Advertisement

ಮಾರುಕಟ್ಟೆಗೆ ಬರುತ್ತಿದೆ ಆರೋಗ್ಯದಾಯೀ ದೇಸೀ ಶಾಲು

10:16 AM Mar 04, 2020 | mahesh |

ಉಡುಪಿ: ಆರೋಗ್ಯಕ್ಕೆ ಅತ್ಯುತ್ತಮವೆನಿಸಿದ ಕೈಮಗ್ಗದ ಉಡುಪಿ ಸೀರೆ ಪ್ರಚಾರಕ್ಕೆ ಬಂದು ಕೆಲವು ದಿನಗಳಾಗಿವೆ. ಇದುವರೆಗೆ ಯಂತ್ರದಿಂದ ತಯಾರಾಗಿರುವ ಸಮ್ಮಾನದ ಶಾಲು ಗಳಷ್ಟೇ ಮಾರುಕಟ್ಟೆಯಲ್ಲಿವೆ. ಇದೀಗ ಕೈಮಗ್ಗದ ಉಡುಪಿ ಶಾಲುಗಳನ್ನೂ ತಯಾರಿಸಲಾಗುತ್ತಿದೆ.

Advertisement

ಮಂಗಳೂರು ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ದೇಸೀ ಸಮ್ಮಾನದ ಶಾಲುಗಳನ್ನು ತಯಾರಿಸುತ್ತಿದೆ. ಈ ಸಂಘದಲ್ಲಿ ಎಂಟು ಕುಶಲಕರ್ಮಿಗಳು ಸೀರೆ, ಶಾಲುಗಳನ್ನು ತಯಾರಿಸುತ್ತಾರೆ. ಇವರಲ್ಲಿ ಯಶೋದಾ ಮತ್ತು ಸುಜ್ಯೋತಿ ಶಾಲುಗಳನ್ನು ತಯಾರಿಸುವ ಕುಶಲಕರ್ಮಿಗಳು. ಹತ್ತಿ ಬಟ್ಟೆಯ ಶಾಲುಗಳನ್ನು ನೈಸರ್ಗಿಕ ಬಣ್ಣದೊಂದಿಗೆ ತಯಾರಿಸಲಾಗುತ್ತಿದೆ. ಆಕರ್ಷಕ ಬಣ್ಣ ಬೇಕೆನ್ನುವವರಿಗಾಗಿ ಬೇರೆ ಬಣ್ಣಗಳನ್ನೂ ಕೊಡಲಾಗುತ್ತದೆ. ನೈಸರ್ಗಿಕ ಬಣ್ಣ, ಉತ್ಪನ್ನದ ಕುರಿತು ಇತ್ತೀಚಿಗೆ ತರಬೇತಿಯೂ ನಡೆದಿದೆ.

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಠಕ್ಕೆ ಬರುವ ಗಣ್ಯರಿಗೆ ನೀಡಲು 100 ಶಾಲುಗಳನ್ನು, 10 ಸೀರೆಗಳನ್ನು ಖರೀದಿಸಿದ್ದಾರೆ. ಇನ್ನೂ 400-500 ಶಾಲುಗಳು ಬೇಕೆಂದಿದ್ದಾರೆ. ಇತ್ತೀಚೆಗೆ ಕೈಮಗ್ಗದ ಸೀರೆಯನ್ನು ಪರ್ಯಾಯ ಶ್ರೀಗಳಿಂದ ಸ್ವೀಕರಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಅದನ್ನು ಶ್ಲಾ ಸಿ ಟ್ವೀಟ್‌ ಮಾಡಿದ್ದರು.

ಬ್ರಹ್ಮಕಲಶ, ವಾರ್ಷಿಕೋತ್ಸವಗಳಲ್ಲಿ ಕೈಮಗ್ಗದ ಶಾಲುಗಳನ್ನು ಬಳಸಿದರೆ ನೇಕಾರರ ಸ. ಸಂಘಗಳು ಮತ್ತೂಮ್ಮೆ ಗತವೈಭವಕ್ಕೆ ಮರಳುವುದು ನಿಶ್ಚಿತ.

