Advertisement
ಇದರ ಬೆನ್ನಲ್ಲೇ ಪೊಲೀಸ್ ಇಲಾಖೆಯು “ಸಂರಕ್ಷಿತ ವ್ಯಕ್ತಿ’ಗಳ (ವಿವಿಐಪಿ) ನೆಪದಲ್ಲಿ ಯಾವುದೇ ಕಾರಣಕ್ಕೂ ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧಿಸಬಾರದು. ವಾಹನಗಳ ಸಂಖ್ಯೆ ದುಪ್ಪಟ್ಟು ಆಗಿದ್ದು, ವಿವಿಐಪಿ ವ್ಯಕ್ತಿಗಳ ಸುಗಮ ಸಂಚಾರಕ್ಕೆ ಉದ್ಯಾನದ ಎಲ್ಲ ದ್ವಾರಗಳನ್ನು ವಾರದ ಆರು ದಿನ ಮುಕ್ತಗೊಳಿಸಬೇಕು ಎಂದು ಪಟ್ಟುಹಿಡಿದಿದೆ. ಅಷ್ಟೇ ಅಲ್ಲ, ಈಗಾಗಲೇ ಈ ಸಂಬಂಧ ಅಧಿಸೂಚನೆ ಕೂಡ ಹೊರಡಿಸಿದೆ.
Related Articles
Advertisement
ಪೊಲೀಸ್ ಇಲಾಖೆ ಆದೇಶ: ತೋಟಗಾರಿಕೆ ಇಲಾಖೆ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುವ ಮುನ್ನವೇ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಅವರು ಕಬ್ಬನ್‌ಪಾರ್ಕ್‌ನ ಏಳು ದ್ವಾರಗಳಲ್ಲೂ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಗೇಟ್ ತೆರೆಯಲು ಕಬ್ಬನ್‌ಪಾರ್ಕ್ ಸಂಚಾರ ಪೊಲೀಸರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಇರುವಂತೆ ಬೆಂಗಳೂರು ನಗರದಲ್ಲಿ 2009ರಲ್ಲಿ 24 ಲಕ್ಷ ಇದ್ದ ವಾಹನಗಳ ಸಂಖ್ಯೆ ಪ್ರಸ್ತುತ 67 ಲಕ್ಷ ಮೀರಿದೆ.
ನಗರದ ರಸ್ತೆಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳನ್ನು ನಿರ್ವಹಿಸುತ್ತಿವೆ. ಅಲ್ಲದೆ ವಿಧಾನಸೌಧದ ಸುತ್ತಮುತ್ತಲಿನ ವಿಐಪಿಗಳ ಓಡಾಟಕ್ಕೆ ಅಡಚಣೆ ಆಗದಂತೆ ಸುಗಮ ಸಂಚಾರ ಕಲ್ಪಿಸಲು ಕಬ್ಬನ್‌ಉದ್ಯಾನದಲ್ಲಿ ಲಭ್ಯವಿರುವ ಎಲ್ಲ ಗೇಟ್‌ಗಳ ಮೂಲಕ ಸಂಚಾರಕ್ಕೆ ಅನುಮತಿ ನೀಡುವುದು ಅನಿವಾರ್ಯವಾಗಿದೆ. ಆದ್ದರಿಂದ ಕಬ್ಬನ್ ಉದ್ಯಾನದೊಳಕ್ಕೆ ವಾಹನ ಸಂಚಾರ ನಿರ್ಬಂಧಿಸಿ ಹೊರಡಿಸಲಾಗಿದ್ದ ಇಲ್ಲಿಯವರೆಗಿನ ಎಲ್ಲಾ ಅಧಿಸೂಚನೆಗಳನ್ನು ಬದಿಗಿಟ್ಟು ಉದ್ಯಾನದಲ್ಲಿ ವಾಹನ ಪ್ರವೇಶಕ್ಕೆ ಆದೇಶಿಸಿರುವುದಾಗಿ ಉಲ್ಲೇಖೀಸಲಾಗಿದೆ.
ಏಕಾಏಕಿ ಆದೇಶ: ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಎಲ್ಲ ಗೇಟ್ ಮುಕ್ತಗೊಳಿಸುವಂತೆ ಪೊಲೀಸ್ ಆಯುಕ್ತರು ನೀಡಿರುವ ಆದೇಶದ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕಿಂಚಿತ್ತು ಮಾಹಿತಿಯೂ ಇರಲಿಲ್ಲ. ಬುಧವಾರ ಸಂಜೆ ಏಕಾಏಕಿ ಪೊಲೀಸ್ ಅಧಿಕಾರಿಗಳು ಕಬ್ಬನ್‌ಪಾರ್ಕ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಈ ಆದೇಶ ಪತ್ರ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಬ್ಬನ್‌ಪಾರ್ಕ್‌ನಲ್ಲಿ ಪ್ರತಿ ಭಾನುವಾರ ಮತ್ತು ತಿಂಗಳ ಎರಡನೇ ಶನಿವಾರ ಸೇರಿದಂತೆ ರಾಷ್ಟ್ರೀಯ ಮೂರು ಹಬ್ಬಗಳ ಸಂದರ್ಭದಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂದು ಕಳೆದ 2 ವರ್ಷಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿತ್ತು. ಆ ಆದೇಶವನ್ನೇ ಇಲ್ಲಿಯವರೆಗೆ ಪಾಲಿಸಿಕೊಂಡು ಬರಲಾಗುತ್ತಿದೆ. ಈ ನಡುವೆ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಉದ್ಯಾನದಲ್ಲಿ 24 ಗಂಟೆಗಳ ಕಾಲ ಅವಕಾಶ ನೀಡಬೇಕು ಎನ್ನುವ ವಿಚಾರದಲ್ಲಿಯೇ ಪೊಲೀಸ್ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ನಡುವೆ ತಿಕ್ಕಾಟ ನಡೆದಿತ್ತು.
ಶಬ್ಧ ಮಾಲಿನ್ಯದ ಪರಿಮಾಣ ಅಳತೆ: ನೃಪತುಂಗ ರಸ್ತೆ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಕಬ್ಬನ್‌ಪಾರ್ಕ್‌ನಲ್ಲಿ ಅವಕಾಶ ನೀಡಿದ್ದ ಸಂದರ್ಭದಲ್ಲಿ ಏ.12ರಿಂದ 18ರವರೆಗಿನ ಶಬ್ದ ಮಾಲಿನ್ಯದ ಪ್ರಮಾಣ ಎಷ್ಟಿತ್ತು ಎಂಬುದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾಖಲಿಸಿದೆ. ಏ.16ರಂದು ಭಾನುವಾರ ಕನಿಷ್ಠ 61.5ಡಿಬಿ(ಎ)ರಷ್ಟು ದಾಖಲಾಗಿದ್ದರೆ, ಏ.17ರಂದು 66.6ಡಿಬಿ(ಎ)ದಾಖಲಾಗಿದೆ. ಸಾಮಾನ್ಯವಾಗಿ ದಿನದಲ್ಲಿ 50ಡಿಬಿ(ಎ) ಸಾಮಾನ್ಯ ಮಟ್ಟವಾಗಿರುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶದ ಬಗ್ಗೆ ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಇಲಾಖೆ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಗಿದ್ದು, ಜೂ.10 ಅಥವಾ 11ರಂದು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. – ಪಿ.ಸಿ.ರೇ, ಆಯುಕ್ತರು, ತೋಟಗಾರಿಕೆ ಇಲಾಖೆ. * ಸಂಪತ್ ತರೀಕೆರೆ