿತ್ರರಂಗದಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಮೆಲುಕು ಹಾಕುವ ಪ್ರಣೀತಾ, “ಕನ್ನಡದ ಒಂದು ಕಮರ್ಷಿಯಲ್‌ ಸಿನಿಮಾವನ್ನ ಕೇವಲ ಕನ್ನಡಿಗರು ಮಾತ್ರ ನೋಡುವುದಿಲ್ಲ. ಅಕ್ಕಪಕ್ಕದ ಭಾಷೆಯವರೂ ನೋಡುತ್ತಾರೆ.

ಆ ಸಿನಿಮಾದ ಕಲಾವಿದರು, ತಂತ್ರಜ್ಞರ ಪ್ರತಿಭೆ ಅವರಿಗೂ ಇಷ್ಟವಾದರೆ, ಇಲ್ಲಿಯವರು ಅಲ್ಲಿಯೂ ಅವಕಾಶ ಪಡೆದುಕೊಳ್ಳುತ್ತಾರೆ. ಇದಕ್ಕೆ ನಾನೇ ಉದಾಹರಣೆ. “ಪೊರ್ಕಿ’ ಸಿನಿಮಾ ಇಲ್ಲಿ ರಿಲೀಸ್‌ ಅದ ನಂತರ ತೆಲುಗು, ತಮಿಳಿನಲ್ಲೂ ನನಗೆ ಆಫ‌ರ್ ಬರೋದಕ್ಕೆ ಶುರುವಾಯ್ತು. ಹಿಟ್‌ ಆದ ನನ್ನ ಒಂದು ಕಮರ್ಷಿಯಲ್‌ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ಒಟ್ಟಿಗೆ ಐದಾರು ಸಿನಿಮಾಗಳ ಅವಕಾಶವನ್ನು ತಂದುಕೊಟ್ಟಿತು’ ಎನ್ನುವುದು ಪ್ರಣೀತಾ ಮಾತು. 

Advertisement

Udayavani is now on Telegram. Click here to join our channel and stay updated with the latest news.

Next