Advertisement

ಕೆರೆಗಳ ಸುತ್ತ ಕ್ಯಾಮೆರಾ ಕಣ್ಗಾವಲಿಗೆ ಆದೇಶ

12:57 AM Jun 19, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸಿಟಿಜನ್‌ ಆ್ಯಕ್ಷನ್‌ ಗ್ರೂಪ್‌ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ಕೆರೆಗಳ ಸಂರಕ್ಷಣೆ ಹಾಗೂ ಪುನರುಜ್ಜೀವನದ ಬಗ್ಗೆ ನಾಗರಿಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೆರೆಗಳ ನೀರನ್ನು ಮಲೀನ ಮಾಡುವವರ ವಿರುದ್ಧ 1974ರ ಜಲ ಕಾಯ್ದೆ ಅನ್ವಯ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು ಎಂದು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ದೇವರ ಮೂರ್ತಿ ಅಥವಾ ವಿಗ್ರಹಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುವುದನ್ನು ತಡೆಯುವ ವಿಚಾರದಲ್ಲಿ ಬಿಬಿಎಂಪಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಮೂರ್ತಿಗಳ ವಿಸರ್ಜನೆಗೆ ಕೃತಕ ಕೆರೆಗಳನ್ನು ನಿರ್ಮಿಸಬೇಕು. ಆ ಸಂದರ್ಭದಲ್ಲೂ ಪರಿಸರದ ಅಂಶಗಳಿಗೆ ಆದ್ಯತೆ ನೀಡಬೇಕು.

ಕೃತಕ ಕೆರೆಗಳು ಚಿಕ್ಕದಾದರೆ, ಮೂರ್ತಿಗಳನ್ನು ಒಂದಡೆ ಸಂಗ್ರಹಿಸಿಟ್ಟು ಕ್ರಮೇಣ ಅದನ್ನು ವಿಸರ್ಜಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಕೇಂದ್ರ ಸರ್ಕಾರದ “ಘನತ್ಯಾಜ್ಯ ವಿಲೇವಾರಿ ನಿಯಮಗಳು-2016’ಕ್ಕೆ ಪೂರಕವಾಗಿ ಉಪನಿಯಮಗಳನ್ನು ಈವರೆಗೆ ರೂಪಿಸದ ರಾಜ್ಯ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ನಿಯಮಗಳ ಜಾರಿಯಾದ ಒಂದು ವರ್ಷದಲ್ಲಿ ಎಲ್ಲ ರಾಜ್ಯಗಳು ಉಪನಿಯಮಗಳನ್ನು (ಬೈ-ಲಾ) ರೂಪಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿತ್ತು.

Advertisement

ಆದರೆ, ರಾಜ್ಯ ಸರ್ಕಾರ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಅನ್ನುವುದರ ಬಗ್ಗೆ ಮುಂದಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡುವಂತೆ ಹೇಳಿದ ನ್ಯಾಯಪೀಠ, ಒಂದು ತಿಂಗಳಲ್ಲಿ ಬೈ-ಲಾ ಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next