Advertisement

ಹೊರಬೀಳದ ಆದೇಶ, ಮುಗಿಯದ ಆತಂಕ

10:12 AM Oct 25, 2021 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ದೀಪಗಳ ಹಬ್ಬದ ಕಳೆ ಶುರುವಾಗುತ್ತಿದೆ. ಮಾರುಕಟ್ಟೆಯಲ್ಲಿ ಭಿನ್ನಶೈಲಿಯ ದೀಪಗಳು, ಅಲಂಕಾರಿಕ ವಸ್ತುಗಳು ಲಗ್ಗೆಯಿಟ್ಟಿವೆ. ಆದರೆ ಸಂಭ್ರಮಕ್ಕೆ ಇಂಬು ತುಂಬುವ ಪಟಾಕಿಗಳ ಕಳೆ ಕಾಣುತ್ತಿಲ್ಲ.

Advertisement

ದೀಪಾವಳಿ ಹಬ್ಬ ಒಂದೆರಡು ತಿಂಗಳುಗಳ ಮೊದಲೇ ಭಿನ್ನಶೈಲಿಯ ಪಟಾಕಿಗಳ ಮಾರಾಟ ಪ್ರಕ್ರಿಯೆ ಸಣ್ಣ ಪ್ರಮಾಣದಲ್ಲಿ ನಗರದೆಲ್ಲೆಡೆಗಳಲ್ಲಿ ಆರಂಭವಾಗುತ್ತಿತ್ತು. ಆದರೆ ಆ ಸನ್ನಿವೇಶಗಳು ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ. ಕಳೆದ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿಗಳ ಮಾರಾಟದ ಮೇಲೆ ನಿರ್ಬಂಧಗಳ ಹೇರಿತ್ತು.

ಹಸಿರು ಪಟಾಕಿಗಳ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಈ ವರ್ಷ ಕೂಡ ಸರ್ಕಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡುತ್ತದೆಯೋ ಇಲ್ಲವೋ ಎಂಬ ಆತಂಕ, ಅಳುಕಿನಲ್ಲಿ ಪಟಾಕಿ ಮಾರಾಟಗಾರರು ಇದ್ದಾರೆ. ಕೋವಿಡ್‌ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ಕಳೆದ ಬಾರಿ ಪಟಾಕಿಗಳ ಮಾರಾಟ ಕುಸಿದಿತ್ತು. ಹೇಳಿಕೊಳ್ಳುವ ರೀತಿಯಲ್ಲಿ ಆಗಲಿಲ್ಲ. ಆ ಹಿನ್ನೆಲೆಯಲ್ಲಿ ಸರ್ಕಾರ ಈ ಬಾರಿ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿದರೆ ಒಂದಿಷ್ಟು ಉಸಿರಾಡುತ್ತೇವೆ ಎಂಬುವುದು ಪಟಾಕಿ ಮಾರಾಟಗಾರರ ಮಾತಾಗಿದೆ.

ಇದನ್ನೂ ಓದಿ:- ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ದೀಪಾವಳಿ ಸಮೀಪ ಬರುತ್ತಿದ್ದಂತೆ ಹೊಸೂರು, ಅನೇಕಲ್‌, ಚಂದಾಪುರ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟ ಪ್ರಕ್ರಿಯೆಯ ಕಳೆ ಕಾಣುತ್ತಿತ್ತು. ಆದರೆ ಈ ಬಾರಿ ಅಂತಹ ಕಳೆ ಕಾಣುತ್ತಿಲ್ಲ ಸೇಲ್ಸ್‌ ಕೂಡ ಇಲ್ಲ ಎಂದು ಎಂದು ಸ್ವಾತಿ ಡೀಲರ್ಸ್‌ನ ಮಾಲೀಕರಾದ ನಿತೇಶ್‌ ಹೇಳುತ್ತಾರೆ. ಕಳೆದ ಬಾರಿ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿತ್ತು. ಈ ಬಾರಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

Advertisement

ಆ ಹಿನ್ನೆಲೆಯಲ್ಲಿ ಸರ್ಕಾರ ಮಾರಾಟಕ್ಕೆ ಪರವಾನಿಗೆ ನೀಡುತ್ತದೆಯೋ ಅಥವ ಇಲ್ಲವೋ ಎಂಬ ಆತಂಕದಲ್ಲಿ ಮಾರಾಟಗಾರರಿದ್ದಾರೆ. ಸರ್ಕಾರ ಈ ಬಾರಿ ಹಸಿರು ಪಟಾಕಿಗಳ ಮಾರಾಟಕ್ಕಾದರೂ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಾರೆ. ಕಳೆದ ವರ್ಷ ಹಸಿರು ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿದರೂ ಕೋವಿಡ್‌ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಲಿಲ್ಲ. ಹೀಗಾಗಿ ಅಧಿಕ ಪ್ರಮಾಣದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ಸರ್ಕಾರ ಈ ಬಾರಿ ಸಿಡಿಮದ್ದುಗಳ ಮಾರಾಟದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಮಿಳುನಾಡು ಸಿಎಂ ಪತ್ರ-

