ಆತನ ಉದ್ದೇಶ ಬೇರೇಯೇ ಇರುತ್ತದೆ. ಆ ತರಹದ ಒಂದು ಸನ್ನಿವೇಶದಲ್ಲಿ ತಾನು ಸಿಲುಕಿಕೊಳ್ಳುತ್ತೇನೆ ಮತ್ತು ಮುಂದೆ ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತೇನೆ ಎಂದು ಆತ ಕನಸು ಮನಸಿನಲ್ಲೂ ಅಂದುಕೊಂಡಿರುವುದಿಲ್ಲ. ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯಬೇಕೆಂಬ ಯಾವ ನಿಯಮವೂ ಇಲ್ಲ. ಅದರಂತೆ ನಾಯಕ ಸನ್ನಿವೇಶವೊಂದರಲ್ಲಿ ನಾಯಕಿಯ ಮನೆ ಸೇರಿಬಿಡುತ್ತಾನೆ. ಅಲ್ಲಿಂದ ಫ್ಯಾಮಿಲಿ ಡ್ರಾಮಾ ಶುರುವಾಗುತ್ತದೆ.
ಇಷ್ಟು ಹೇಳಿದ ಮೇಲೆ ಮುಂದಿನ ಒಂದಷ್ಟು ಘಟನೆಗಳನ್ನು ನೀವು ಊಹಿಸಿಕೊಳ್ಳಬಹುದು. ಏಕೆಂದರೆ ನಾಯಕಿಯ ಮನೆಗೆ ನಾಯಕ ಸೇರಿಕೊಂಡರೆ ಅಲ್ಲಿ ಏನೇನೂ ಡ್ರಾಮಾಗಳು ನಡೆಯುತ್ತವೆ ಎಂಬುದನ್ನು ಈಗಾಗಲೇ ಕೆಲವು ತೆಲುಗು, ಕನ್ನಡ ಸಿನಿಮಾಗಳಲ್ಲಿ ಪ್ರೇಕ್ಷಕ ನೋಡಿದ್ದಾನೆ. ಹಾಗಂತ “ಆರೆಂಜ್’ನಲ್ಲಿ ಎಲ್ಲವೂ ಪ್ರೇಕ್ಷಕ ಊಹಿಸಿಕೊಂಡಂತೆ ನಡೆಯುವುದಿಲ್ಲ. ಸಾಕಷ್ಟು ಟ್ವಿಸ್ಟ್-ಟರ್ನ್ಗಳೊಂದಿಗೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್‌ರಾಜ್.
ಇಡೀ ಸಿನಿಮಾದಲ್ಲಿ ಎದ್ದು ಕಾಣುವುದು ಕಾಮಿಡಿ. ಸಂಪೂರ್ಣ ಕಥೆಯನ್ನು ಹಾಸ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ರಾಜ್ ಉದ್ದೇಶ ಪ್ರೇಕ್ಷಕ ಕ್ಷಣ ಕ್ಷಣಕ್ಕೂ ನಗುತ್ತಿರಬೇಕು, ಹೆಚ್ಚು ಗಂಭೀರವಾಗಿ ಸಿನಿಮಾ ನೋಡಬಾರದು ಎಂಬುದು. ಅದಕ್ಕೆ ತಕ್ಕಂತಹ ಕಥೆ ಮಾಡಿಕೊಂಡು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲೊಂದು ಲವ್‌ಸ್ಟೋರಿ ಇದ್ದರೂ ಅದು ಹಾಸ್ಯದ ಮಧ್ಯೆ ಕಳೆದು ಹೋಗಿದೆ. ಮೊದಲೇ ಹೇಳಿದಂತೆ ಇಲ್ಲಿ ತೀರಾ ಹೊಸದು ಎನ್ನುವಂತಹ ಕಥೆಯಿಲ್ಲ.