ಕೈಮಗ್ಗ ಉದ್ಯಮದ ಸಮಸ್ಯೆ
ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಅದಮಾರು ಸ್ವಾಮೀಜಿಯವರು ಹೇಳಿದ್ದರಿಂದ ಸಮ್ಮಾನದ ಶಾಲುಗಳನ್ನು ತಯಾರಿಸಲು ಆರಂಭಿಸಿದ್ದೇವೆ. ಕಾರ್ಕಳದ ಕದಿಕೆ ಟ್ರಸ್ಟ್‌ನವರು ಬೆಂಬಲ ನೀಡುತ್ತಿದ್ದಾರೆ. ಎರಡು ಶಾಲುಗಳನ್ನು ಉತ್ಪಾದಿಸಿದರೆ ಅವರಿಗೆ ಸಿಗುವ ಮಜೂರಿ 200 ರೂ. ಒಂದು ಸೀರೆಯನ್ನು ತಯಾರಿಸಿದರೆ 400 ರೂ. ಮಜೂರಿ ಸಿಗುತ್ತದೆ. ಒಂದು ದಿನದಲ್ಲಿ ಒಂದು ಸೀರೆ ತಯಾರಿಸುವುದು ಕಷ್ಟ. ನಾವು ಹೆಚ್ಚಿನ ದರ ಹೇಳಿದರೆ ಗ್ರಾಹಕರು ಒಪ್ಪುವುದಿಲ್ಲ. ಇದು ನೇಕಾರಿಕೆ / ಕೈಮಗ್ಗ ಉದ್ಯಮಕ್ಕಿರುವ ತೊಂದರೆ.
– ಮಾಧವ ಶೆಟ್ಟಿಗಾರ್‌, ಆಡಳಿತ ನಿರ್ದೇಶಕರು, ತಾಳಿಪಾಡಿ ನೇಕಾರರ ಸಹಕಾರಿ ಸಂಘ, ಕಿನ್ನಿಗೋಳಿ.

Advertisement

ದೇಸೀ ಉತ್ಪನ್ನಗಳನ್ನು ಬೆಂಬಲಿಸೋಣ
ಆರೋಗ್ಯಕ್ಕೆ ಅನುಕೂಲವಾದ ದೇಸೀ ಉತ್ಪನ್ನಗಳನ್ನು ನಾವು ಬೆಂಬಲಿಸಿ ಉಳಿಸಬೇಕಾಗಿದೆ. ನಾವು ಸದ್ಯ ತಾಳಿಪಾಡಿ ಸಹಕಾರಿ ಸಂಘದವರಿಗೆ ಶಾಲು, ಸೀರೆಗಾಗಿ ಹೇಳಿದ್ದೇವೆ. ಶ್ರೀಕೃಷ್ಣ ಮಠದಲ್ಲಿ ಶೇ. 60ರಷ್ಟು ಶಾಲುಗಳನ್ನು ಕೈಮಗ್ಗದ ಉತ್ಪನ್ನಗಳಿಗೆ ಬದಲಾಯಿಸಿದ್ದೇವೆ. ಸಾರ್ವಜನಿಕರು ಕೂಡ ದೇಸೀ ಉತ್ಪನ್ನಗಳನ್ನು ಬೆಂಬಲಿಸಬೇಕು.
– ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ

ಶುದ್ಧ ಹತ್ತಿ ಬಟ್ಟೆಯಿಂದ ಚರ್ಮದ ಅಲರ್ಜಿ ಆಗುವುದಿಲ್ಲ. ಅಲರ್ಜಿ ಆಗುವುದು ಮುಖ್ಯವಾಗಿ ರಿಂಕಲ್‌ಫ್ರೀ (ಇಸ್ತ್ರಿ ಹಾಕದೆ ಬಳಸಬಹುದಾದ ಬಟ್ಟೆ) ಬಟ್ಟೆಗಳಿಂದ ಮತ್ತು ಕಲರ್‌ಗಳಿಗೆ ಹಾಕುವ ಡೈಗಳಿಂದ.
– ಡಾ| ಸತೀಶ್‌ ಪೈ ಬಿ., ಚರ್ಮರೋಗ ವಿಭಾಗ, ಕೆಎಂಸಿ ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next