Advertisement

ಕರಾವಳಿಗೂ ಬರುತ್ತಿದೆ ಇಸ್ರೇಲ್‌ ಮಾದರಿ ಕೃಷಿ

06:00 AM Jul 13, 2018 | |

ವಿಶೇಷ ವರದಿ- ಕುಂದಾಪುರ: ರಾಜ್ಯ ಸರಕಾರ ಬಜೆಟ್‌ನಲ್ಲಿ ಇಸ್ರೇಲ್‌ ಮಾದರಿ ಕೃಷಿ ಅನುಷ್ಠಾನಕ್ಕಾಗಿ 500 ಕೋ.ರೂ.ಗಳನ್ನು ಮೀಸಲಿಟ್ಟಿದೆ. ಆದರೆ ಕರಾವಳಿಯಲ್ಲಿ ಈಗಾಗಲೇ ಸದ್ದಿಲ್ಲದೇ ಇಸ್ರೇಲ್‌ ಮಾದರಿ ಕೃಷಿ ಅನುಷ್ಠಾನಕ್ಕೆ ಪ್ರಯೋಗ ಆರಂಭವಾಗಿದೆ. 

Advertisement

ಏನಿದು ಇಸ್ರೇಲ್‌ ಮಾದರಿ
ಕಡಿಮೆ ನೀರು ಬಳಸಿ ಕೃಷಿ ಮಾಡುವ ಮಾದರಿಯನ್ನು ಇಲ್ಲಿ ಪರಿಗಣಿಸಲಾಗಿದೆ. ಒಣಭೂಮಿಯಲ್ಲಿ ಆಧುನಿಕ ನೀರಾವರಿ ಪದ್ಧತಿ ಮೂಲಕ ನೀರು ಹನಿಸಿ ಅಧಿಕ ಇಳುವರಿ ಪಡೆಯುವ ಕ್ರಮ ಇದಾಗಿದೆ. ಇಸ್ರೇಲ್‌ನಲ್ಲಿ ಮರಳಿನ ಪ್ರಮಾಣ ಜಾಸ್ತಿ. ಇನ್ನುಳಿದ ಭಾಗದಲ್ಲಿ ಸುಣ್ಣದ ಕಲ್ಲು ಅಧಿಕ ಪ್ರಮಾಣದಲ್ಲಿದೆ. ಮಣ್ಣಿನ ಪ್ರಮಾಣ ಕಡಿಮೆ. ಆದ್ದರಿಂದ ಅವರು ಕಡಿಮೆ ಮಣ್ಣು, ಕಡಿಮೆ ನೀರು ಉಪಯೋಗಿಸಿ ಕೃಷಿ ಮಾಡುವಲ್ಲಿ ಸಿದ್ಧಹಸ್ತರು. ಜತೆಗೆ ಸಮುದ್ರದ ನೀರನ್ನು ಸಿಹಿನೀರಾಗಿ ಪರಿವರ್ತಿಸಲು ಈ ದೇಶ ಮರಳುಗಾಡು ದೇಶಗಳಂತೆಯೇ ಪ್ರಸಿದ್ಧ. 

ಅಸಾಧ್ಯವಾದ್ದೇನೂ ಅಲ್ಲ 
ಇಸ್ರೇಲ್‌ ಪದ್ಧತಿಯ ಕೃಷಿ ನಮ್ಮಲ್ಲಿ ಈಗಾಗಲೇ ಅನುಷ್ಠಾನವಾಗಿದೆ. ಪ್ಲಾಸ್ಟಿಕ್‌ ಟ್ಯೂಬ್‌ಗಳನ್ನು ಬಳಸಿ ತೋಟಗಾರಿಕಾ ಬೆಳೆಗಳನ್ನು ಈಗಾಗಲೇ ನಮ್ಮಲ್ಲಿ ಮಾಡಲಾಗುತ್ತಿದೆ. 2010ರಿಂದ ಇದು ರಾಜ್ಯದಲ್ಲಿ ಸರಕಾರದ ಮೂಲಕವೇ ಅಸ್ತಿತ್ವದಲ್ಲಿದೆ. ಇದರಿಂದ ಉತ್ಪನ್ನವೂ ಜಾಸ್ತಿ. ಬ್ರಹ್ಮಾವರದಲ್ಲಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂತಹ ಪ್ರಯೋಗ ಮಾಡಲಾಗಿದ್ದು 15 ದಿನದಲ್ಲಿ ಮೇವಿನ ಬೆಳೆ ಬೆಳೆಯಲಾಗುತ್ತಿದೆ. ಇಳುವರಿ ಕೂಡಾ ಅಧಿಕವಿದೆ. 