ಆದರೆ, ಒಂದು ಸಿಂಪಲ್ ಕಥೆಯನ್ನು ಲವಲವಿಕೆಯಿಂದ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಒಂದು ಕಮರ್ಷಿಯಲ್ ಸಿನಿಮಾಕ್ಕೆ ಏನು ಬೇಕು ಎಂಬುದು ಪ್ರಶಾಂತ್ ರಾಜ್‌ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿಯೇ “ಆರೆಂಜ್’ನಲ್ಲಿ ಕಾಮಿಡಿ, ಕಲರ್‌ಫುಲ್ ಸಾಂಗ್, ಅದ್ಭುತವಾದ ಲೊಕೇಶನ್, ಪಂಚಿಂಗ್ ಡೈಲಾಗ್, ಜಬರ್ದಸ್ತ್ ಫೈಟ್ … ಎಲ್ಲವನ್ನು ಇಟ್ಟಿದ್ದಾರೆ. ಹಾಗಾಗಿ, ಪ್ರೇಕ್ಷಕ ಕಥೆಗಿಂತ ಇವುಗಳನ್ನು ಕಣ್ತುಂಬಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ತೋರಿಸಬಹುದು ಎಂಬ ಲೆಕ್ಕಾಚಾರ ನಿರ್ದೇಶಕರದು.
ಗಣೇಶ್ ನಾಯಕರಾಗಿರುವ ಸಿನಿಮಾದಲ್ಲಿ ಸಾಧುಕೋಕಿಲ ಅವರಿಗೆ ಪ್ರಮುಖ ಪಾತ್ರವಿರುತ್ತದೆ ಮತ್ತು ಸಿನಿಮಾದುದ್ದಕ್ಕೂ ಅವರು ಸಾಗಿಬರುತ್ತಾರೆಂಬುದು ಈಗಾಗಲೇ ಸಾಬೀತಾಗಿದೆ. ಪ್ರಶಾಂತ್‌ರಾಜ್ ಕೂಡಾ ಅವರಿಬ್ಬರ ನಡುವೆ ಸಾಕಷ್ಟು ದೃಶ್ಯಗಳನ್ನಿಟ್ಟು ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಿದ್ದಾರೆ. ಇಡೀ ಸಿನಿಮಾವನ್ನು ಹೊತ್ತು ಮುಂದೆ ಸಾಗಿದವರು ಗಣೇಶ್. ಪ್ರತಿ ದೃಶ್ಯಗಳಲ್ಲೂ ಗಣೇಶ್ ನಿಮಗೆ ಇಷ್ಟವಾಗುತ್ತಾ ಹೋಗುತ್ತಾರೆ.
ಸಿನಿಮಾವನ್ನು ಲವಲವಿಕೆಯಿಂದ ಇಡುವಲ್ಲಿ ಅವರ ಪಾತ್ರ ಇಲ್ಲಿ ಮಹತ್ವದ್ದು. ಅದು ಬಿಟ್ಟರೆ ನಾಯಕಿ ಪ್ರಿಯಾ ಆನಂದ್ ಹೆಚ್ಚೇನು ಗಮನ ಸೆಳೆಯೋದಿಲ್ಲ. ಬದಲಿಗೆ ಸಾಧುಕೋಕಿಲ ಅವರೇ ಹೆಚ್ಚು ತೆರೆ ಆವರಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಅವಿನಾಶ್, ರವಿಶಂಕರ್ ಗೌಡ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಇಷ್ಟವಾಗುತ್ತವೆ. ಯಾವುದೇ ತಲೆಬಿಸಿ ಇಲ್ಲದೇ ಖುಷಿಯಿಂದ ನಗಬೇಕೆಂಬ ಉದ್ದೇಶವಿದ್ದರೇ ನೀವು “ಆರೆಂಜ್’ ನೋಡಲಡ್ಡಿಯಿಲ್ಲ.
ಚಿತ್ರ: ಆರೆಂಜ್
ನಿರ್ಮಾಣ: ನಿಮ್ಮ ಸಿನಿಮಾ
ನಿರ್ದೇಶನ: ಪ್ರಶಾಂತ್ ರಾಜ್
ತಾರಾಗಣ: ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ಅವಿನಾಶ್, ರಂಗಾಯಣ ರಘು ಮತ್ತಿತರರು.
* ರವಿಪ್ರಕಾಶ್ ರೈ