Advertisement

ಶತ್ರುನಾಶಕ್ಕೆ ಬರಲಿದೆ ಮಾನವ ರಹಿತ ಸೋಲಾರ್‌ ವಿಮಾನ

03:45 AM Feb 17, 2017 | Team Udayavani |

ಬೆಂಗಳೂರು: ಪರಿಸರ ಸ್ನೇಹಿ ವಿಮಾನಗಳ ತಯಾರಿಕೆಗೆ ಮುಂದಾಗಿರುವ ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಮಾನವರಹಿತ ಸೌರವಿದ್ಯುತ್‌ ಚಾಲಿತ ವಿಮಾನ
ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದಾರೆ. ಡ್ರೋಣ್‌ ಸೇರಿ ಶತ್ರುಗಳ ಮೇಲೆ ಕಣ್ಗಾವ ಲಿಡಲು ಇತ್ತೀಚಿನ ದಿನಗಳಲ್ಲಿ ಮಾನವರಹಿತ ವಿಮಾನಗಳ ಹಾರಾಟ ಹೆಚ್ಚು ಪ್ರಚಲಿತದಲ್ಲಿದೆ. ಈ ದಿಸೆಯಲ್ಲಿ ಡಿಆರ್‌ಡಿಒ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾನವರಹಿತ ಹಾಗೂ ಸೌರವಿದ್ಯುತ್‌ ಚಾಲಿತ ವಿಮಾನಗಳನ್ನು ಆಗಸಕ್ಕೆ ಬಿಡಲು ನಿರ್ಧರಿಸಿದ್ದಾರೆ.

Advertisement

ಡಿಆರ್‌ಡಿಒ ಬಳಿ ಈಗಿರುವ ಮಾನವರಹಿತ ವಿಮಾನಗಳು 24ರಿಂದ 36 ಗಂಟೆಗಳ ಕಾಲ ನಿರಂತರ ಹಾರಾಟ ನಡೆಸುತ್ತಿವೆ. ಅವುಗಳಲ್ಲಿರುವ ಇಂಧನದ ಟ್ಯಾಂಕ್‌ ಸಾಮರ್ಥ್ಯವೇ ಅಷ್ಟು. ಹೀಗಾಗಿ, ವಿಮಾನಗಳ ರೆಕ್ಕೆಗಳ ಮೇಲೆಯೇ
ಸೋಲಾರ್‌ ಪ್ಯಾನೆಲ್‌ ಅಳವಡಿಸಿ, ಅವುಗಳ ಸಹಾಯದಿಂದ ಸೂರ್ಯನ ಕಿರಣಗಳನ್ನು ಇಂಧನವಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ವಿಮಾನಗಳಲ್ಲಿ ಸುಮಾರು 2 ಕಿ.ವ್ಯಾ.ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ತಿಂಗಳುಗಟ್ಟಲೆ ನಿರಂತರವಾಗಿ ಈ ವಿಮಾನ ಕಣ್ಗಾವಲು ಇಡಲಿದೆ ಎಂದು ಡಿಆರ್‌ಡಿಒ ವಿಜ್ಞಾನಿ ಎಂ.ಹರಿಪ್ರಸಾದ್‌ “ಉದಯವಾಣಿ’ಗೆ ತಿಳಿಸಿದರು.

