Advertisement

ಬರುತ್ತಿದೆ ಹಬ್ಬಗಳ ಸಾಲು ಎಚ್ಚರಿಸುತ್ತಿದೆ ಸೋಂಕು

08:54 PM Aug 01, 2021 | Team Udayavani |

ಮಳೆಗಾಲ ಆರಂಭದ ಮೊದಲ ಹಬ್ಬ ನಾಗರಪಂಚಮಿ ಆ. 13ರಂದು ಆಚರಣೆಯಾಗುತ್ತಿದೆ. ಆ. 20ರಂದು ವರ ಮಹಾಲಕ್ಷ್ಮೀ ವ್ರತ, ಆ. 30ರಂದು ಶ್ರೀಕೃಷ್ಣ ಜನ್ಮಾಷ್ಟಮಿ- ಆ. 31 ರಂದು ಶ್ರೀಕೃಷ್ಣಲೀಲೋತ್ಸವ, ಸೆ. 10ರಂದು ಗಣೇಶ ಚತುರ್ಥಿ ಹಬ್ಬ ಬರಲಿದೆ.

Advertisement

ಇತ್ತ  ಕೊರೊನಾ ಎರಡನೆಯ ಅಲೆ ಅಬ್ಬರ ಕಡಿಮೆಯಾಗಿ ನಿಟ್ಟುಸಿರು ಬಿಡು ತ್ತಿದ್ದಂತೆ ಮಹಾರಾಷ್ಟ್ರ- ಕೇರಳದಲ್ಲಿ ಮೂರನೆಯ ಅಲೆ ಅಬ್ಬರ ಕಂಡುಬರುತ್ತಿದೆ. ಮೊದಲ ಸೋಂಕು ಕರಾವಳಿ ಭಾಗದಲ್ಲಿ ಒಳನುಸುಳಿದ್ದೇ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೂಲಕ. ಈ ಬಾರಿಯೂ ಇವೆರಡು ರಾಜ್ಯಗಳ ಗಡಿ ಸಂಚಾರ ಸ್ಥಗಿತಕ್ಕೆ ಸೂಚಿಸಲಾಗಿದೆ. ಆಗಸ್ಟ್‌ ಎರಡನೆಯ ವಾರದಲ್ಲಿ ಮೂರನೆಯ ಅಲೆಯ ವೇಗ ಆರಂಭವಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೂರ್‍ನಾಲ್ಕು ದಿನಗಳ ಹಿಂದೆ ಇದ್ದ ಶೇ. 2-3  ಪಾಸಿಟಿವಿಟಿ ದರ ಈಗ ಶೇ.3-4ಕ್ಕೇರಿದೆ. ಹೀಗೆ ಮುಂದುವರಿದರೆ ಮತ್ತೆ ಲಾಕ್‌ಡೌನ್‌ ಜಾರಿಗೆ ಬರಬಹುದು. ಏನಿದ್ದರೂ ಜನರ ಕೈಯಲ್ಲಿ ಲಾಕ್‌ಡೌನ್‌ ಸ್ಥಿತಿ ಇದೆ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ಮಾತನ್ನು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕುರಿತೂ ಮುಖ್ಯಮಂತ್ರಿಯವರು ಶನಿವಾರ ಜಿಲ್ಲಾಧಿಕಾರಿಯವರೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿಯೂ ಸೂಕ್ತ  ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನಾನುಸಾರ ಬಹುಸ್ತರದ ಕ್ರಮಗಳು ನಡೆಯಲಿದೆ.

