ಜ| ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾ. ವರುಣ್ ಸಿಂಗ್‌ರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಗೆ ಸೇರಿಸಲಾಗಿದೆ. ದಕ್ಷಿಣ ಭಾರತದಲ್ಲಿ ವಾಯುಪಡೆಯ ನಿರ್ವಹಣೆಯ ಎರಡು ಆಸ್ಪತ್ರೆಗಳಿವೆ. ಒಂದು ಕೊಯಮತ್ತೂರಿನಲ್ಲಿರುವ ಏರ್‌ಫೋರ್ಸ್ ಆಸ್ಪತ್ರೆ. ಮತ್ತೂಂದು, ಬೆಂಗಳೂರಿನಲ್ಲಿರುವ ಕಮಾಂಡ್ ಆಸ್ಪತ್ರೆ. ಇವೆರಡರಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕ್ಯಾ. ಸಿಂಗ್‌ರನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಉತ್ತರ .
ಸರ್ವವಿಧದ ಚಿಕಿತ್ಸೆ ಲಭ್ಯ: ಬೆಂಗಳೂರಿನ ಕಮಾಂಡ್ ಹಾಸ್ಪಿಟರ್ ಏರ್‌ಫೋರ್ಸ್ ಬೆಂಗಳೂರು (ಸಿಎಚ್‌ಎಎಫ್ಬಿ) ಆಸ್ಪತ್ರೆಗೆ ಸೇನಾ ವಲಯದಲ್ಲಿ ಭಾರೀ ಒಳ್ಳೆಯ ಹೆಸರಿದೆ. ಈ ಆಸ್ಪತ್ರೆಯಲ್ಲಿ ದೇಹಾರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಅತ್ಯುನ್ನತ ತಜ್ಞ ವೈದ್ಯರು ಲಭ್ಯವಿದ್ದು, ಪ್ರತಿಯೊಂದು ವಿಭಾಗದಲ್ಲೂ ತೃತೀಯ ಹಂತದ ಚಿಕಿತ್ಸೆಗೆ ಅವಕಾಶವಿದೆ. ಕಳೆದ ವರ್ಷ, ಅತ್ಯಾಧುನಿಕ ಹೃದಯ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಅನಾವರಣಗೊಳಿಸಲಾಗಿದೆ.
ನಾಲ್ಕು ಬಾರಿ ಪ್ರಶಸ್ತಿ: ಇಲ್ಲಿ ಅತ್ಯುನ್ನತ ವೈದ್ಯಕೀಯ ಸೇವೆಗಳಿಗಾಗಿ, ರೋಗಿಗಳ ಸುರಕ್ಷೆತಾ ಪಾಲನೆಗಾಗಿ ಈ ಆಸ್ಪತ್ರೆಗೆ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. 1991, 2004, 2009 ಹಾಗೂ 2011ರಲ್ಲಿ ಈ ಪ್ರಶಸ್ತಿಗಳು ಈ ಆಸ್ಪತ್ರೆಗೆ ಸಂದಿದೆ.
ಯಾರ್ಯಾರಿಗೆ ಚಿಕಿತ್ಸೆ?: ದಕ್ಷಿಣ ಭಾರತದ ಮೂರು ಸಶಸ್ತ್ರ ಪಡೆಗಳ ಯೋಧರು, ಅಧಿಕಾರಿಗಳು, ಅವರ ಹೆತ್ತವರು ಹಾಗೂ ಕುಟುಂಬದವರು, ನಿವೃತ್ತ ಯೋಧರು, ನಿವೃತ್ತ ಅಧಿಕಾರಿಗಳು ಹಾಗೂ ಅವರ ಕುಟುಂಬದವರಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಸುರಕ್ಷಾ ಕಾರ್ಯಕ್ರಮ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿ ಶ್ರೇಷ್ಠವಾದ ವ್ಯವಸ್ಥೆಯನ್ನು ಹೊಂದಿದ್ದು ಇತರ ಆಸ್ಪತ್ರೆಗಳಿಗೆ ಮಾದರಿಯೆನಿಸಿದೆ.
ಆಸ್ಪತ್ರೆಯ ಇತಿಹಾಸ: 1816ರಲ್ಲಿ ಬ್ರಿಟಿಷ್ ಪಡೆಗಳಲ್ಲಿನ ಯೋಧರಿಗಾಗಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ 50 ಹಾಸಿಗೆ ಸಾಮರ್ಥ್ಯವಿದ್ದ ಈ ಆಸ್ಪತ್ರೆಯನ್ನು 2ನೇ ಮಹಾಯುದ್ಧದ ಸಂದರ್ಭದಲ್ಲಿ 300 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಯಿತು. 1962ರಲ್ಲಿ ಈ ಸಾಮರ್ಥ್ಯವನ್ನು 602 ಹಾಸಿಗೆಗೆ ವಿಸ್ತರಿಸಲಾಯಿತು. 1968ರ ಮೇ 1ರಂದು ಭಾರತೀಯ ವಾಯುಪಡೆಯು ಇದರ ಜವಾಬ್ದಾರಿಯನ್ನು ವಹಿಸಿಕೊಂಡಿತು. 1977ರ ಡಿ. 2ರಂದು ಈ ಆಸ್ಪತ್ರೆಗೆ ಕಮಾಂಡ್ ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು.
1816 : ಆಸ್ಪತ್ರೆ ನಿರ್ಮಾಣ.
602 : ಹಾಸಿಗೆ ಸಾಮರ್ಥ್ಯ
4 ಬಾರಿ ಶ್ರೇಷ್ಠ ಆಸ್ಪತ್ರೆಯೆಂಬ ಹೆಗ್ಗಳಿಕೆ