ಭತ್ತದ ಬೆಳೆ ಪ್ರಯೋಗ
ಕುಂದಾಪುರದ ಪಂಚಗಂಗಾವಳಿ ತೀರದಲ್ಲಿ ಹಾಗೂ ಉತ್ತರ ಕನ್ನಡದ ಅಘನಾಶಿನಿ ನದಿಯ ತೀರದಲ್ಲಿ ಭತ್ತದ ಬೆಳೆಯ ಪ್ರಯೋಗ ಈ ವರ್ಷ ಆರಂಭಿಸಲಾಗಿದೆ. ಗೋವಾ, ಪಂಜಾಬ್‌ ಮೊದಲಾದ ಕಡೆಯಿಂದ 70ರಿಂದ 80 ಭತ್ತದ ಮಾದರಿ ತಳಿಯನ್ನು ತಂದು ಈ ಮಳೆಗಾಲದಲ್ಲಿ ಅನುಕೂಲಕ್ಕೆ ತಕ್ಕಂತೆ ಬಿತ್ತಲಾಗಿದೆ. ಚೆನ್ನೈಯ ಎಂಎಸ್‌ ಸ್ವಾಮಿನಾಥನ್‌ ರೀಸರ್ಚ್‌ ಫೌಂಡೇಶನ್‌, ಶಿವಮೊಗ್ಗ ಕೃಷಿ ವಿವಿ, ಧಾರವಾಡ ಕೃಷಿ ವಿವಿ ಅವರಿಗೆ ರಾಜ್ಯ ಸರಕಾರ ಉಪ್ಪುನೀರಿನ ಸಮಸ್ಯೆ ಇರುವಲ್ಲಿ ಯಾವ ತಳಿಯ ಭತ್ತದ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದು ಅಧ್ಯಯನ ಮಾಡಲು ಅನುದಾನ ಬಿಡುಗಡೆ ಮಾಡಿದೆ. 2018 ಮಾರ್ಚ್‌ನಿಂದ ಯೋಜನೆ ಕಾರ್ಯಾರಂಭಿಸಿದ್ದು ಒಟ್ಟು ಮೂರು ವರ್ಷಗಳ ಕಾಲ ಅಧ್ಯಯನ ನಡೆಯಲಿದೆ. ಇದಾದ ನಂತರ ಬೀಟ್‌ರೂಟ್‌, ಬಾರ್ಲಿ, ತರಕಾರಿ ಮೊದಲಾದ ಬೆಳೆಯ ಕುರಿತೂ ಅಧ್ಯಯನ ನಡೆಯಲಿದೆ. ಇದು ರೈತರ ಪಾಲಿಗೆ ದೊಡ್ಡ ಪ್ರಯೋಜನ ತರಲಿದೆ.    

ಹೆಮ್ಮಾಡಿಯಲ್ಲಿ
ಉತ್ತರಕನ್ನಡದಲ್ಲಿ ಖ್ಯಾತಿ ಪಡೆದ ಕಗ್ಗ ಭತ್ತದ ತಳಿಯನ್ನು ಎರಡು ವರ್ಷ ಹಿಂದೆ ಹೆಮ್ಮಾಡಿಯ ಕಟ್ಟು ಎಂಬಲ್ಲಿ  ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ ಬೆಳೆದು ಯಶಸ್ವಿಯಾಗಿತ್ತು. ಉಪ್ಪು ನೀರಿನ ಸಮಸ್ಯೆ ಇರುವಲ್ಲಿ ಪ್ರಾಯೋಗಿಕವಾಗಿ ಎರಡು ಎಕರೆ ಪ್ರದೇಶದಲ್ಲಿ ಹೈದರಾಬಾದ್‌ನ ಐಸಿಆರ್‌ಐಎಸ್‌ಎಟಿ ಮಾರ್ಗದರ್ಶನದಲ್ಲಿ ರಾಜ್ಯ ಸರಕಾರದ ಭೂ ಸಮೃದ್ಧಿ ಯೋಜನೆಯಲ್ಲಿ ಬೆಳೆದ ಭತ್ತ ಉತ್ತಮ ಫ‌ಸಲು ನೀಡಿದ್ದು ಉಪ್ಪು  ನೀರಿನ ತೊಂದರೆ ಎದುರಿಸುವ ಶಕ್ತಿ ಹೊಂದಿದೆ ಎಂದು  ಸಾಬೀತಾಗಿತ್ತು. 