ಒಂದೆಡೆ ಹಬ್ಬಗಳ ಆಚರಣೆ, ಇನ್ನೊಂದೆಡೆ ಕೊರೊನಾ ಮೂರನೆಯ ಅಲೆ ತಡೆಗೆ ಕ್ರಮಗಳು ಜತೆ ಜತೆಗೆ ಸಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾದರೆ ಹಬ್ಬಗಳ ಸಂಭ್ರಮಕ್ಕೆ ಕಡಿವಾಣ ಬೀಳಲಿದೆ. ಜನರು ಎಚ್ಚರಿಕೆ ಮರೆತು ಗುಂಪುಗೂಡಿ ಅಪಾಯ ತಾರಕಕ್ಕೇರಿದರೆ ನಮ್ಮ ಕಾಲಿಗೆ ನಾವೇ ಚಪ್ಪಡಿ ಏರಿಸಿದಂತೆ ಆಗುತ್ತದೆ. ಹೋದ ವರ್ಷ ಈ ಹಬ್ಬಗಳ ಕುರಿತು ಸರಕಾರದಿಂದ ನಿರ್ದೇಶನ ಬರುವಾಗ ವಿಳಂಬವಾಗಿತ್ತು. ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ನಿಯಮಗಳನ್ನು ಘೋಷಿಸಿದರೆ ಜನರಿಗೂ ಅನುಕೂಲವಾಗಲಿದೆ.

Advertisement

ನಾಗರಪಂಚಮಿಯಾದರೋ ವೈಯಕ್ತಿಕ ಮಟ್ಟದಲ್ಲಿ ಮುಗಿಯುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ವಿಶೇಷವಾಗಿ ಗಣೇಶ ಚತುರ್ಥಿ ಹಬ್ಬ ಹಾಗಲ್ಲ. ಸಾಕಷ್ಟು ಮುನ್ನ ತಯಾರಿ ನಡೆಸಬೇಕಾಗುತ್ತದೆ. ಕೊನೆ ಕ್ಷಣದಲ್ಲಿ ಸರಕಾರ ಜಿಲ್ಲಾಡಳಿತದ ಮೇಲೆ ನಿರ್ದೇಶನಗಳನ್ನು ಹೇರುವುದು, ಜಿಲ್ಲಾಡಳಿತ ಕೆಳಗಿನ ಸ್ತರದ ಅಧಿಕಾರಿಗಳ ಮೇಲೆ ನಿರ್ದೇಶನಗಳನ್ನು ಹೇರುತ್ತ ಹೋದರೆ ಉತ್ಸವಗಳನ್ನು ಹಮ್ಮಿಕೊಂಡ ಸಮಿತಿಗಳಿಗೆ ಉಭಯ ಸಂಕಟ ಆಗಲಿದೆ. ಆದ್ದರಿಂದ ಸಾಕಷ್ಟು ಮುಂಚಿತವಾಗಿಯೇ ನಿರ್ದೇಶನಗಳನ್ನು ನೀಡಬೇಕು. ಹೀಗಾದರೆ ಗಣೇಶೋತ್ಸವಗಳ ವೈಭವಗಳನ್ನು ಎಷ್ಟರ ಮಟ್ಟಿಗೆ ಹಮ್ಮಿಕೊಳ್ಳಬಹುದು ಎಂದು ಸಮಿತಿಯವರೂ ಈಗಲೇ ನಿರ್ಧಾರಕ್ಕೆ ಬರಲು ಅನುಕೂಲವಾಗುತ್ತದೆ. ಕೊನೆಯ ಕ್ಷಣದಲ್ಲಿ ಸರಕಾರ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಬದಲು ಸಾಕಷ್ಟು ಮುನ್ಸೂಚನೆ ಅರಿತು ಕಾರ್ಯಯೋಜನೆಗೆ ತಕ್ಕಂತೆ ನಿರ್ದೇಶನ ನೀಡಿದರೆ ಕೊರೊನಾ ನಿಯಂತ್ರಣದಲ್ಲಿ ಮಹತ್ವದ ಪಾತ್ರವಾಗಲಿದೆ. ಸರಕಾರದ ಆದ್ಯ ಕರ್ತವ್ಯಗಳಲ್ಲಿ ಇದೂ ಒಂದು.

-ಸಂ.

Advertisement

Udayavani is now on Telegram. Click here to join our channel and stay updated with the latest news.

Next