ಚಿಕ್ಕಬಳ್ಳಾಪುರ: ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡರ್ ಹುದ್ದೆಗೆ ಒಂದೂವರೆ ವರ್ಷದ ಬಳಿಕ ಜಿಲ್ಲಾ ಸಮಾದೇಷ್ಟರಾಗಿ ಹೆಚ್.ಎಸ್.ಅಂಜಿನಪ್ಪ ನೇಮಕಗೊಂಡಿದ್ದು, ಗುರುವಾರ ನಗರದ ಹೊರ ವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿರುವ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಹಲವು ವರ್ಷಗಳಿಂದ ಗೃಹ ರಕ್ಷಕ ದಳಕ್ಕೆ ಜಿಲ್ಲಾ ಸಮಾದೇಷ್ಟರು ನೇಮಿಸದೇ ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಪ್ರಭುಶಂಕರ್ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದೀಗ ನಗರದ ಮಹೇಶ್ವರಿ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಹೆಚ್.ಎಸ್.ಅಂಜಿನಪ್ಪ ಅವರನ್ನು ನೇಮಕ ಮಾಡಿ ರಾಜ್ಯ ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹ ರಕ್ಷಕ ದಳದ ಮಹಾ ಸಮಾದೇಷ್ಟರು ಆದೇಶ ಹೊರಡಿಸಿದ್ದಾರೆ.
ಅಧಿಕಾರ ಹಸ್ತಾಂತರ: ಜಿಲ್ಲಾ ಕಮಾಂಡರ್ ಆಗಿ ನೇಮಕಗೊಂಡ ಹೆಚ್.ಎಸ್.ಅಂಜಿನಪ್ಪಗೆ ಇದುವರೆಗೂ ಪ್ರಭಾರಿಯಾಗಿ ಜಿಲ್ಲಾ ಸಮಾದೇಷ್ಟರಾಗಿ ಕಾರ್ಯನಿರ್ವಹಿಸಿದ ಚಿಕ್ಕಬಳ್ಳಾಪುರದ ಡಿವೈಎಸ್‌ಪಿ ಪ್ರಭುಶಂಕರ್ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ಆರ್.ರಾಜೇಂದ್ರನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದನೆ: ಅಧಿಕಾರ ಸ್ವೀಕರಿಸಿ ಮಾತನಾಡಿದ ಹೆಚ್.ಎಸ್.ಅಂಜಿನಪ್ಪ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ಸಿಬ್ಬಂದಿಗೆ ಅಗತ್ಯ ಮೂಲ ಸೌಕರ್ಯ ಸೌಲಭ್ಯಗಳ ಜೊತೆಗೆ ತಮ್ಮ ಕಾಲಾವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಅದೇ ರೀತಿ ಗೃಹ ರಕ್ಷಕರು ಕೂಡ ತಮಗೆ ವಹಿಸಿದ ರಕ್ಷಣಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಜನರ ನಂಬಿಕೆ, ವಿಶ್ವಾಸ ಗಳಿಸಬೇಕೆಂದರು.
ಗಮನ ಸೆಳೆದಿದ್ದ ಉದಯವಾಣಿ ವರದಿ: ಜಿಲ್ಲಾ ಗೃಹ ರಕ್ಷಕ ದಳಕ್ಕೆ ವರ್ಷದಿಂದ ಜಿಲ್ಲಾ ಕಮಾಂಡರ್ ಇಲ್ಲದೇ ಇರುವ ಕುರಿತು ಕಳೆದ ಫೆ.23 ರಂದೇ ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ”ಗೃಹ ರಕ್ಷಕರಿಗಿಲ್ಲ ಕಮಾಂಡ್” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.