ನೆರೆ ರಾಜ್ಯ ತಮಿಳುನಾಡಿನ ಶಿವಕಾಶಿ ಪಟಾಕಿ ಮಾರಾಟಕ್ಕೆ ಹೆಸರುವಾಸಿ. ರಾಜ್ಯಕ್ಕೆ ಶಿವಕಾಶಿ ಮತ್ತು ಹೊಸೂರು ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ಪಟಾಕಿ ಆಮದಾಗುತ್ತದೆ. ಈ ಬೆನ್ನೆಲ್ಲೆ ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಪತ್ರ ಬರೆದಿದ್ದಾರೆ.

ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿ, ಒಡಿಶಾ, ರಾಜಸ್ತಾನ ಮತ್ತು ಹರಿಯಾಣ ರಾಜ್ಯಗಳು ಈ ಹಿಂದೆ ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಿದ್ದವು.ಆ ಹಿನ್ನೆಲೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಗಳು ಹಲವು ರಾಜ್ಯಗಳಿಗೆ ಪತ್ರ ಬರೆದು ಪಟಾಕಿ ಮಾರಾಟಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.

ಆನ್‌ಲೈನ್‌ ಮೂಲಕ ಮಳಿಗೆ  ಫಿಕ್ಸ್‌-

ಕಳೆದ ವರ್ಷ ಪರಿಸರ ಸ್ನೇಹಿ ಹಸಿರು ಪಟಾಕಿಯೇ ಸಿಡಿಸಬೇಕೆಂದು ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ 60 ಮೈದಾನದಲ್ಲಿ 460 ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಿತ್ತು. ಅಲ್ಲದೆ, ಐದು ದಿನ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶವಿತ್ತು.

ಈ ಆಧಾರದ ಮೇಲೆ ಪೊಲೀಸ್‌ ಇಲಾಖೆ ಆನ್‌ಲೈನ್‌ ಮೂಲಕ ಅರ್ಜಿ ಅಹ್ವಾನಿಸಿ ಪಟಾಕಿ ಮಳಿಗೆಗಳನ್ನು ನೀಡಿತ್ತು. 2020ರಲ್ಲಿ ಪೊಲೀಸ್‌ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗೆ ತಲಾ ಐದು ಸಾವಿರ ಶುಲ್ಕ, 25 ಸಾವಿರ ಭದ್ರತಾ ಠೇವಣಿ, ಅಲ್ಲದೆ, ನಿತ್ಯ ಬಿಬಿಎಂಪಿಗೆ 1000-1500 ರೂ. ಬಾಡಿಗೆ ನಿಗದಿಪಡಿಸಿತ್ತು. ಅದೇ ಮಾದರಿಯಲಿ ಈ ಬಾರಿಯೂ ಆನ್‌ಲೈನ್‌ ಮೂಲಕವೇ ಅರ್ಜಿ ಆಹ್ವಾನಿಸಲಾಗುತ್ತದೆ.

100 ಕೋಟಿ ರೂ. ವಹಿವಾಟು-

ಈ ಹಿಂದೆ ರಾಜ್ಯದಲ್ಲಿ ಸುಮಾರು 100 ರಿಂದ 150 ಕೋಟಿ ರೂ. ಪಟಾಕಿ ವಹಿವಾಟು ನಡೆಯುತ್ತಿತ್ತು. ಆರ್ಥಿಕ ಬಿಕ್ಕಟ್ಟು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ನ್ಯಾಯಾಲಯದ ಆದೇಶ ಸೇರಿದಂತೆ ಇನ್ನಿತರ ಪರಿಸ್ಥಿತಿಗಳಿಂದಾಗಿ ಒಟ್ಟಾರೆ ಪಟಾಕಿಗಳ ಮಾರಾಟದ ವಹಿವಾಟಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ.

