ಕಾಮೆಂಟರಿ. ನನ್ನ ಪಾಲಿಗೆ ನಾಲ್ಕು ಜನರ ಮುಂದೆ ಗಟ್ಟಿ ಧ್ವನಿಯಲ್ಲಿ ಮಾತಾಡಲು ವೇದಿಕೆಯಾದ ಪ್ರಬಲ ಅಸ್ತ್ರ. ಧೈರ್ಯವನ್ನು ತುಂಬಿದ ಮಾತಿನ ಯಂತ್ರ.
ಟಿ. ವಿ.ಯಲ್ಲಿ ಕ್ರಿಕೆಟ್ ನೋಡುವಾಗ ಇಂಗ್ಲಿಶ್ ಕಾಮೆಂಟ್ರಿಯನ್ನು ಕೇಳುತ್ತಿದ್ದೆ. ಮನೆ ಪಕ್ಕದಲ್ಲಿ ಆಡುವಾಗ ಇಂಗ್ಲಿಶಿನ ಅರೆಬೆಂದ ಭಾಷೆಯಲ್ಲಿ ನನ್ನ ಗೆಳೆಯರ ಬ್ಯಾಟಿಂಗ್ ಶೈಲಿಯನ್ನು ನೋಡಿ ಒಂದೆರಡು ಮಾತನ್ನು ಹೇಳುತ್ತಿದ್ದೆ. ಅವರನ್ನು ಉನ್ನತ ಮಟ್ಟದಲ್ಲಿ ಏರಿಸಿ ಆಟದಲ್ಲಿ ಮನೋರಂಜನೆಯನ್ನು ನೀಡಿದ್ದು ಬಹುಶಃ ಕಾಮೆಂಟ್ರಿಯ ಶೈಲಿಯನ್ನು ಅರಿತುಕೊಳ್ಳಲು ಕಾರಣವಾಯಿತು.
ಇಂಗ್ಲಿಷ್‌ನೊಂದಿಗೆ ಹಿಂದಿಯನ್ನು ಸೇರಿಸಿ ಕಾಮೆಂಟ್ರಿ ಮಾಡಿದರೆ ಸ್ನೇಹಿತರ ಆಟದಲ್ಲಿ ಅದೇನೋ ಉತ್ಸಾಹ. ಇದೇ ಮುಂದೆ ನಾನು ಕಾಮೆಂಟ್ರಿ ಮಾಡಲು ಕಾರಣವಾಯಿತು ಇರಬೇಕು. ಕ್ರಿಕೆಟ್ ಆಡುವಾಗ ಸುಮ್ಮನೆ ನನ್ನಷ್ಟಕ್ಕೆ ಒಬ್ಬನೇ ಗೆಳೆಯರ ಆಟವನ್ನು ಹೊಗಳುತ್ತ ಇರುವಾಗ ಪಿಯುಸಿಯಲ್ಲಿ ಮೊದಲ ಬಾರಿಗೆ ಅವಕಾಶವೊಂದು ಒದಗಿ ಬಂತು.
ಇಷ್ಟರವರೆಗೆ ಕಾಮೆಂಟ್ರಿ ಹೇಳುವಾಗ ಇದ್ದದ್ದು ನನ್ನ ಗೆಳೆಯರು ಮಾತ್ರ. ಮೊದಲ ಸಲ ಹಗಲು ರಾತ್ರಿಯ ಸ್ಥಳೀಯ ಕ್ರಿಕೆಟ್ ಪಂದ್ಯಾಟವೊಂದಕ್ಕೆ ಗೆಳೆಯನೊಬ್ಬ ಅವಕಾಶ ಕೊಟ್ಟಿದ್ದ. ಕೊಟ್ಟ ಅವಕಾಶವನ್ನು ಸ್ವಲ್ಪ ಹಿಂಜರಿದು ಸ್ವಲ್ಪ ಯೋಚಿಸಿ ಕೊನೆಗೂ ಒಪ್ಪಿ ಮೈಕ್ ಒಂದನ್ನು ನಾಲ್ಕು ಜನರ ಮುಂದೆ ಹಿಡಿದೇ ಬಿಟ್ಟೆ. ಮೊದಲ ಸಲ ಬಾಯಿ ತೊದಲಿ ಸಾಕಷ್ಟು ತಪ್ಪುಗಳನ್ನು ಮಾಡಿ ನರ್ವಸ್ ಆಗಿ ಸುಮ್ಮನೆ ಕೂತಾಗ ಅನುಭವಸ್ಥ ಕಾಮೆಂಟ್ರಿಯವರೊಬ್ಬರು ನನ್ನಲ್ಲಿ ಸ್ಥೈರ್ಯ ತುಂಬಿ ಮತ್ತೆ ಮೈಕ್ ಕೊಟ್ಟು ಪ್ರೋತ್ಸಾಹ ಮಾಡಿದವರನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ಅಂದಿನಿಂದ ಕನ್ನಡದಲ್ಲಿ ಸರಾಗವಾಗಿ ಕಾಮೆಂಟ್ರಿ ಮಾಡುವುದು ಸುಲಭವಾಯಿತು. ರಜಾದಿನಗಳಲ್ಲಿ ಬಂದ ಅವಕಾಶವನ್ನು ಬಳಸಿಕೊಂಡು ಕಾಮೆಂಟ್ರಿಯಲ್ಲಿ ಯಶಸ್ಸು ಸಾಧಿಸಿದೆ.ಅಮ್ಮನಿಗೆ ನಾನು ಗಟ್ಟಿಯಾಗಿ ಮೈಕ್‌ನಲ್ಲಿ ಮಾತಾಡಿ ಗಂಟಲು ಹರಿಯುವುದು ಇಷ್ಟವಿರಲಿಲ್ಲ. ಕಾರಣ ನಾನು ಮ್ಯಾಚ್‌ಗಳಿಗೆ ಕಾಮೆಂಟ್ರಿ ಮಾಡಲು ಹೋಗುತ್ತಿದ್ದುದು ರಾತ್ರಿಯ ವೇಳೆಯಲ್ಲಿ.ಅಮ್ಮನ ಚಿಂತೆಯನ್ನು ಕಡಿಮೆ ಮಾಡಿ ಕಾಮೆಂಟ್ರಿಯಲ್ಲಿ ಬಂದ ಹಣವನ್ನು ಅಮ್ಮನಿಗೆ ಕೊಟ್ಟಾಗ ಅವರ ಮುಖದಲ್ಲಿ ಮೂಡಿದ ಮಂದಹಾಸವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮೊದಲ ಸಂಪಾದನೆಯನ್ನು ಮಾಡಿ ಅಮ್ಮನಿಗೆ ಕೊಟ್ಟದ್ದು ಕಾಮೆಂಟ್ರಿಯ ಹಣ.
ಹಣಕ್ಕಾಗಿ ಕಾಮೆಂಟ್ರಿ ಅಲ್ಲ. ಎಷ್ಟೋ ಸಲ ಹಣವಿಲ್ಲದೆ ಕಾಲೇಜಿನ ಕೆಲ ಮ್ಯಾಚ್‌ನಲ್ಲಿ ಸುಮ್ಮನೆ ಕಾಮೆಂಟ್ರಿ ಮಾಡಿ ಅವರಿಂದ ಹೊಗಳಿಕೆಯನ್ನು ಗಿಟ್ಟಿಸಿಕೊಂಡಿದ್ದೇನೆ.ಕಾಮೆಂಟ್ರಿ ಮಾಡಿ ಕೆಲವೊಂದು ಸಂದರ್ಭದಲ್ಲಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಅರಿತುಕೊಂಡಿದ್ದೇನೆ.ತುಂಬಾ ಖುಷಿಯನ್ನು ತಂದದ್ದು. ಪಂದ್ಯಾಟವೊಂದರಲ್ಲಿ ಉತ್ತಮ ಯುವ ವೀಕ್ಷಕ ವರದಿಗಾರ ಪ್ರಶಸ್ತಿಯನ್ನು ಕೊಟ್ಟು ಪ್ರತಿಭೆಯೊಂದಕ್ಕೆ ಗೌರವಿಸಿದಾಗ ಹೆಮ್ಮೆಯ ಭಾವನೆ ಮೂಡುತ್ತದೆ. ಕಾಮೆಂಟ್ರಿಯಿಂದ ಮಾತನಾಡುವ ಶೈಲಿ ಕಲಿತಿದ್ದೇನೆ. ಭಾಷೆಯ ಹಿಡಿತ ದೊರಕಿದೆ. ದುಡಿದು ಬದುಕುವ ಛಲವೊಂದನ್ನು ಕಲಿತಿದ್ದೇನೆ.
– ಸುಹಾನ್
ಪತ್ರಿಕೋದ್ಯಮ ವಿಭಾಗ
ಎಂಜಿಎಂ ಕಾಲೇಜು, ಉಡುಪಿ