Advertisement
ಸುರತ್ಕಲ್ : ಸಣ್ಣ ವಯಸ್ಸಿಗೇ ತಂದೆ ತೀರಿ ಹೋಗಿದ್ದರು. ಇಬ್ಬರು ಹುಡುಗರಲ್ಲಿ ಅವರೇ ಹಿರಿಯರಾದ್ದರಿಂದ ಓದು ಮುಗಿಸಿ ಕುಟುಂಬಕ್ಕೆ ಆಸರೆಯಾಗಬೇಕಾದ ಅನಿವಾರ್ಯ. ಆದರೆ, ಬಾಲ್ಯದಿಂದಲೇ ಸೇನೆಗೆ ಸೇರುವ ಕನಸು. ಕುಟುಂಬ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಸೇನೆಗೆ ಸೇರಿ ಕುಟುಂಬಕ್ಕೂ ಆಸರೆಯಾಗಿ, ದೇಶ ಸೇವೆಯ ಉದ್ದೇಶವನ್ನೂ ಪೂರೈಸಿಕೊಂಡವರು ಪ್ರೇಮಾನಂದ ಪೈ.ಪ್ರೇಮಾನಂದ ಅವರು ಸುರತ್ಕಲ್ ಸರಕಾರಿ ಪ್ರಾಥಮಿಕ ಶಾಲೆ, ವಿದ್ಯಾದಾಯಿನಿಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಪಿಯು ಬಳಿಕ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪದವಿ ಓದುತ್ತಲೇ ಕುಟುಂಬಕ್ಕೂ ಆಸರೆಯಾಗುವ ಉದ್ದೇಶದಿಂದ ಮಂಗಳೂರು ಬಂದರಿನಲ್ಲಿ ಸಣ್ಣ ಕೆಲಸವೊಂದಕ್ಕೆ
ಸೇರಿದ್ದರು. ಆದರೆ ಸೇನೆ ಸೇರುವ ಉತ್ಸಾಹ ಒಂಚೂರೂ ಕಡಿಮೆಯಾಗಿರಲಿಲ್ಲ. ಅದೇ ಹೊತ್ತಿಗೆ ಬಂದರು ಪ್ರದೇಶದ ಕೆನರಾ ಬ್ಯಾಂಕ್‌ನಲ್ಲಿ ರಾಜೇಶ್ ಕಿಣಿ ಎಂಬುವವರ ಪರಿಚಯವಾಗಿ ಸೇನೆಗೆ ಸೇರುವ ಬಯಕೆ ವ್ಯಕ್ತಪಡಿಸಿದ್ದರು. ಅದೊಂದು ದಿನ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗಿದ್ದೇ ತಡ, ಕಿಣಿ ಅವರು 450 ರೂ. ಶುಲ್ಕ ಕಟ್ಟಿ ಅರ್ಜಿ ಹಾಕಲು ಎಲ್ಲಾ ರೀತಿ ಸಹಾಯ ಮಾಡಿದ್ದರು. ಬಳಿಕ ಪ್ರೇಮಾನಂದ ಅವರು ಎಲ್ಲ ಪರೀಕ್ಷೆಗಳನ್ನು ಪಾಸು ಮಾಡಿದ್ದು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಗೆ ಆಯ್ಕೆಯಾಗಿದ್ದರು. ಪರಿಣಾಮ ಓದು ಅರ್ಧಕ್ಕೇ ಮೊಟಕುಗೊಳಿಸಿ, ರಾಷ್ಟ್ರಸೇವೆಗೆ ತೆರಳಿದರು.
ಹಿಮಾಚಲ ಪ್ರದೇಶದಲ್ಲಿ ನಡೆದ ಕ್ಯಾಂಪ್ ಒಂದರ ತರಬೇತಿ ಸಂದರ್ಭ ಸ್ನೇಹಿತರೊಂದಿಗೆ.