ಪರಿಸರ ರಕ್ಷಣೆ: ವಿಮಾನಗಳ ಹಾರಾಟ ದಿಂದ ಸಾಕಷ್ಟು ಪ್ರಮಾಣದ ಇಂಧನ ವ್ಯಯವಾಗುತ್ತಿದೆ. ಮತ್ತೂಂದು ರೀತಿಯಲ್ಲಿ ವಾಯು ಮಾಲಿನ್ಯವೂ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿ ಸರ ರಕ್ಷಣೆ ಜತೆಗೇ ದೇಶದ ಗಡಿ ರಕ್ಷಣೆ ಮಾಡುವ ಪರಿಸರ ಸ್ನೇಹಿ ವಿಮಾನಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. 25 ರಿಂದ 30 ಕೆಜಿಯಷ್ಟು ಭಾರದ ಉಪಕರಣಗಳನ್ನು ಹೊತ್ತು ಮೇಲೆ ಹೋಗುವ ಈ ಚಾಲಕ ರಹಿತ ವಿಮಾನಗಳು, ಆಗಸದಲ್ಲಿ ಸಾಕಷ್ಟು ಎತ್ತರಕ್ಕೆ ಹಾರಬಲ್ಲವು. ಅಷ್ಟೇ ಅಲ್ಲ, ಎಲ್ಲ ಪ್ರಕಾರದ ವಾತಾವರಣದಲ್ಲೂ ಈ ವಿಮಾನಗಳು ಕಾರ್ಯಾಚರಣೆ ನಡೆಸಬಲ್ಲವು. ಹಗಲು ಸೂರ್ಯನ ಕಿರಣಗಳನ್ನು ಇಂಧನವಾಗಿ ಪರಿವರ್ತಿಸಿ, ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳುತ್ತವೆ. ರಾತ್ರಿ ಅವುಗಳ ಸಹಾಯದಿಂದ ಹಾರಾಟ ನಡೆಸುತ್ತವೆ ಎಂದು ತಿಳಿಸಿದರು. ಈ ಪ್ರಾಜೆಕ್ಟ್ಗಾಗಿ ಕೇಂದ್ರ ಸರ್ಕಾರದಿಂದ ಯಾವುದೇ ಹಣ
ಮಂಜೂರಾಗಿಲ್ಲ. ಈ ಸಂಶೋಧನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರಕ್ಕೆ ಈಗಷ್ಟೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

5 ವರ್ಷ ಆಗಸದಲ್ಲಿ ಹಾರಾಟ: ಗೂಗಲ್‌ ಮತ್ತು ಫೇಸ್‌ಬುಕ್‌ ಕಂಪನಿಗಳು ಐದು ವರ್ಷ ಗಟ್ಟಲೆ ಆಗಸದಲ್ಲಿ ನಿರಂತರವಾಗಿ ಹಾರಾಟ ನಡೆಸುವಂತಹ ಮಾನವರಹಿತ ವಿಮಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಈ
ಮಟ್ಟಿಗೆ ಡಿಆರ್‌ಡಿಒದಿಂದ ಸಾಧ್ಯವಾಗದಿದ್ದರೂ, ತಿಂಗಳುಗಟ್ಟಲೆ ಆಗಸದಲ್ಲಿ ಕಣ್ಗಾವಲಿಡುವ ಸೌರವಿದ್ಯುತ್‌ ಚಾಲಿತ ವಿಮಾನ ತಯಾರಿಸಲು ಉದ್ದೇಶಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ಚಿತ್ರದುರ್ಗದಲ್ಲಿ ಪರೀಕ್ಷೆ: ಈಗಾಗಲೇ ಮುಂದುವರಿದ ದೇಶಗಳಲ್ಲಿ ಮಾನವರಹಿತ ವಿಮಾನಗಳ ಹಾರಾಟ ಇದೆ. ಆದರೆ, ನಮ್ಮ ಉದ್ದೇಶ ದೇಶೀಯ ಮಾನವರಹಿತ ವಿಮಾನ ಗಳನ್ನು ಅಭಿವೃದ್ಧಿಪಡಿಸಿ, ಸಣ್ಣ-ಪುಟ್ಟ ದೇಶಗಳಿಗೆ
ಪರಿಚಯಿಸುವುದಾಗಿದೆ. ಸಣ್ಣ ದೇಶಗಳ ಬೇಡಿಕೆಗಳಿಗೆ ತಕ್ಕಂತೆ ಸಾವಿರಾರು ಅಡಿ ಎತ್ತರದವರೆಗೆ ಹಾರಾಟ ನಡೆಸುವ, ಮತ್ತಷ್ಟು ಮುಂದುವರಿದ ತಂತ್ರಜ್ಞಾನಗಳನ್ನು ಒಳಗೊಂಡ ವಿಮಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

Advertisement

ಈಗಾಗಲೇ ಇಂತಹ ವಿಮಾನಗಳನ್ನು ಚಿತ್ರ ದುರ್ಗದ ಡಿಆರ್‌ಡಿಒ ಪ್ರದೇಶದಲ್ಲಿ ಪರೀಕ್ಷಿಸಿ ಯಶಸ್ವಿ ಕೂಡ ಆಗಿದ್ದೇವೆ ಎಂದು ಡಿಆರ್‌ಡಿಒ ವಿಜ್ಞಾನಿ ಎಂ.ಹರಿಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next