ಪಟಾಕಿ ಖರೀದಿಸುವವರ ಸಂಖ್ಯೆಯಲ್ಲೂ ಇಳಿ ಮುಖವಾಗಿದೆ. 2019ರಲ್ಲಿ ದೀಪಾವಳಿಯ ಸಮಯದಲ್ಲಿ ಸುಮಾರು 80-90 ಕೋಟಿ ರೂ. ವ್ಯಾಪಾರ ವಹಿವಾಟು ನಡೆದಿತ್ತು. ಬೆಂಗಳೂರಿನಲ್ಲೆ ಸುಮಾರು ಅಂದಾಜು 60 ಕೋಟಿ ರೂ. ನಷ್ಟು ಪಟಾಕಿಗಳ ವ್ಯಾಪಾರ ಆಗಿತ್ತು. ಸರ್ಕಾರ ಈ ವರ್ಷ ಪಟಾಕಿ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದರೆ ಸುಮಾರು 40ರಿಂದ 50 ಕೋಟಿ ರೂ. ವಹಿವಾಟು ನಿರೀಕ್ಷೆ ಮಾಡಲಾಗಿದೆ ಎಂದು ಪಟಾಕಿ ವ್ಯಾಪಾರಿಗಳು ಹೇಳುತ್ತಾರೆ.

ಇದನ್ನೂ ಓದಿ:- ಸಾಮೂಹಿಕ ನಾಯಕತ್ವದಲ್ಲಿ ಕಸಾಪ ಮುನ್ನಡೆ

ಹೊಸ ರೀತಿಯ ಪಟಾಕಿಗಳು ಬಂದಿಲ್ಲ-

“ಮಾರುಕಟ್ಟೆಯಲ್ಲಿ ಈ ವರ್ಷ ಹೊಸ ರೀತಿಯ ಪಟಾಕಿಗಳು ಬಂದಿಲ್ಲ. 50 ರೂ. ನಿಂದ 5000 ರೂ. ವರೆಗಿನ ಪಟಾಕಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸುರ್‌ಸುರಬತ್ತಿ, ಹೂಕುಂಡ, ವಿಷ್ಣು ಚಕ್ರ, ಸ್ಕೈ ಶಾಟ್‌, ಮಕ್ಕಳ ಪಟಾಕಿಗಳು ಸೇರಿದಂತೆ 200ಕ್ಕೂ ಅಧಿಕ ಶೈಲಿಯ ಸಾಂಪ್ರದಾಯಿಕ ಪಟಾಕಿಗಳು ದೊರೆಯಲಿವೆ ಎಂದು ಜಯನಗರದ ಧಮಾಕ ಸ್ಟೋರ್‌ನ ವ್ಯಾಪಾರಿ ಚಂದನ್‌ ಹೇಳುತ್ತಾರೆ. ಈ ಹಿಂದೆ ಗ್ರಾಹಕರು 1 ಸಾವಿರದಿಂದ 5 ಸಾವಿರ ರೂ. ಮುಖ ಬೆಲೆಯ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ.

ಜತೆಗೆ ಹಲವು ವಾರಗಳ ಮೊದಲೆ ಆರ್ಡರ್‌ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿಯಿಲ್ಲ. ಉತ್ತರ ಭಾರತದವರು ಅಧಿಕ ಸಂಖ್ಯೆಯಲ್ಲಿ ಪಟಾಕಿ ಖರೀದಿ ಮಾಡುತ್ತಾರೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರು ಊರು ಸೇರಿದ್ದಾರೆ. ಉಡುಗೊರೆ ನೀಡಲು ಕೂಡ ಉತ್ತರ ಭಾರತದವರು ಸಿಡಿಮದ್ದುಗಳನ್ನು ಖರೀದಿ ಮಾಡುತ್ತಿದ್ದರು. ಹೀಗಾಗಿ ಅವರ ಅನುಪಸ್ಥಿತಿ ಕೂಡ ಪಟಾಕಿ ಮಾರಾಟದ ಮೇಲೆ ಈ ಸಲ ಹೊಡೆತ ಬೀಳುವ ಸಾಧ್ಯತೆ ಎಂದು ಮಾಹಿತಿ ನೀಡುತ್ತಾರೆ.

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಅಕ್ರಮ ಪಟಾಕಿ ಗೋದಾಮುಗಳು, ಮಳಿಗೆಗಳು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂಥ ಗೋದಾಮುಗಳು, ಮಳಿಗೆಗಳ ಮೇಲೆ ಪೊಲೀಸರಿಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಕೆಲವೆಡೆ ಅಂತಹ ಗೋದಾಮುಗಳ ಮಾಹಿತಿ ಸಂಗ್ರಹಿಸಲಾಗಿದೆ.”              –  ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