Related Articles
ಆರಂಭದಲ್ಲಿ ಪ್ರೇಮಾನಂದ ಅವರು ಸೇನೆಗೆ ಸೇರುವುದಕ್ಕೆ ಮನೆಯವರ ವಿರೋಧವಿದ್ದರೂ ಈಗ ದೇಶ ಸೇವೆ ಮಾಡುತ್ತಿರುವುದರ ಬಗ್ಗೆ ಕುಟುಂಬಕ್ಕೆ ತೀವ್ರ ಹೆಮ್ಮೆ ಇದೆ. ಅವರ ಸೋದರ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ಪ್ರೇಮಾನಂದ ಅವರು ಇಬ್ಬರು ಮುದ್ದು ಮಕ್ಕಳ ತಂದೆಯಾಗಿದ್ದಾರೆ. ಊರಿನಲ್ಲಿ ಪ್ರೇಮಾನಂದ ಅವರ ಬಗ್ಗೆ ಅತೀವ ಗೌರವಾದರಗಳಿವೆ.
Advertisement
ತಾಲಿಬಾನ್ ಉಗ್ರರಿಗೆ ಉತ್ತರ2002ರಲ್ಲಿ ಐಟಿಬಿಪಿಗೆ ಸೇರ್ಪಡೆಯಾದ ಬಳಿಕ ಹರಿಯಾಣ, ಚಂಡೀಗಢದ ಬಾನುವಿನಲ್ಲಿ ತರಬೇತಿ ಪಡೆದರು. ಬಳಿಕ ಕಮಾಂಡೋ ತರಬೇತಿಯನ್ನು ಮಸ್ಸೂರಿಯಲ್ಲಿ ಪಡೆದಿದ್ದರು. ಪ್ರಥಮ ಮೂರು ವರ್ಷ ಛತ್ತೀಸ್‌ಗಢದ ಪಿತ್ತೋರ್‌ಗಢದಲ್ಲಿ ಪೋಸ್ಟಿಂಗ್ ಆಗಿದ್ದು, ಬಳಿಕ ಅಫ್ಘಾನಿಸ್ಥಾನದಲ್ಲಿ ಭಾರತೀಯ ರಾಯಭಾರ ಕಚೇರಿ ರಕ್ಷಣೆಗೆ ನಿಯುಕ್ತಿಯಾಗಿದ್ದರು. ಈ ಸಂದರ್ಭ ತಾಲಿಬಾನ್ ಉಗ್ರರು ನಡೆಸಿದ್ದ ಎರಡು ಆತ್ಮಾಹುತಿ ದಾಳಿಗಳನ್ನು ಎದುರಿಸಿದ ದಿಟ್ಟ ಅನುಭವ ಹೊಂದಿದ್ದಾರೆ. ಉಮರ್ ಅಬ್ದುಲ್ಲಾ , ಗುಲಾಂನಬಿಗೆ ರಕ್ಷಣೆ
ವಿಶೇಷ ಕಮಾಂಡೋ ತರಬೇತಿ ಪಡೆದಿದ್ದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮತ್ತು ಕೇಂದ್ರ ಸರಕಾರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರ ರಕ್ಷಣೆಗೂ ಪ್ರೇಮಾನಂದ ಅವರು ನಿಯುಕ್ತಿಗೊಂಡಿದ್ದರು. ಇದರೊಂದಿಗೆ ಛತ್ತೀಗಢ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ವೇಳೆ ನೆಲ ಬಾಂಬ್ ಪತ್ತೆಯ ಕಾರ್ಯದಲ್ಲೂ ಭಾಗಿಯಾಗಿದ್ದು, ಹಲವಾರು ಸೈನಿಕರ ಪ್ರಾಣ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ನಮಗೇ ಸಿಕ್ಕ ಗೌರವ
ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಪ್ರೇಮಾನಂದ ಆಟೋಟದಲ್ಲಿ ಸದಾ ಮುಂದಿರುತ್ತಿದ್ದ. ಬಳಿಕ ಕುಟುಂಬದ ಆಧಾರವಾಗಿದ್ದರೂ ಸೇನೆ ಸೇರಿ ಕಮಾಂಡೋ ಆಗಿದ್ದಾನೆ. ಮನೆಯವರಿಗೆ ಸದಾ ಧೈರ್ಯ ತುಂಬುತ್ತಿದ್ದ. ಆತ ಕಮಾಂಡೋ ಆಗಿರುವುದು ನಮಗೆ, ಊರಿಗೆ ಅತಿ ದೊಡ್ಡ ಗೌರವ.
– ಮಹೇಶ್ ಮೂರ್ತಿ
ಸುರತ್ಕಲ್, ಸ್ನೇಹಿತ ಲಕ್ಷ್ಮೀನಾರಾಯಣ ರಾವ್