Advertisement

ಏನು ಬೇಡಿಕೆ
ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿ ಕರಾವಳಿಯಲ್ಲಿ ಸಮುದ್ರದ ಆಸು ಪಾಸು, ಸಮುದ್ರಕ್ಕಿಂತ ಸುಮಾರು 10-15 ಕಿಮೀ.ವರೆಗೂ ನದಿಯಲ್ಲಿ  ಉಪ್ಪುನೀರು, ಹಿನೀರು ಇರುತ್ತದೆ. 

ಇದರಿಂದ ಕೃಷಿ ಮಾಡಲು ಕಷ್ಟ. ಭತ್ತ, ಅಡಿಕೆ, ತೆಂಗು ಸೇರಿದಂತೆ ಉಪ್ಪುನೀರು ಕೃಷಿಗೆ ಯೋಗ್ಯವಾಗಿರದೇ ನದಿಯಲ್ಲಿನ ಉಪ್ಪು ನೀರು ಕೃಷಿಗೆ ನುಗ್ಗಿ ಹಾನಿಯಾಗುವುದೂ ಇದೆ. ಆದ್ದರಿಂದ ಇಲ್ಲಿರುವ ಕಡಿಮೆ ಸಿಹಿನೀರನ್ನು ಬಳಸಿಕೊಂಡು ಕೃಷಿ ಮಾಡುವ ಆಧುನಿಕ ಮಾಹಿತಿ ಹಾಗೂ ಅದರ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ.  

ಪ್ರತ್ಯೇಕ ಪ್ಯಾಕೇಜ್‌ಗೆ ಒತ್ತಾಯ
ಇಸ್ರೇಲ್‌ ಮಾದರಿಯಂತೆ ಉಪ್ಪು ನೀರಿನ ಪ್ರದೇಶದ ಬೆಳೆಗಳ ಉತ್ತೇಜನಕ್ಕೂ ಹೆಮ್ಮಾಡಿ ಸೇರಿದಂತೆ ಈ ಭಾಗ ಅತ್ಯುತ್ತಮ ಪ್ರದೇಶವಾಗಿದೆ. ಇಲ್ಲಿಗೆ ಪ್ರತ್ಯೇಕ ಪ್ಯಾಕೇಜ್‌ ನೀಡಿ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಲು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸುತ್ತೇನೆ.
 - ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು 

ಕೃಷಿ ವಿನಿಮಯ ಅಗತ್ಯ 
ನಾವು ಇಸ್ರೇಲ್‌ಗೆ ಕೃಷಿ ಅಧ್ಯಯನ ಪ್ರವಾಸ ಮಾಡಿದಾಗ ಕಂಡಂತೆ,  ಅಲ್ಲಿ ಒಮ್ಮೆ ಬಳಕೆ ಮಾಡಿದ ನೀರನ್ನು 6 ಬಾರಿ ಮರು ಬಳಕೆ ಮಾಡಲಾಗುತ್ತದೆ. ಹಣ್ಣು ಹಂಪಲು, ತರಕಾರಿ, ಖರ್ಜೂರ, ಗೋಧಿ ಇತ್ಯಾದಿ ಬೆಳೆಸುತ್ತಾರೆ. ನಮ್ಮಲ್ಲಿಂದ ಕೊಂಡೊಯ್ದ ಅಡಿಕೆ ಅಲ್ಲಿ ಈಗ ಮೊಳಕೆ ಬಂದಿದೆಯಂತೆ. ಇಂತಹ ಕೃಷಿ ವಿನಿಮಯ ಕೂಡಾ ಅಗತ್ಯವಿದೆ. 
 - ಗಜಾನನ ವಝೆ, ಪ್ರಗತಿಪರ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next