ಮುಂಬಯಿ: ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್ ಸೇವಾ ಸಂಸ್ಥೆ ಫ್ಲೈ ಬ್ಲೇಡ್ ಈಗ ಭಾರತದಲ್ಲಿ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ. ಸೋಮವಾರದಿಂದ ಈ ಸೇವೆ ಆರಂಭವಾಗಿದ್ದು, ಸುಲಭವಾಗಿ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬಯಿ-ಪುಣೆ-ಶಿರಿಡಿ ಮಧ್ಯೆ ಪ್ರಯಾಣಿಸಬೇಕಾದರೆ ರಸ್ತೆಯಲ್ಲಿ 4 ರಿಂದ 6 ಗಂಟೆಗಳ ಪ್ರಯಾಣ ಮಾಡಲೇ ಬೇಕಾಗಿದೆ. ಇದನ್ನು ಈ ಹೆಲಿಕಾಪ್ಟರ್ ಸೇವೆ 35 ನಿಮಿಷಕ್ಕೆ ಸಂಪರ್ಕಗೊಳಿಸಲಿದೆ.
ಫ್ಲೈ ಬ್ಲೇಡ್ ಸಂಸ್ಥೆಯ ಭಾರತದಲ್ಲಿನ ಬ್ಲೇಡ್ ಇಂಡಿಯಾ ವಿಭಾಗ ಈ ಸೇವೆಯನ್ನು ಮೊದಲ ಬಾರಿ ಮಹಾರಾಷ್ಟ್ರದಲ್ಲಿ ಪರಿಚಯಿಸಲಿದೆ. ಇದು ಕೆಲಸ ಮಾಡಬೇಕಾದರೆ ನಾವು ಸಂಸ್ಥೆಯ ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟ್‌ನಲ್ಲಿ ಟಿಕೇಟ್ ಬುಕ್ ಮಾಡಬೇಕಾಗಿದೆ. ಇದರ ಟಿಕೇಟ್ ಬುಕ್ಕಿಂಗ್ ಮತ್ತು ಸೇವಾ ವಿಧಾನ ವಿಮಾನಗಳಂತೆ ನಡೆಯುತ್ತದೆ. ಒಂದು ಕಡೆಯಿಂದ ನಿರ್ದಿಷ್ಟ ಸಮಯಕ್ಕೆ ಹೆಲಿಕಾಪ್ಟರ್ ಮತ್ತೂಂದು ನಗರಕ್ಕೆ ಸಂಚರಿಸಲಿದೆ.
ಆರಂಭದಲ್ಲಿ ಪುಣೆ, ಮುಂಬಯಿ, ಮತ್ತು ಶಿರಿಡಿ ನಗರಗಳನ್ನು ಇದು ಆಯ್ದುಕೊಂಡಿದ್ದು, ಸದ್ಯ ಈ ಮೂರು ನಗರದಲ್ಲಿ ಸೇವೆ ನೀಡಲಿದೆ. ಕಳೆದ ಮಾರ್ಚ್‌ನಲ್ಲಿ ಈ ಸೇವೆ ಆರಂಭಿಸುವ ಗುರಿ ಇತ್ತಾದರೂ ಲೋಕಸಭಾ ಚುನಾವಣೆ ಇದ್ದ ಕಾರಣಕ್ಕೆ ಅದು ಈಡೇರಿರಲಿಲ್ಲ.
ಮೊದಲು ಎಲ್ಲಿಗೆ?
ತನ್ನ ಮೊದಲ ಸೇವೆಯನ್ನು ಪುಣೆಯಿಂದ ಪ್ರಾರಂಭಿಸಿದೆ. ನಿತ್ಯ 6 ಪ್ರಯಾಣಿಕರನ್ನು ಹೊತ್ತು ಮುಂಬಯಿಗೆ ಪ್ರಯಾಣಿಸಲಿದೆ. ಬಳಿಕ ಮುಂಬಯಿಂದ ಶಿರ್ಡಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಚಲಿಸಲಿದ್ದು, ಅಲ್ಲಿಂದ ಪುಣೆಗೆ ವಾಪಸಾಗಲಿದೆ. ಸಂಜೆ ಮುಂಬಯಿಗೆ ತೆರಳಿ ವಾಪಸಾಗಲಿದೆ. ವಾರದಲ್ಲಿ 6 ದಿನಗಳು ಮಾತ್ರ ಸೇವೆ ನೀಡಲಿದ್ದು, ರವಿವಾರ ಸೇವೆ ಅಲಭ್ಯ. ಒಟ್ಟು 2 ಹೆಲಿಕಾಪ್ಟರ್‌ಗಳನ್ನು ಈ ಸೇವೆಗಾಗಿ ಬಳಸಲಾಗುತ್ತಿದೆ. ಪ್ರಯಾಣಿಕರು ತಮ್ಮ ಜತೆ ಒಟ್ಟು 10 ಕೆ.ಜಿ.ಯಷ್ಟು ಮಾತ್ರ ವಸ್ತುಗಳನ್ನು ಕೊಂಡೊಯ್ಯಬಹುದಾಗಿದೆ.