ಅಕ್ರಮ ಪಟಾಕಿ ಗೋದಾಮುಗಳ ಮೇಲೆ ಕ್ರಮಕ್ಕೆ ಸೂಚನೆ-

ಸೆ.23ರಂದು ಚಾಮರಾಜಪೇಟೆಯ ನ್ಯೂ ತರಗು ಪೇಟೆ ಯಲ್ಲಿ ಅಕ್ರಮ ಪಟಾಕಿ ಗೋದಾಮಿನಲ್ಲಿ ನಡೆದ ಬೆಂಕಿ ದುರಂತದಲ್ಲಿ ಇಬ್ಬರು ಮೃತಪಟ್ಟ ಬೆನ್ನಲ್ಲೇ ನಗರದಲ್ಲಿ ಪೊಲೀಸರು ಅಕ್ರಮ ಪಟಾಕಿ ಗೋದಾಮುಗಳು ಮತ್ತು ಮಳಿಗೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ನಗರದಲ್ಲಿರುವ ಅಕ್ರಮ ಪಟಾಕಿ ಅಥವಾ ಸ್ಫೋಟಕ ವಸ್ತುಗಳ ಗೋದಾಮು ಮತ್ತು ಮಳಿಗೆಗಳ ಮೇಲೆ ನಿಗಾವಹಿಸಬೇಕು. ಅಂತಹ ಯಾವುದೇ ಸ್ಥಳಗಳಿ ದ್ದಲಿ ದಾಳಿ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದ್ದರು.

ಈ ಬೆನ್ನಲ್ಲೇ ನಗರದ ಎಂಟು ಕಾನೂನು ಸುವ್ಯವಸ್ಥೆ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದರು. ಈ ವೇಳೆ ಸುಮಾರು 15ಕ್ಕೂ ಅಧಿಕ ಅಕ್ರಮ ಗೋದಾಮುಗಳು ಇವೆ ಎಂಬುದು ಪತ್ತೆಯಾಗಿವೆ. ಆದರೆ, ಕೆಲವೆಡೆ ಪಟಾಕಿ ದಾಸ್ತಾನು ಮಾಡಿಲ್ಲ. ಬೇರೆ ವಸ್ತುಗಳನ್ನು ಶೇಖರಿಸಿಟ್ಟಿದ್ದಾರೆ. ದೀಪಾವಳಿ ಸಮೀಸುತ್ತಿದ್ದಂತೆ ಪಟಾಕಿ ಗೋದಾಮುಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

ಹೀಗಾಗಿ ನಿಗಾವಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮತ್ತೂಂದೆಡೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಅವರು ಪಟಾಕಿ ಮಾರಾಟಕ್ಕೆ ಅವಕಾಶ ನೀಡುವಂತೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದರೆ, ಈ ಬಾರಿ ಪಟಾಕಿ ಮಳಿಗೆಗಳು ಹೆಚ್ಚಾಗಬಹುದು. ಇದರೊಂದಿಗೆ ಅಕ್ರಮ ಪಟಾಕಿ ಗೋದಾಮುಗಳು ಕೂಡ ನಿರೀಕ್ಷೆಯಂತೆಯೇ ಅಧಿಕವಾಗಲಿದೆ. ಈ ಬಗ್ಗೆ ಈಗಾಗಲೇ ಆಯಾ ಠಾಣೆ ವ್ಯಾಪ್ತಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಹಸಿರು ಪಟಾಕಿ ಸೇರಿದಂತೆ ಯಾವುದೇ ರೀತಿಯ ಪಟಾಕಿಗಳಿಗಳೇ ಇರಲಿ. ಅವು ಸಿಡಿದಾಗ ಶಬ್ಧದ ಜತೆಗೆ ವಿಷ ಅನಿಲ ಓರಸೂಸುತ್ತವೆ. ಈಗಾಗಲೇ ತಜ್ಞರು ಕೋವಿಡ್‌ 3ನೇ ಅಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪುಟಾಣಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿರ್ಬಂಧ ಹೇರುವುದು ಉತ್ತಮ.” – ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

 ಈ ವರ್ಷವೂ ಕ್ಯೂಆರ್‌ಕೋಡ್‌

ಹಸಿರು ಪಟಾಕಿ ಗುರುತಿಸಲು ಕಳೆದ ವರ್ಷ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಲಾಗಿತ್ತು. ಈ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸುತ್ತಿದ್ದರು. ಈ ವರ್ಷವೂ ಅದೇ ಮಾದರಿಯಲ್ಲಿ ಹಸಿರು ಪಟಾಕಿಗೆ ಅನುಮತಿ ನೀಡಿದರೆ, ಪೊಲೀಸರ ದಾಳಿ ಸಂದರ್ಭದಲ್ಲಿ ಕ್ಯೂಆರ್‌ ಕೋಡ್‌ ಅನುಕೂಲವಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

  • ದೇವೇಶ ಸೂರಗುಪ್ಪ/ ಮೋಹನ್‌ ಭದ್ರಾವತಿ
Advertisement

Udayavani is now on Telegram. Click here to join our channel and stay updated with the latest news.

Next